ಶನಿವಾರ, ಜುಲೈ 24, 2021
26 °C

ಪೊಲೀಸ್ ಇಲಾಖೆ | ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದ್ದು, ಠಾಣೆಗಳ ಬಲವರ್ಧನೆ ಆಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯಲ್ಲಿ 99 ಸಿವಿಲ್‌ ಕಾನ್‌ಸ್ಟೆಬಲ್‌ ಹುದ್ದೆಗಳು, 135 ಪಿಎಸ್‌ಐ ಹಾಗೂ ನಂತರದ ಹುದ್ದೆಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ 69, ವೈರ್‌ಲೆಸ್‌ ವಿಭಾಗದಲ್ಲಿ 9 ಹಾಗೂ ಮಿನಿಸ್ಟರ್ ಸ್ಟಾಫ್‌ ವಿಭಾಗದಲ್ಲಿ 7 ಹುದ್ದೆ ಖಾಲಿ ಇದೆ. ಈ ಪೈಕಿ ಸದ್ಯ 60 ಸಿವಿಲ್‌ ಪೊಲೀಸ್‌ ನೇಮಕಾತಿ ನಡೆದಿದ್ದು, ಇವರೆಲ್ಲ ತರಬೇತಿ ಪಡೆಯುತ್ತಿದ್ದಾರೆ. ಇನ್ನೂ 75 ಹುದ್ದೆಗಳಿಗೆ ಪರೀಕ್ಷೆ ಮುಗಿದಿದೆ. ಡಿಎಆರ್‌ನಲ್ಲಿ 50 ಸಿಬ್ಬಂದಿ ನೇಮಕಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯು ಬೆಂಗಳೂರಿಗೆ ಸಮೀಪದಲ್ಲಿ ಇರುವ ಕಾರಣ ಅಲ್ಲಿನ ಅಪರಾಧ ಪ್ರಕರಣಗಳ ನೆರಳು ಇಲ್ಲಿಯೂ ಬೀಳುತ್ತಿದೆ. ಮುಖ್ಯವಾಗಿ ರಿಯಲ್ ಎಸ್ಟೇಟ್‌ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸಿವಿಲ್‌ ಪ್ರಕರಣಗಳ ನಿರ್ವಹಣೆಗೆ ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಬೇಕು. ಅನಗತ್ಯವಾಗಿ ಮಧ್ಯಪ್ರವೇಶ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಜಿಲ್ಲೆಯಲ್ಲಿ ಈಚಿನ ವರ್ಷಗಳಲ್ಲಿ ಶೇ 90ರಷ್ಟು ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಇಲ್ಲಿನ ಪೊಲೀಸರು ಪತ್ತೆ ಮಾಡಿದ್ದಾರೆ. ದರೋಡೆ ಪ್ರಕರಣಗಳಲ್ಲಿ ಶೇ 100ರಷ್ಟು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಲಾಕ್‌ಡೌನ್ ಸಂದರ್ಭ ಪೊಲೀಸರು ಅತ್ಯಂತ ದಕ್ಷತೆಯಿಂದ, ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ. ರಾಮನಗರ ಜಿಲ್ಲೆ ಬಹಳ ದಿನ ಕಾಲ ಕೊರೊನಾ ಹಸಿರು ವಲಯವಾಗಿ ಉಳಿಯುವಲ್ಲಿ ಇವರ ಪಾಲು ಹೆಚ್ಚಿದೆ ಎಂದು ಶ್ಲಾಘಿಸಿದರು.

‘ಇಲ್ಲಿ ಈಚೆಗೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿಗೆ ಸಮೀಪ ಇರುವ ಪ್ರದೇಶಗಳಲ್ಲಿ ಸಿಂಥೆಟಿಕ್‌ ಡ್ರಗ್ಸ್ ಸೇವನೆ ಕಂಡು ಬಂದಿದ್ದು, ಕಾಲೇಜು ವಿದ್ಯಾರ್ಥಿಗಳು ಇದಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ. ಜೊತೆಗೆ ಇಲ್ಲಿನ ಮರಳು ದಂದೆ. ಜೂಜು ಮೊದಲಾದ ಪ್ರಕರಣಗಳನ್ನು ಸೂಕ್ತವಾಗಿ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದರು. ಜನಸಂಖ್ಯೆಗೆ ಅನುಗುಣವಾಗಿ ಠಾಣೆಗಳಲ್ಲಿ ಸಿಬ್ಬಂದಿ ಹೆಚ್ಚಳ, ಔರದ್ಕರ್‍ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಕಾವೇರಿ ನದಿಯಲ್ಲಿ ರಾಕೆಟ್‌ ಲಾಂಚರ್‌ಗಳು ಸಿಕ್ಕ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ಈ ಬಗ್ಗೆ ತನಿಖೆ ನಡೆದಿದೆ. ಇನ್ನೂ ಅಂತಿಮ ವರದಿ ಕೈಸೇರಿಲ್ಲ’ ಎಂದಷ್ಟೇ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು