ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ತ್ಯಾಜ್ಯ ವಿಲೇವಾರಿಗೆ ಜಾಗ ಅಂತಿಮ

ಶೀಘ್ರ ನಿರ್ಮಾಣವಾಗಬೇಕಿದ ವಿಲೇವಾರಿ ಘಟಕ
Published 12 ಡಿಸೆಂಬರ್ 2023, 7:11 IST
Last Updated 12 ಡಿಸೆಂಬರ್ 2023, 7:11 IST
ಅಕ್ಷರ ಗಾತ್ರ

ರಾಮನಗರ: ಬೊಂಬೆ ನಗರಿ ಖ್ಯಾತಿಯ ಜಿಲ್ಲೆಯ ಚನ್ನಪಟ್ಟಣದ ನಗರಸಭೆ ವ್ಯಾಪ್ತಿಯಲ್ಲಿ ಉಲ್ಭಣಿಸಿದ್ದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಕಡೆಗೂ ಜಿಲ್ಲಾಡಳಿತ ಪರಿಹಾರ ಕಂಡುಕೊಂಡಿದೆ.

ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿರುವ ವಂದಾರಗುಪ್ಪೆ ಗ್ರಾಮದ ಸರ್ವೇ ನಂಬರ್ 20ರಲ್ಲಿರುವ 5 ಎಕರೆ 20 ಗುಂಟೆ ಮತ್ತು ಚೋಳಮಾರನಹಳ್ಳಿ ಗ್ರಾಮದ ಸರ್ವೇ ನಂಬರ್ 90ರಲ್ಲಿರುವ 3 ಎಕರೆ 20 ಗುಂಟೆ ಸೇರಿದಂತೆ ಒಟ್ಟು 9 ಎಕರೆ ಜಾಗವನ್ನು ಚನ್ನಪಟ್ಟಣದ ತ್ಯಾಜ್ಯ ವಿಲೇವಾರಿಗೆ ಅಂತಿಮಗೊಳಿಸಲಾಗಿದೆ.

ಎರಡೂ ಸರ್ವೇ ನಂಬರ್‌ಗಳಲ್ಲಿ ಕ್ರಮವಾಗಿ ಭೂ ಮಾಪಕರು ನಕ್ಷೆಯಲ್ಲಿ ಚೆಕ್ಕುಬಂದಿಯಂತೆ ಗುರುತಿಸಿರುವ ಉದ್ದೇಶಿತ ಜಾಗವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಭೂ ಕಂದಾಯ ಅಧಿಯಮದಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ.

ಗಮನ ಸೆಳೆದಿದ್ದ ‘ಪ್ರಜಾವಾಣಿ’: ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಭಣಿಸಿದ್ದರಿಂದ ನಗರದ ರಸ್ತೆಗಳು ಕಸದ ತಾಣಗಳಾಗಿದ್ದವು. ಪಟ್ಟಣ ದುರ್ನಾತ ಬೀರುತ್ತಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಅ. 30ರಂದು ‘ಗಬ್ಬೆದ್ದು ನಾರುತ್ತಿದೆ ಬೊಂಬೆ ನಗರಿ’ ವಿಶೇಷ ವರದಿ ಪ್ರಕಟವಾಗಿತ್ತು.

ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ, ತಹಶೀಲ್ದಾರ್ ಜೊತೆ ಸಭೆ ನಡೆಸಿದ್ದ ಶಾಸಕ ಕುಮಾರಸ್ವಾಮಿ ಅವರು, ತ್ಯಾಜ್ಯ ವಿಲೇವಾರಿಗೆ ನ. 5ರೊಳಗೆ ಜಾಗ ಅಂತಿಮಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆ ಮೇರೆಗೆ, ಅಧಿಕಾರಿಗಳು ಕಡೆಗೂ ವಿಲೇವಾರಿಗೆ ಜಾಗವನ್ನು ಅಂತಿಮಗೊಳಿಸಿದ್ದು, ಇದೀಗ ಜಿಲ್ಲಾಧಿಕಾರಿಯಿಂದ ಆದೇಶವು ಹೊರಬಿದ್ದಿದೆ.

‘ಶೀಘ್ರ ಘಟಕ ನಿರ್ಮಿಸಲಿ’: ‘ವಿಲೇವಾರಿ ಘಟಕಕ್ಕೆ 20 ಎಕರೆ ಜಾಗವನ್ನು ಕೋರಿದ್ದೆವು. ಕಡೆಗೆ 9 ಎಕರೆಯನ್ನು ಅಂತಿಮಗೊಳಿಸಿದ್ದಾರೆ. ಜಾಗ ಅಂತಿಮಗೊಳಿಸಿದ ಮಾತ್ರಕ್ಕೆ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಆದಷ್ಟು ಬೇಗ ಅಲ್ಲಿ ಪರಿಸರಸ್ನೇಹಿಯಾದ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಬೇಕು. ವೈಜ್ಞಾನಿಕವಾಗಿ ಕಸ ವಿಂಗಡಿಸಿ ವಿಲೇವಾರಿ ಮಾಡಬೇಕು. ಹಸಿ ಮತ್ತು ಒಣ ಕಸದಿಂದ ಗೊಬ್ಬರ ತಯಾರಿಸಬೇಕು’ ಎಂದು ನಗರಸಭೆ ಸದಸ್ಯ ವಾಸಿಲ್ ಅಲಿಖಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT