ಬುಧವಾರ, ಸೆಪ್ಟೆಂಬರ್ 23, 2020
23 °C
ವಿವಿಧ ಸಂಘಟನೆಗಳಿಂದ ಐಜೂರು ವೃತ್ತದಲ್ಲಿ ಪ್ರತಿಭಟನೆ

ಔರದ್ಕರ್ ಸಮಿತಿ ವರದಿ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಎಡಿಜಿಪಿ ಔರದ್ಕರ್ ಸಮಿತಿ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇಲ್ಲಿನ ಐಜೂರು ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು.

ಎಡಿಜಿಪಿ ಔರದ್ಕರ್ ಸಮಿತಿಯ ವರದಿಯ ಪ್ರಕಾರ ಶೇ 30ರಿಂದ 35ರಷ್ಟು ವೇತನ ಹೆಚ್ಚಳ ಸೇರಿದಂತೆ ಅನೇಕ ಮಹತ್ವದ ವಿಚಾರಗಳನ್ನು ಶಿಫಾರಸ್ಸು ಮಾಡಲಾಗಿದೆ. ಈ ವರದಿ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಗೃಹ ಸಚಿವರು ಸರ್ಕಾರದ ಬೊಕ್ಕಸದ ಮೇಲೆ ಸುಮಾರು ₨600 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ತಿಳಿಸಿದ್ದಾರೆ. ಲಕ್ಷ ಕೋಟಿಗಿಂತ ಹೆಚ್ಚು ವಾರ್ಷಿಕ ಬಜೆಟ್ ಹೊಂದಿರುವ ರಾಜ್ಯ ಸರ್ಕಾರಕ್ಕೆ ಈ ಮೊತ್ತ ದೊಡ್ಡದೇನಲ್ಲ. ಆದ್ದರಿಂದ ಸರ್ಕಾರ ಪೊಲೀಸರ ಕಲ್ಯಾಣಕ್ಕೆ ಔರದ್ಕರ್ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದರೆ ಅದಕ್ಕೆ ಪೊಲೀಸರ ಶ್ರಮ ಕಾರಣವಾಗಿದೆ. ಆದರೆ ಅವರಿಗೆ ಉದ್ಯೋಗದಲ್ಲಿ ಒತ್ತಡ, ಕಿರುಕುಳ ಸಾಮಾನ್ಯವಾಗಿದೆ. ವೇತನ ಕಡಿಮೆಯಾಗಿರುವುದರಿಂದ ಭ್ರಷ್ಟಾಚಾರ ಈ ಇಲಾಖೆಯಲ್ಲಿದೆ ಎಂಬ ಆರೋಪವಿದೆ. ಯುವಕರ ಕೊನೆಯ ಆಯ್ಕೆ ಈ ಉದ್ಯೋಗವಾಗಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿ, ಪೊಲೀಸರ ಕರ್ತವ್ಯ ಒತ್ತಡವನ್ನು ತಗ್ಗಿಸಬೇಕು. ಮಾನವಹಕ್ಕು, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ಕಾನೂನು ಪಾಲನೆ ನೆಲೆಯಲ್ಲಿ ಪೊಲೀಸರನ್ನು ಕಾಲಕಾಲಕ್ಕೆ ಪುನಶ್ಚೇತನ ಗೊಳಿಸಲು ನಿರಂತರ ಕಾರ್ಯಗಾರ ಸಂಘಟಿಸಬೇಕು ಎಂದು ತಿಳಿಸಿದರು.

ಮಾನವಹಕ್ಕು ರಕ್ಷಣೆ ಸಮಿತಿಯ ಅಧ್ಯಕ್ಷ ಚಿಕ್ಕಣ್ಣ, ನವೀನ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತುಂಬೇನಹಳ್ಳಿ ಶಿವಕುಮಾರ್, ಮೆಳೆಹಳ್ಳಿ ಕುಮಾರ್, ದಲಿತ ಸೇನೆಯ ಸಂತೋಷ್, ನರೇಶ್, ನಾರಾಯಣ, ಪುಟ್ಟರಾಜು, ಚಾಮೇಗೌಡ, ರಾಮಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು