ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಡಿ.ಸಿ ವಿರುದ್ಧ ಆಕ್ರೋಶ; ಹೋರಾಟಗಾರರು ಪೊಲೀಸ್ ವಶಕ್ಕೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಿಷೇಧಕ್ಕೆ ವಿರೋಧ; ಹೋರಾಟಗಾರರಿಂದ ರಸ್ತೆ ತಡೆ
Published : 10 ಸೆಪ್ಟೆಂಬರ್ 2024, 6:29 IST
Last Updated : 10 ಸೆಪ್ಟೆಂಬರ್ 2024, 6:29 IST
ಫಾಲೋ ಮಾಡಿ
Comments

ರಾಮನಗರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ಇತ್ತೀಚೆಗೆ ಹೊರಡಿಸಿರುವ ನಿಷೇಧಾಜ್ಞೆ ಹಿಂಪಡೆಯುವುದು ಸೇರಿದಂತೆ, ತಮ್ಮ 32 ಬೇಡಿಕೆಗಳನ್ನು ಈಡೇರಿಸುವಂತೆ ಕಚೇರಿ ಪ್ರವೇಶದ್ವಾರದ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದ ರೈತಪರ, ದಲಿತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ರೈತ ಸಂಘದ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಬೆಳಿಗ್ಗೆ ಜಮಾಯಿಸಿದ ಹೋರಾಟಗಾರರು, ‘ತೊಲಗಲಿ ತೊಲಗಿ ಜಿಲ್ಲಾಧಿಕಾರಿ ತೊಲಗಲಿ’ ಎಂದು ವಿರುದ್ಧ ಘೋಷಣೆ ಕೂಗುತ್ತಾ ಪ್ರವೇಶದ್ವಾರದತ್ತ ಬಂದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪ್ರವೇಶದ್ವಾರದ ಎದುರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಯಾರೂ ಒಳಗೆ ಪ್ರವೇಶಿಸದಂತೆ ತಡೆದರು. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಪ್ರವೇಶದ್ವಾರದ ಎದುರಿನ ರಸ್ತೆ ತಡೆದು ಧರಣಿ ಕುಳಿತರು.

‘ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಹೋರಾಟಗಾರರ ಕ್ಷಮೆ ಕೇಳಿ, ನಿಷೇಧಾಜ್ಞೆ ಆದೇಶ ಹಿಂಪಡೆಯಬೇಕು. ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು. ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು. ಮಧ್ಯಾಹ್ನವಾದರೂ ಜಿಲ್ಲಾಧಿಕಾರಿ ಸೇರಿದಂತೆ ಯಾವ ಅಧಿಕಾರಿಗಳು ಸಹ, ಧರಣಿ ಸ್ಥಳಕ್ಕೆ ಬಾರಲಿಲ್ಲ.

ಇದರಿಂದ ರೊಚ್ಚಿಗೆದ್ದ ಹೋರಾಟಗಾರರು, ಸ್ಥಳಕ್ಕೆ ಊಟ ತರಿಸಿಕೊಂಡು ಸೇವಿಸಿ ಧರಣಿ ಮುಂದುವರಿಸಲು ತೀರ್ಮಾನಿಸಿದರು. ಅಷ್ಟೊತ್ತಿಗಾಗಲೇ ನಿಧಾನವಾಗಿ ಹನಿಯುತ್ತಿದ್ದ ಮಳೆ ಜೋರಾಯಿತು. ಪೊಲೀಸರು ಮನವೊಲಿಕೆಗೂ ಜಗ್ಗದ ಹೋರಾಟಗಾರರು ಮಳೆಯಲ್ಲೇ ಧರಣಿ ಮುಂದುವರಿಸಿದರು.

ಆಗ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು 2 ಕೆಎಸ್ಆರ್‌ಟಿಸಿ ಬಸ್ಸು ಹಾಗೂ 3 ಪೊಲೀಸ್ ವಾಹನಗಳಿಗೆ ಹತ್ತಿಸಿದರು. ಪ್ರತಿರೋಧ ತೋರಿದವರನ್ನು ಎತ್ತಿ ಒಳಕ್ಕೆ ತುಂಬಿದರು. ಕೆಲವರು ಪೊಲೀಸರಿಂದ ತಪ್ಪಿಸಿಕೊಂಡು ಸಮೀಪದ ಅಂಗಡಿಗಳಲ್ಲಿ ಆಶ್ರಯ ಪಡೆದರು. ರಾಮನಗರ ಮತ್ತು ಚನ್ನಪಟ್ಟಣದ ವಿವಿಧೆಡೆ ಹೋರಾಟಗಾರರನ್ನು ಸಂಜೆಯವರೆಗೆ ಇಟ್ಟುಕೊಂಡಿದ್ದ ಪೊಲೀಸರು, ನಂತರ ಬಿಟ್ಟು ಕಳಿಸಿದರು.

ಅಹಿತರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ರಾಮಚಂದ್ರಯ್ಯ, ಡಿವೈಎಸ್ಪಿಗಳಾದ ದಿನಕರ ಶೆಟ್ಟಿ, ಗಿರಿ, ಪ್ರವೀಣ್‌ಕುಮಾರ್ ಸೇರಿದಂತೆ 25ಕ್ಕೂ ಹೆಚ್ಚು ಅಧಿಕಾರಿಗಳು, 50ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿಲ್ಲಿದ್ದರು. ಡಿ.ಸಿ ಕಚೇರಿ ಎದುರಿನ ರಸ್ತೆಯಲ್ಲಿ ಧರಣಿನಿರತರು ಕುಳಿತಿದ್ದರಿಂದ, ಪಕ್ಕದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರೈತಸಂಘದ ರಾಜ್ಯ ಕಾರ್ಯದರ್ಶಿ ಪೂರ್ಣಚ್ಚ, ಬೆಂಗಳೂರು ಜಿಲ್ಲಾಧ್ಯಕ್ಷ ಚಂದ್ರು, ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ, ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ಪುಟ್ಟಸ್ವಾಮಿ, ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ರಮ್ಯ, ನವ ನಿರ್ಮಾಣ ಸೇನೆ ನರಸಿಂಹಮೂರ್ತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ನೀಲೇಶ್ ಗೌಡ, ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಶಿವುಗೌಡ, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ರಾಜು, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕೆಆರ್‌ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಮೂಲನಿವಾಸಿ ಕಾವಲುಪಡೆಯ ರಾಜ್ ಮೌರ್ಯ, ದಲಿತ ವಿಧ್ಯಾರ್ಥಿ ಪರಿಷತ್‌ನ ಗೋವಿಂದರಾಜು, ಸಮತಾ ಸೈನಿಕದಳದ ಸುರೇಶ್, ಅಂಬೇಡ್ಕರ್ ಸೇನೆಯ ಸಾಗರ್ ಹಾಗೂ ಇತರರು ಇದ್ದರು.

ಸುರಿಯುವ ಮಳೆಯನ್ನೂ ಲೆಕ್ಕಿಸದೆ ಧರಣಿ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಧರಣಿ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು
ಧರಣಿನಿರತ ಹೋರಾಟಗಾರರನ್ನು ಪೊಲೀಸರು ಮಳೆಯಲ್ಲೇ ವಶಕ್ಕೆ ಪಡೆದು ಪೊಲೀಸ್ ವಾಹನಕ್ಕೆ ತುಂಬಿಸಿದರು
ಧರಣಿನಿರತ ಹೋರಾಟಗಾರರನ್ನು ಪೊಲೀಸರು ಮಳೆಯಲ್ಲೇ ವಶಕ್ಕೆ ಪಡೆದು ಪೊಲೀಸ್ ವಾಹನಕ್ಕೆ ತುಂಬಿಸಿದರು
ಶೌಚಕ್ಕೂ ಬಿಡದ ಪೊಲೀಸರು; ವಾಗ್ವಾದ
ಧರಣಿನಿರತ ಮಹಿಳಾ ಹೋರಾಟಗಾರರು ಶೌಚಾಲಯಕ್ಕೆ ಹೋಗಲು ಪೊಲೀಸರು ಅವಕಾಶ ನೀಡಬೇಕು ಎಂದು ಮುಖಂಡರು ಪೊಲೀಸರಿಗೆ ಮನವಿ ಮಾಡಿದರು. ಅದಕ್ಕೆ ಪೊಲೀಸರು ನಿರಾಕರಿಸಿದಾಗ ಬಲವಂತವಾಗಿ ಒಳಕ್ಕೆ ಹೋಗಲು ಯತ್ನಿಸಿದರು. ಆಗ ಪೊಲೀಸರು ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಆಗ ಹೋರಾಟಗಾರರು ಪೊಲೀಸರ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇಂದು ಉಸ್ತುವಾರಿ ಸಚಿವರ ಭೇಟಿ ತಮ್ಮನ್ನು ವಶಕ್ಕೆ ಪಡೆದು ಇಟ್ಟಿದ್ದ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಹೋರಾಟಗಾರರು ಜಿಲ್ಲಾಧಿಕಾರಿ ನಡೆ ವಿರೋಧಿಸಿ ಮಂಗಳವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ‘ನಿಷೇಧಾಜ್ಞೆ ಆದೇಶ ಹಿಂಪಡೆಯುವುದು ಡಿಸಿ ವರ್ಗಾವಣೆ ಹಾಗೂ ರೈತರ 32 ಬೇಡಿಕೆಗಳ ಈಡೇರಿಕೆಗೆ ಸಚಿವರಲ್ಲಿ ಮನವಿ ಮಾಡಲಾಗುವುದು. ಪೂರಕವಾಗಿ ಸ್ಪಂದಿಸದಿದ್ದರೆ ಮತ್ತೆ ಧರಣಿ ಮುಂದುವರಿಸಲಾಗುವುದು’ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಸಲಹೆಗಾರ ಕುಮಾರಸ್ವಾಮಿ ತಿಳಿಸಿದರು.

ಯಾರು ಏನಂದರು?

‘ಕಚೇರಿ ಅವರಪ್ಪನ ಆಸ್ತಿಯೇ?

ನಮ್ಮ ಹಕ್ಕಗಾಗಿ ಪ್ರತಿಭಟಿಸಲು ಸಂವಿಧಾನವೇ ಅವಕಾಶ ಕೊಟ್ಟಿರುವಾಗ ಜಿಲ್ಲಾಧಿಕಾರಿ ಕಚೇರಿ ಎದುರು ಬಾರದಂತೆ ಆದೇಶ ಮಾಡಲು ಆ ಕಚೇರಿ ಏನು ಯಶವಂತ್ ವಿ. ಗುರುಕರ್ ಅವರ ಅಪ್ಪನ ಮನೆ ಆಸ್ತಿಯೇ? ಜಿಲ್ಲಾಧಿಕಾರಿ ಜನಸೇವಕನೇ ಹೊರತು ಸರ್ವಾಧಿಕಾರಿ ಅಲ್ಲ.

– ಬಡಗಲಪುರ ನಾಗೇಂದ್ರ ರಾಜ್ಯಾಧ್ಯಕ್ಷ ರೈತ ಸಂಘ

‘ಪಲಾಯನವಾದಿ ಡಿ.ಸಿ’

ಹೋರಾಟಗಾರರನ್ನು ಭೇಟಿ ಮಾಡಿ ಅವರ ಬೇಡಿಕೆಗಳನ್ನು ಈಡೇರಿಸದ ಜಿಲ್ಲಾಧಿಕಾರಿ ಅಸಮರ್ಥ ಹಾಗೂ ಪಲಾಯನವಾದಿ. ನಮ್ಮ ಸಮಸ್ಯೆ ಆಲಿಸದ ಡಿಸಿ ವಿರುದ್ಧ ಸಿ.ಎಂ ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ಡಿ.ಸಿ ಇದರ ಪರಿಣಾಮವನ್ನು ಮುಂದೆ ಎದುರಿಸಲಿದ್ದಾರೆ.

– ಚಾಮರಸಮಾಲಿ ಪಾಟೀಲ ಗೌರವಾಧ್ಯಕ್ಷ ರೈತ ಸಂಘ

‘ಹಳ್ಳಿಗೆ ಬಂದು ಸಮಸ್ಯೆ ಆಲಿಸಿ’

ರೈತರ ಬೇಡಿಕೆಗಳ ಪಟ್ಟಿಯನ್ನು ನೋಡಿದರೆ ಜಿಲ್ಲಾಡಳಿತ ನಿಷ್ಕ್ರಿಯವಾಗಿರುವುದು ಸ್ಪಷ್ಟವಾಗಿದೆ. ಸಮಸ್ಯೆ ಹೇಳಿಕೊಳ್ಳಲು ನಾವು ಜಿಲ್ಲಾಧಿಕಾರಿ ಕಚೇರಿಗೆ ಬರಬಾರದು ಎಂದಾದರೆ ವಾರದ ನಾಲ್ಕು ದಿನ ನೀವೇ ಹಳ್ಳಿಗೆ ಬಂದು ರೈತರ ಸಮಸ್ಯೆಗಳನ್ನು ಆಲಿಸಿ.

– ಮಲ್ಲಯ್ಯ ವಿಭಾಗೀಯ ಉಪಾಧ್ಯಕ್ಷ ರೈತಸಂಘ

‘ದನಿ ಹತ್ತಿಕ್ಕಲು ಸಾಧ್ಯವಿಲ್ಲ’

ನಾವು ಹಸಿರು ಮತ್ತು ನೀಲಿ ಟವಲ್ ತಂದು ಪ್ರತಿಭಟನೆ ನಡೆಸುತ್ತಿದ್ದೇವೆಯೇ ಹೊರತು ಬಾಂಬ್ ತಂದಿಲ್ಲ. ನಮ್ಮ ತೆರಿಗೆ ಹಣದಿಂದ ಕಟ್ಟಿದ ಕಚೇರಿಗೆ ಬಿಡುವುದಿಲ್ಲ ಎನ್ನಲು ಜಿಲ್ಲಾಧಿಕಾರಿಗೆ ಯಾವ ನೈತಿಕತೆ ಇದೆ. ನಿಷೇಧಾಜ್ಞೆ ಮೂಲಕ ಹೋರಾಟದ ದನಿ ಹತ್ತಿಕ್ಕಲು ಸಾಧ್ಯವಿಲ್ಲ.

– ವಾಸು ನಾಯಕ್ ಅಧ್ಯಕ್ಷ ರಾಮನಗರ ಜಿಲ್ಲಾ ವಾಲ್ಮಿಕಿ ಸಂಘಟನೆ

‘ಹತ್ತಿಕ್ಕಿದ್ದಷ್ಟು ಹೋರಾಟ ವಿಸ್ತಾರ’

‘ಪ್ರತಿಭಟನೆಯಿಂದ ಡಿ.ಸಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕಿರಿಕಿರಿಯಾಗುವುದಾದರೆ ಕೆಲಸಕ್ಕಾಗಿ ಕಚೇರಿಗೆ ಅಲೆದ ಜನರ ಚಪ್ಪಲಿ ಎಷ್ಟು ಸವೆದಿದೆ ಎಂಬುದು ಗೊತ್ತಿದೆಯೇ? ನಮ್ಮ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದಷ್ಟೂ ಅದು ವಿಸ್ತಾರಗೊಂಡು ರಾಜ್ಯವನ್ನು ವ್ಯಾಪಿಸಲಿದೆ.

– ಕುಮಾರಸ್ವಾಮಿ ಸಲಹೆಗಾರ ಜಯ ಕರ್ನಾಟಕ ಜನಪರ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT