ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಸಂಪುಟದಿಂದ ಡಿಕೆಶಿ ವಜಾಕ್ಕೆ ಆಗ್ರಹ

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್ ಹಂಚಿಕೆಯಲ್ಲಿ ಕೈವಾಡ ಆರೋಪ: ಬಿಜೆಪಿ–ಜೆಡಿಎಸ್ ಪ್ರತಿಭಟನೆ
Published 9 ಮೇ 2024, 7:52 IST
Last Updated 9 ಮೇ 2024, 7:52 IST
ಅಕ್ಷರ ಗಾತ್ರ

ರಾಮನಗರ: ರಾಜ್ಯವನ್ನು ತಲ್ಲಣಗೊಳಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್ ಹಂಚಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿ, ನಗರದಲ್ಲಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೀಳು ಮಟ್ಟದ ರಾಜಕೀಯ ಮಾಡಿರುವ ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ನಗರದ ಐಜೂರು ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಡಿಸಿಎಂ ವಿರುದ್ಧದ ಪ್ರತಿಭಟನ ಫಲಕಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಧಿಕ್ಕಾರ ಕೂಗುತ್ತಾ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದರು. ಫಲಕಗಳು ಹಾಗೂ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆದರು.

ಪ್ರಜ್ವಲ್ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಪ್ರಕರಣದ ಸತ್ಯಾಸತ್ಯತೆ ನಿಜವಾಗಿಯೂ ಹೊರಬರಬೇಕಾದರೆ, ಸಿಬಿಐಗೆ ವಹಿಸಬೇಕು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಆಗ ಮಾತ್ರ ಪ್ರಕರಣದ ಹಿಂದಿರುವವರಿಗೂ ಶಿಕ್ಷೆಯಾಗಿ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ ಒಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ‘ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ಬೆಂಬಲ ಗಳಿಸಿ ಉಪ ಮುಖ್ಯಮಂತ್ರಿ ಹುದ್ದೆಗೇರಿದ ಡಿ.ಕೆ. ಶಿವಕುಮಾರ್ ಬದಲಾಗಿದ್ದಾರೆ, ಅವರಲ್ಲಿ ಒಳ್ಳೆಯತನ ಕಾಣಿಸುತ್ತಿದೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ, ಅವರು ಬದಲಾಗಿಲ್ಲ. ನಾವೇ ಅವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೇವೆ’ ಎಂದರು.

‘ತಮ್ಮ ರಾಜಕೀಯ ಲಾಭಕ್ಕಾಗಿ ಅವರು ಒಂದು ಕುಟುಂಬವನ್ನು ಹಣಿಯಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದಕ್ಕೆ ಪೆನ್‌ಡ್ರೈವ್ ಹಂಚಿಕೆಯೇ ಸಾಕ್ಷಿ. ಇದರಿಂದಾಗಿ ಹಲವು ಹೆಣ್ಣು ಮಕ್ಕಳ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದಾರೆ. ಹಾಗಾಗಿ, ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವುದೇ ನೈತಿಕತೆ ಅವರಿಗಿಲ್ಲ’ ಎಂದು ಕಿಡಿಕಾರಿದರು.

ಎಸ್‌.ಪಿ ಕಚೇರಿಗೆ ಬಂದ ಪ್ರತಿಭಟನಕಾರರು ಡಿವೈಎಸ್ಪಿ ದಿನಕರ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಎರಡೂ ಪಕ್ಷಗಳ ಮುಖಂಡರಾದ ಎಚ್.ಸಿ. ಜಯಮತ್ತು, ಉಮೇಶ್, ನಾಗರಾಜು, ಸ್ಟುಡಿಯೋ ಚಂದ್ರು, ಆನಂದ ಸ್ವಾಮಿ, ಗೌತಮ್‌ ಗೌಡ, ಪ್ರಸಾದ್‌ ಗೌಡ, ಮುರಳೀಧರ್, ಜಯಕುಮಾರ್, ಮಂಜುನಾಥ್, ದರ್ಶನ್ ಹಾಗೂ ಇತರರು ಇದ್ದರು.

‘ಪ್ರಜ್ವಲ್ ಪ್ರಕರಣ ಸಮರ್ಥಿಸಲಾಗದು’

‘ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ಸಮರ್ಥಿಸಲಾಗದು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಜೆಡಿಎಸ್ ಅಧ್ಯಕ್ಷರು ಹೇಳುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದನ್ನು ಒತ್ತಿ ಹೇಳಿದ್ದಾರೆ. ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಪಕ್ಷದಿಂದ ಅವರನ್ನು ಅಮಾನತು ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.

‘ಕಸುಬು ಮುಂದುವರಿಸಿದ ಡಿಕೆಶಿ’

‘ಪ್ರಕರಣವನ್ನು ಬಳಸಿಕೊಂಡು ಜೆಡಿಎಸ್‌ ಕುಟುಂಬವನ್ನು ಮುಗಿಸಲು ಶಿವಕುಮಾರ್ ಹೊರಟಿರುವುದು ಅಕ್ಷಮ್ಯ. ಪೆನ್ ಡ್ರೈವ್ ಹಂಚಿಕೆ ಹಿಂದೆ ಅವರ  ಕೈವಾಡವಿರುವುದು ಜಗ್ಗಜ್ಜಾಹೀರಾಗಿದೆ. ರಾಜಕಾರಣದ ಆರಂಭದ ದಿನಗಳಲ್ಲಿ ಸಾತನೂರಿನಲ್ಲಿ ಮಾಡುತ್ತಿದ್ದ ಕಸುಬನ್ನು ಈಗಲೂ ಮುಂದುವರಿಸಿದ್ದಾರೆ. ಹಿಂದೆ ಬೆಳಗಾವಿಯ ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನೂ ಕೆಲ ರಾಜಕಾರಣಿಗಳ ಪ್ರಕರಣದಲ್ಲೂ ಶಿವಕುಮಾರ್ ಹೆಸರು ಕೇಳಿಬಂದಿದೆ. ಹಾಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ಬದಲು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಆಗ ಮಾತ್ರ ಸತ್ಯ ಹೊರಬರಲಿದೆ’ ಎಂದು ಯೋಗೇಶ್ವರ್ ಒತ್ತಾಯಿಸಿದರು.

‘ಅಸ್ವಿತ್ವ ಕಳೆದುಕೊಳ್ಳುವ ಭಯದಲ್ಲಿ ಡಿಕೆಶಿ’

‘ಬಿಜೆಪಿ–ಜೆಡಿಎಸ್ ಮೈತ್ರಿ ಬಳಿಕ ನಡೆದ ರಾಜಕೀಯ ಧ್ರುವೀಕರಣದಿಂದಾಗಿ ಎಲ್ಲಿ ತನ್ನ ಅಸ್ತಿತ್ವ ಕಳೆದು ಹೋಗುತ್ತದೊ ಎಂಬ ಭಯ ಶಿವಕುಮಾರ್ ಅವರಿಗೆ ಕಾಡತೊಡಗಿದೆ. ಸಮುದಾಯಕ್ಕೆ ಒಳ್ಳೆಯದು ಮಾಡುವುದಕ್ಕೆ ನನಗೂ ಪೆನ್ನು ಮತ್ತು ಪೇಪರ್ ಕೊಡಿ ಎಂದು ಕೇಳಿದ್ದ ಶಿವಕುಮಾರ್ ಇದೀಗ ಪೆನ್‌ ಡ್ರೈವ್ ಮೂಲಕ ಕೀಳು ಮಟ್ಟದ ರಾಜಕಾರಣಕ್ಕಿಳಿದಿದ್ದಾರೆ. ಪ್ರಜ್ವಲ್ ಮತ್ತು ಎಚ್‌.ಡಿ. ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ರೇವಣ್ಣ ಅವರನ್ನು ಮಾತ್ರ ಬಂಧಿಸಿ ಉಳಿದವರನ್ನು ಬಂಧಿಸಿಲ್ಲ ಯಾಕೆ? ಯಾರ ಕೈಗೂ ಸಿಗದ ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಸುದ್ದಿ ವಾಹಿನಿಯ ಸಂದರ್ಶನಕ್ಕೆ ಹೇಗೆ ಸಿಗುತ್ತಾನೆ? ಎಸ್‌ಐಟಿ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ರಾಜ್ಯ ಸರ್ಕಾರದಿಂದ ಪಾರದರ್ಶಕ ತನಿಖೆ ಅಸಾಧ್ಯ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT