ಗುರುವಾರ , ಅಕ್ಟೋಬರ್ 6, 2022
24 °C
ಮುರುಘಾ ಶ್ರೀ ವಿರುದ್ಧದ ಪ್ರಕರಣ ಉನ್ನತ ತನಿಖೆಗೆ ಆಗ್ರಹ

ವಿದ್ಯಾರ್ಥಿನಿಯರ ರಕ್ಷಣೆಗೆ ದಲಿತ ಸಂಘಟನೆಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಪ್ರತಿಭಟನೆ ನಡೆಸಿದೆ. 

ಜೊತೆಗೆ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು ಎಂದೂ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು. 

ನಗರದ ಅಂಬೇಡ್ಕರ್ ಪ್ರತಿಮೆ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ತಾಲ್ಲೂಕು ಕಚೇರಿ ತಲುಪಿ ತಹಶೀಲ್ದಾರ್ ಸುದರ್ಶನ್‌ ಅವರಿಗೆ ಈ ಕುರಿತು ಮನವಿಪತ್ರ ನೀಡಿದರು.

ಖಾವಿ ಧರಿಸಿದ ಸ್ವಾಮೀಜಿಗಳಿಗೆ ಸಮಾಜದಲ್ಲಿ ವಿಶೇಷವಾದ ಗೌರವ, ಭಕ್ತಿ ಹಾಗೂ ಮನ್ನಣೆ ಇದೆ. ಸ್ವಾಮೀಜಿಗಳು ಅರಿಷಡ್ವರ್ಗಗಳನ್ನು ನಿಗ್ರಹಿಸಿ ಸಮಾಜಕ್ಕೆ ಉತ್ತಮ ಆಧ್ಯಾತ್ಮಿಕ ಮಾರ್ಗ ತೋರಿಸಬೇಕು.

ಆದರೆ, ಸ್ವಾಮೀಜಿಗಳು ತಮ್ಮ ಮೂಲಧ್ಯೇಯ ಗುರಿಯನ್ನು ಮರೆತು ಇಂದು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಭಾರತದ ಸಂಸ್ಕೃತಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಮುರುಘಾ ಮಠದ ಸ್ವಾಮೀಜಿ ಏನೇ ಪ್ರಗತಿಪರ ಕಾರ್ಯಗಳನ್ನು ಮಾಡಿದ್ದರೂ ಸಹ ಇಂದು ಅವರು ವಯಸ್ಸಿನ ಅಂತರವನ್ನು ಗಮನಿಸದೆ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಗತಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಅಸಂಖ್ಯಾತ ಚಿಂತಕರು ಹಾಗೂ ರಕ್ಷಕರಿಗೆ ಮಾಡಿರುವ ಅವಮಾನವಾಗಿದೆ ಎಂದು ದೂರಿದರು.

ಭಾರತದ ಸಂವಿಧಾನದ ಪ್ರಕಾರ ಕಾನೂನುಗಳು ಸರ್ವರಿಗೂ ಸಮಾನವಾಗಿ ಅನ್ವಯಿಸಬೇಕು. ತಪ್ಪು ಮಾಡಿದ ವ್ಯಕ್ತಿ ಎಂತಹ ಅತ್ಯುನ್ನತ ಸ್ಥಾನದಲ್ಲಿದ್ದರೂ ಸಹ ನ್ಯಾಯ ಸಮ್ಮತವಾಗಿ ವಿಚಾರಣೆಗೊಳಪಡಿಸುವ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಮತ್ತೀಕೆರೆ ಹನುಮಂತಯ್ಯ, ಕೋಟೆ ಸಿದ್ದರಾಮಯ್ಯ, ಜಯಕಾಂತ್, ರವಿಕುಮಾರ್ ಕೂಡ್ಲೂರು, ನಾರಾಯಣಮೂರ್ತಿ, ಕೇಶವಮೂರ್ತಿ, ದೊಡ್ಡಯ್ಯ, ಎಸ್.ಜಯಸಿಂಹ, ಅಪ್ಪಗೆರೆ ಶ್ರೀನಿವಾಸ್, ಚಿಕ್ಕೇನಹಳ್ಳಿ ಶಿವರಾಮು, ಪ್ರಜ್ಞಾ ಸಿದ್ದರಾಮು, ಭರತ್ ನೀಲಕಂಠನಹಳ್ಳಿ, ಕೂಡ್ಲೂರು ಸಿದ್ದರಾಮು, ಸ್ವಾಮಿ ಮೆಣಸಿಗನಹಳ್ಳಿ, ಮಂಕುಂದ ನಾಗರಾಜು, ಪ್ರದೀಪ್ ಅಪ್ಪಗೆರೆ, ಚಕ್ಕಲೂರು ಸಿದ್ದರಾಮು, ಮಹದೇವ್ ಮಲ್ಲುಂಗೆರೆ ಭಾಗವಹಿಸಿದ್ದರು.

ಗೃಹ ಸಚಿವ, ಪೊಲೀಸರ ವಿರುದ್ಧ ಆಕ್ರೋಶ

ಆರೋಪಿಯ ಕೃತ್ಯದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಪೊಲೀಸ್ ಇಲಾಖೆ, ಗೃಹ ಸಚಿವರು, ಪಟ್ಟಭದ್ರ ಹಿತಾಸಕ್ತಿಗಳ ಹಿಡಿತಕ್ಕೆ ಒಳಗಾಗಿ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿರುವುದು ಅಕ್ಷಮ್ಯ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ. 

ಅನೇಕ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಮಹಿಳಾ ಆಯೋಗ ಅಥವಾ ಇನ್ನಿತರ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ಜಾಣ ಕಿವುಡರಂತೆ ವರ್ತಿಸುತ್ತಿರುವುದು ಖಂಡನೀಯ ಎಂದರು.

ಪೋಕ್ಸೊ ಕಾಯಿದೆ ಅಡಿಯಲ್ಲಿ ತಡವಾಗಿಯಾದರೂ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ನೊಂದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಹಾಗೂ ನ್ಯಾಯವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ರಾಜ್ಯಪಾಲರು ಹಾಗೂ ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.