ಚನ್ನಪಟ್ಟಣ: ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರ ವಿರುದ್ಧ ವಿಡಿಯೊ ಮಾಡಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಗರದ ಕೋಟೆ ನಿವಾಸಿ ಮಾಧುರಿ (31) ಮೃತ ಮಹಿಳೆ. ಶುಕ್ರವಾರ ನಿದ್ರೆ ಮಾತ್ರೆ ಸೇವಿಸಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ನೆರೆಹೊರೆ ನಿವಾಸಿಗಳು ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮಾಧುರಿ ಅವರು ನಿದ್ರೆ ಮಾತ್ರೆ ಸೇವಿಸುವಾಗ ಮೂರು ವಿಡಿಯೊ ಮಾಡಿದ್ದಾರೆ. ಸಾವಿನ ನಂತರ ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿಡಿಯೊದಲ್ಲಿ ಏನಿದೆ: ಆಗಸ್ಟ್ 31ರಂದು ರೈಲ್ವೆ ನಿಲ್ದಾಣದ ಬಳಿ ಮಾಧುರಿ ಹಾಗೂ ಮತ್ತೊಬ್ಬ ಮಹಿಳೆ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಮಾಧುರಿ ಅವರು ಪುರ ಪೊಲೀಸರಿಗೆ ದೂರು ನೀಡಲು ಠಾಣೆಗೆ ಹೋಗಿದ್ದರು. ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು.
‘ನಿಮ್ಮ ಮೇಲೆ ಹಲವು ವಂಚನೆ ಪ್ರಕರಣಗಳಿರುವ ಕಾರಣ ದೂರು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ನ್ಯಾಯ ಕೇಳಲು ಹೋದ ನನ್ನನ್ನು ಅವಮಾನಿಸಿದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ’ ಎಂದು ಹೇಳಿರುವ ವಿಡಿಯೊ ತುಣುಕುಗಳು ಹರಿದಾಡುತ್ತಿವೆ.
‘ಪೊಲೀಸರು ಮೊಬೈಲ್ ಕಿತ್ತುಕೊಂಡಿದ್ದಾರೆ. ಅಲ್ಲದೆ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ನನ್ನ ಮೇಲೆ ದಾಖಲಾಗಿದ್ದ ಪ್ರಕರಣಗಳ ಬಗ್ಗೆ ಪುರ ಸರ್ಕಲ್ ಇನ್‌ಸ್ಪೆಕ್ಟರ್ ಶೋಭಾ ಹಾಗೂ ಕೆಲವು ಪೊಲೀಸರು ಅಪಹಾಸ್ಯ ಮಾಡಿದರು. ಆ ನಂತರ ಶೋಭಾ ಅವರು ನನ್ನ ಫೋಟೊ ಶೂಟ್ ಮಾಡಿ ಎಂದು ಸಿಬ್ಬಂದಿಗೆ ಸೂಚಿಸಿದರು’ ಎಂದು ವಿಡಿಯೊದಲ್ಲಿ ಆರೋಪಿಸಿದ್ದಾರೆ.
’ನನ್ನ ವಿರುದ್ಧ ಹಲವು ಪ್ರಕರಣ ಇರುವುದು ನಿಜ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರ. ಈಗ ಹೊಸ ಪ್ರಕರಣದ ಬಗ್ಗೆ ದೂರು ಕೊಡಲು ಹೋದರೆ ಪೊಲೀಸರು ಅವಮಾನಿಸಿದ್ದಾರೆ. ಇದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ರಾಮನಗರ ಎಸ್‌ಪಿ ನ್ಯಾಯ ಕೊಡಿಸಬೇಕು‘ ಎಂದು ಮನವಿ ಮಾಡಿರುವ ದೃಶ್ಯ ವಿಡಿಯೊದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.