‘ಜನತಾ ನ್ಯಾಯಾಲಯದಲ್ಲಿ ತ್ವರಿತ ನ್ಯಾಯದಾನ’

ಭಾನುವಾರ, ಏಪ್ರಿಲ್ 21, 2019
26 °C
ರಾಜ್ಯದ ಆರು ಕಡೆ ಕಾಯಂ ನ್ಯಾಯಾಲಯಗಳ ಸ್ಥಾಪನೆ; ಒಂಭತ್ತು ಬಗೆಯ ಪ್ರಕರಣಗಳ ಇತ್ಯರ್ಥ

‘ಜನತಾ ನ್ಯಾಯಾಲಯದಲ್ಲಿ ತ್ವರಿತ ನ್ಯಾಯದಾನ’

Published:
Updated:
Prajavani

ರಾಮನಗರ: ತ್ವರಿತ ನ್ಯಾಯದಾನಕ್ಕಾಗಿ ಸರ್ಕಾರವು ಕಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, ಜನರು ಇವುಗಳ ಉಪಯೋಗ ಪಡೆಯಬೇಕು ಎಂದು ರಾಜ್ಯ ಕಾನೂನು ಸೇವೆಗಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ. ಸಂಜೀವ್ ಕುಮಾರ್ ಹಂಚಾಟೆ ತಿಳಿಸಿದರು.

ರಾಜ್ಯದಲ್ಲಿ ಕಾಯಂ ಜನತಾ ನ್ಯಾಯಾಲಯ ಸ್ಥಾಪನೆ ಹಾಗೂ ಧ್ಯೇಯೋದ್ದೇಶಗಳ ಕುರಿತು ಮಂಗಳವಾರ ವೀಡಿಯೊ ಕಾನ್ಫರೆನ್ಸ್‌ ಪತ್ರಿಕಾಗೋಷ್ಠಿ ಮೂಲಕ ಅವರು ಮಾಹಿತಿ ನೀಡಿದರು. 2004ರಲ್ಲಿ ರಾಜ್ಯದಲ್ಲಿ ಈ ನ್ಯಾಯಾಲಯಗಳು ಸ್ಥಾಪನೆ ಆಗಿದ್ದು, ‘ಸಾರ್ವಜನಿಕ ಉಪಯುಕ್ತತಾ ಸೇವೆಗಳು’ ವಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸುತ್ತಾ ಬಂದಿದೆ. ಆದರೆ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವಿನ ಕೊರತೆಯ ಕಾರಣ ಹೆಚ್ಚು ಪ್ರಕರಣಗಳು ದಾಖಲಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಒಟ್ಟು ಒಂಭತ್ತು ಬಗೆಯ ವ್ಯಾಜ್ಯಗಳನ್ನು ಈ ನ್ಯಾಯಾಲಯಗಳ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಅಪರಾಧ ಪ್ರಕರಣಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರ್ಗಿಯಲ್ಲಿ ಈ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ರಾಮನಗರ ಜಿಲ್ಲೆಯ ಸಾರ್ವಜನಿಕರು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಜನತಾ ನ್ಯಾಯಾಲಯದಲ್ಲಿ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ ಎಂದು ಹೇಳಿದರು.

ಬಿಳಿ ಹಾಳೆಯಲ್ಲಿ ಸರಳ ಅರ್ಜಿ ಮೂಲಕ ಈ ನ್ಯಾಯಾಲಯಗಳಲ್ಲಿ ದೂರು ಸಲ್ಲಿಸಬಹುದು. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಇದರ ಅಧ್ಯಕ್ಷರಾಗಿದ್ದು, ಇಬ್ಬರು ಸದಸ್ಯರಿರುತ್ತಾರೆ. ಸಾಮಾನ್ಯ ಕೋರ್ಟ್‌ ಮಾದರಿಯಲ್ಲಿಯೇ ಕಾರ್ಯ ಕಲಾಪಗಳು ಇರುತ್ತವೆ. ಇಬ್ಬರೂ ದೂರುದಾರರನ್ನು ಕೂರಿಸಿ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು, ನ್ಯಾಯಾಲಯಕ್ಕೆ ಯಾವುದೇ ಶುಲ್ಕವನ್ನು ತುಂಬಬೇಕಿಲ್ಲ. ಇದರಿಂದ ಎರಡೂ ಕಡೆಯ ಕಕ್ಷಿದಾರರ ಸಮಯ ಉಳಿತಾಯವಾಗಲಿದೆ ಎಂದರು.

ಈ ನ್ಯಾಯಾಲಯವು ಹೊರಡಿಸುವ ಐ–ತೀರ್ಪು ಸಿವಿಲ್‌ ನ್ಯಾಯಾಲಯದ ತೀರ್ಪಿಗೆ ಸಮವಾಗಿರುತ್ತದೆ. ಸಿವಿಲ್‌ ನ್ಯಾಯಾಲಯಗಳ ಮೂಲಕವೇ ಅದನ್ನು ಜಾರಿಗೊಳಿಸಲಾಗುತ್ತದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ಆದರೆ ಹೈಕೋರ್ಟ್‌ ಮೊರೆ ಹೋಗಬಹುದು. ಇಲ್ಲಿ ಅರ್ಜಿ ಹಾಕಿದರೆ, ಬೇರೆ ನ್ಯಾಯಾಲಯದಲ್ಲಿ ಅರ್ಜಿ ಹಾಕುವಂತಿಲ್ಲ. ಹೊಸ ದೂರುಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಇತರೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಪ್ರಕರಣಗಳನ್ನು ಹಿಂಪಡೆದು ಇಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಈವೆರೆಗೆ ಒಂದೂ ದೂರು ದಾಖಲಾಗಿಲ್ಲ. ಈ ಬಗ್ಗೆ ಈಗಾಗಲೇ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿಯೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್‌. ಹೊನ್ನಸ್ವಾಮಿ ಇದ್ದರು.

ಯಾವ್ಯಾವ ವ್ಯಾಪ್ತಿ?
ಸರಕು -ಸಾಗಣೆ ಸೇವೆಯಲ್ಲಿನ ವ್ಯತ್ಯಯ, ದೂರವಾಣಿ ಸೇವೆ, ವಿದ್ಯುತ್, ನೀರು, ಬೆಳಕು, ಸಾರ್ವಜನಿಕ ಸಂರಕ್ಷಣೆ ಮತ್ತು ನೈರ್ಮಲ್ಯ, ವೈದ್ಯಕೀಯ ಸೇವೆ, ವಿಮೆ, ಬ್ಯಾಂಕಿಂಗ್, ಹಣಕಾಸು ಸಂಸ್ಥೆ, ಶಿಕ್ಷಣ, ವಸತಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಈ ನ್ಯಾಯಾಲಯಗಳ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ₨1 ಕೋಟಿ ಮೀರಿದ ಸ್ವತ್ತುಗಳ ವಿವಾದವನ್ನು ಇದರಿಂದ ಹೊರಲಾಗಿದೆ. ಅಂತೆಯೇ ಯಾವುದೇ ಅಪರಾಧ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಗೊಳಿಸುವುದಿಲ್ಲ.

* ಸಾರ್ವಜನಿಕ ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳ ತ್ವರಿತ ವಿಚಾರಣೆಗಾಗಿ ಈ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಕೆಲವೇ ತಿಂಗಳ ಒಳಗೆ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿವೆ
-ನ್ಯಾ. ಸಂಜೀವ್ ಕುಮಾರ್ ಹಂಚಾಟೆ
ಸದಸ್ಯ ಕಾರ್ಯದರ್ಶಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !