ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಣೆ ಆಗಲಿ ಐತಿಹಾಸಿಕ ಸ್ಮಾರಕ

ಮಾಗಡಿಯಲ್ಲಿವೆ ಕೆಂಪೇಗೌಡರ ಕಾಲದ ನೂರಾರು ಕುರುಹು
Last Updated 27 ಜೂನ್ 2021, 4:40 IST
ಅಕ್ಷರ ಗಾತ್ರ

ಮಾಗಡಿ: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಮತ್ತವರ ವಂಶಜರು ಆಳಿದ ಊರಾದ ಮಾಗಡಿಯಲ್ಲಿ ಇರುವ ಇತಿಹಾಸದ ಕುರುಹುಗಳು ನೂರೆಂಟು. ಆದರೆ ಸಂರಕ್ಷಣೆ, ಸೂಕ್ತ ನಿರ್ವಹಣೆ ಇಲ್ಲದೇ ಇಲ್ಲಿನ ಸ್ಮಾರಕಗಳು ಒಂದೊಂದೇ ಕಣ್ಮರೆಯಾಗತೊಡಗಿವೆ.

ಕೆಂಪೇಗೌಡರ ವಂಶಜರು ನಾಡಿನ ವಿವಿಧೆಡೆ ನೆಲೆ ಕಂಡುಕೊಂಡು ತಮ್ಮ ಆಳ್ವಿಕೆಯಲ್ಲಿ ನೂರಾರು ದೇಗುಲ, ಕೋಟೆ–ಕೊತ್ತಲ, ಕೆರೆ–ಕಲ್ಯಾಣಿಗಳನ್ನು ನಿರ್ಮಿಸಿದ್ದಾರೆ. ತಮಿಳುನಾಡಿನ ಯಣಮಂಜಿ ಪುತ್ತೂರಿನಿಂದ ಆವತಿ, ಯಲಹಂಕ, ಬೆಂಗಳೂರು, ಸಾವನ ದುರ್ಗ, ಮಾಗಡಿ, ಭೈರವನದುರ್ಗ, ಹುಲಿಕಲ್, ಹುತ್ರಿದುರ್ಗ, ಹುಲಿಯೂರು ದುರ್ಗಗಳಲ್ಲಿ ಅವರ ಆಳ್ವಿಕೆ ನಡೆದಿತ್ತು. ಇಲ್ಲೆಲ್ಲ ಅವರ ಆಡಳಿತದ ಕುರುಹುಗಳು ಉಳಿದುಕೊಂಡಿವೆ.

ಕಬ್ಬಾಳು ದುರ್ಗದಲ್ಲಿ ಕೃಷ್ಣಪ್ಪ ಗೌಡರ ಸೆರೆಯೊಂದಿಗೆ ಅವರ ಆಳ್ವಿಕೆಯ ಗತವೈಭವ ನಮ್ಮ ಕಣ್ಮುಂದಿದೆ. ಸಾವನದುರ್ಗದಲ್ಲಿನ ಕೆಂಪೇಗೌಡರ ಸಮಾಲೋಚನಾ ಹಜಾರ, ಮಾಗಡಿ ಕೋಟೆ, ಬೈಚಾಪುರದಲ್ಲಿನ ವರದರಾಜ ಸ್ವಾಮಿ, ವೆಂಕಟಣ್ಣಯ್ಯನ ಪಾಳ್ಯದ ಈಶ್ವರ ಗುಡಿ, ಪಟ್ಟಣದ ಸೋಮೇಶ್ವರ ಸ್ವಾಮಿ, ಗವಿಗಂಗಾಧರೇಶ್ವರ ಗುಡಿಗಳು, ಕೆಂಪೇಗೌಡ ಗೋಪುರ, ಮಾಂಡವ್ಯ ಗುಹೆಯ ಮೇಲಿನ ಗೋಪುರ, ಗರಡಿ ಮನೆಗಳು, ಕೆಂಪಸಾಗರದಲ್ಲಿನ ಈಶ್ವರ ಗುಡಿ, ಹುಲಿಕಲ್ ದೊರೆಮನೆ, ಕೆಂಪಾಪುರದಲ್ಲಿನ ವೀರಸಮಾಧಿಗಳು ಕೆಂಪೇಗೌಡರ ವಂಶಜರ ಆಳ್ವಿಕೆಗೆ ಸಾಕ್ಷಿಯಾಗಿವೆ.

ಇಷ್ಟೇ ಅಲ್ಲದೆ ಇಲ್ಲಿನ ಭಾರ್ಗವತಿ, ಕೆಂಪಸಾಗರ ಕೆರೆಗಳು, ಹತ್ತಾರು ಕಲ್ಯಾಣಿಗಳನ್ನೂ ಅವರು ಕಟ್ಟಿಸಿದ್ದರು. ಇವೆಲ್ಲ ಇಂದು ಅವಸಾನದ ಹಾದಿ ಹಿಡಿದಿದ್ದು, ಇತಿಹಾಸದ ಕುರುಹುಗಳ ಸಂರಕ್ಷಣೆ ಆಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಅಡ್ಡಗುಡ್ಡೆ, ಸೋಮೇಶ್ವರ ಬೆಟ್ಟಗಳ ನಡುವೆ ಕಣಿವೆಯಂತೆ ಇರುವ ಮಾಗಡಿ, ಕಂಚಿನ ಬೋರಲು ಹಾಕಿರುವ ಬೋಗುಣಿಯಂತಿತ್ತು, ನದಿ, ಹಳ್ಳ, ಕೊಳ್ಳ, ಕಲ್ಯಾಣಿ, ಕೆರೆಕಟ್ಟೆಗಳಿಂದ ಕಂಗೊಳಿಸುತ್ತಿದ್ದ ಕಾಲವೊಂದಿತ್ತು. ಇಂದು ಪಟ್ಟಣದಲ್ಲಿ ರಾಜಕಾಲುವೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳು ತಲೆ ಎತ್ತಿವೆ. ಚೋಳ ದೊರೆಗಳು ಗೌರಮ್ಮನ ಕೆರೆಯಿಂದ, ಭಾರ್ಗವತಿ ಕೆರೆಯ ತನಕ ಸುಮಾರು 9 ಕಿ.ಮೀ. ದೂರ ರಾಜಕಾಲುವೆ ಭೂಮಿ ಗುರುತಿಸಿದ್ದರು. ಸುಮಾರು 60 ಮೀಟರ್ ಅಗಲವಿದ್ದು, ನೈಸರ್ಗಿಕವಾಗಿ ಸುರಿದ ಮಳೆಯ ನೀರು ಗೌರಮ್ಮನ ಕೆರೆ ತುಂಬಿ ಹರಿದು ಕೆರೆಗೆ ಸೇರುವಂತೆ ರಾಜಕಾಲುವೆಯನ್ನು ಗುರುತಿಸಿರುವ ಅಂದಿನ ಕಾಲದಲ್ಲಿ ನಿಲ್ಲಿಸಿದ್ದ ಕಲ್ಲುಗಳನ್ನು ಕಿತ್ತುಹಾಕಿ ಒತ್ತುವರಿ ಮಾಡಿಕೊಳ್ಳಲಾಗಿದೆ.

ಕಾಲುವೆಗಳೂ ಮಾಯ: ಗೌರಮ್ಮನ ಕೆರೆ ಕೋಡಿ ತುಂಬಿ ಹರಿದು ನೀರು ಸರಾಗವಾಗಿ ಹರಿದು ಹೊಂಬಾಳಮ್ಮನಪೇಟೆಯ ಬಳಿ ಹರಿದು ಮುಂದೆ ಸಾಗುತ್ತಿತ್ತು. ಇಡೀ ವರ್ಷ ಪೂರ್ತಿ ರಾಜಕಾಲುವೆಯಲ್ಲಿ ನೀರು ಹರಿಯುತ್ತಿತ್ತು. ಸುತ್ತಲಿನ ಪರಿಸರವನ್ನು ಸುಂದರವಾಗಿಟ್ಟು ಕೊಳ್ಳಲು ಅನುಕೂಲವಾಗಿತ್ತು. ಆದರೆ, ಇಂದು ಗದ್ದೆಬಯಲಿನ ರಾಜಕಾಲುವೆಯನ್ನು ಭೂದಾಹಿಗಳು ಒತ್ತುವರಿ ಮಾಡಿದ್ದು, ನಿವೇಶನಗಳಾಗಿ ಪರಿವರ್ತನೆ ಆಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಶ್ರೀರಾಮಮಂದಿರ ಹಿಂದಿನ ಕಾಲುವೆ ಭಾಗಶಃ ಮುಚ್ಚಲ್ಪಟ್ಟಿದೆ. ಹೊಸಪೇಟೆ ರಸ್ತೆ, ರಾಜಪ್ಪನ ಗಲ್ಲಿ, ಸಿಹಿನೀರು ಬಾಗಿ ಗಲ್ಲಿ, ಕರಣೀಕರ ಕಲ್ಯಾಣಿಯ ಬಳಿ ಕಣ್ವಾ ನದಿ ಉಗಮ ಸ್ಥಳದಿಂದ ಪ್ರವಾಸಿ ಮಂದಿರದ ಮಾರ್ಗವಾಗಿ ಹರಿಯುತ್ತಿದ್ದ ಕಾಲುವೆಯನ್ನು ಎರಡು ಬದಿಗಳಲ್ಲಿ ಪೂರಾ ಒತ್ತುವರಿ ಮಾಡಿಕೊಳ್ಳಲಾಗಿದೆ. ಅರಣ್ಯ, ಕೃಷಿ ಇಲಾಖೆಯ ಕಚೇರಿಗಳು ಸಹ ರಾಜಕಾಲುವೆ ಮೇಲೆ ನಿರ್ಮಾಣ ಆಗಿರುವುದು ದುರಂತ.

ತಿರುಮಲೆ ನರಸಿಂಹ ದೇವರ ಬೆಟ್ಟದಿಂದ ಮಳೆಯ ನೀರು ಹರಿದು ಬಂದು ಕೋತಿಕಟ್ಟೆ ಸೇರುತ್ತಿದ್ದ ಕಾಲುವೆ 2 ಕಿ.ಮೀ ಒತ್ತುವರಿಯಾಗಿದೆ. ಮಾಂಡವ್ಯ ಗುಹೆಯಿಂದ ಹರಿದು ಬರುತ್ತಿದ್ದ ಕಾಲುವೆಯನ್ನು ಮುಚ್ಚಿ ಮಾರಾಟ ಮಾಡಲಾಗಿದೆ. ಸೋಮೇಶ್ವರ ಬಡಾವಣೆಯಿಂದ ಕಲ್ಯಾಣಿ ತನಕ ಇದ್ದ ಕಾಲುವೆ, ಕಲ್ಯಾಬಾಗಿಲು ನಾರಸಿಂಹ ಸರ್ಕಲ್‌ನಿಂದ ಹೊಂಬಾಳಮ್ಮನಪೇಟೆ ಕೆರೆಗೆ ಹರಿದು ಬರುತ್ತಿದ್ದ ಕಾಲುವೆ, ಗವಿಗಂಗಾಧರೇಶ್ವರ ಗುಡಿಯ ಹಿಂದೆ ಇದ್ದ ದೊಡ್ಡಹಳ್ಳ, ಹೊಸಹಳ್ಳಿ ಮಾರ್ಗವಾಗಿ ಗೌರಮ್ಮನಕೆರೆಗೆ ಹರಿಯುತ್ತಿದ್ದ ಹಳ್ಳಗಳನ್ನು ಮುಚ್ಚಿರುವುದನ್ನು ತೆರವುಗೊಳಿಸಿ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕಿದೆ.

ಪುತ್ಥಳಿ ಸ್ಥಾಪನೆ, ಹೋರಾಟದ ಪ್ರಯತ್ನ: ಜನಮಾನಸದಿಂದ ಮರೆತೇ ಹೋಗಿದ್ದ ಕೆಂಪೇಗೌಡರ ಸ್ಮಾರಕಗಳನ್ನು ಉಳಿಸಲು ಎಚ್.ಎಂ. ಕೃಷ್ಣಮೂರ್ತಿ ನೇತೃತ್ವದಲ್ಲಿ 22 ವರ್ಷಗಳ ಹಿಂದೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಸ್ಥಾಪನೆ ಆಯಿತು. 19 ವರ್ಷದ ಹಿಂದೆ ಪುರಸಭೆ ಮುಂದಿನ ಉದ್ಯಾನದಲ್ಲಿ ಕೆಂಪೇಗೌಡ ಪುತ್ಥಳಿಯನ್ನೂ ನಿಲ್ಲಿಸಲಾಯಿತು. ಅಂದಿನಿಂದ ಸಮಿತಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ.

ಕೋಟೆ ಕಂದಕ ಉಳಿಸಲು ಆದಿಚುಂಚನಗಿರಿ ಮಠಾಧೀಶರಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಇತಿಹಾಸ ಸಂಶೋಧಕ ರಾದ ಸೂರ್ಯನಾಥ ಕಾಮತ್, ಡಾ.ಚಿದಾನಂದ ಮೂರ್ತಿ ಇತರರ ಸಹಯೋಗದಲ್ಲಿ ಹೋರಾಟ ನಡೆದಿತ್ತು. ಭಾರ್ಗಾವತಿಗೆ ಹರಿಯುತ್ತಿರುವ ಒಳಚರಂಡಿ ಕಲುಷಿತ ತಡೆಗಟ್ಟುವಂತೆ ಹೋರಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT