ರಾಮನಗರ: ನೈಸ್ ಸಂಸ್ಥೆ ಭ್ರಷ್ಟಾಚಾರ ಹಾಗೂ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಆಗಸ್ಟ್ 1ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಎಂ.ವೆಂಕಟಚಲಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ಹೆಸರಿನಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ಭ್ರಷ್ಟಾಚಾರ ಮತ್ತು ರೈತರ ಮೇಲಿನ ದೌರ್ಜನ್ಯ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ನೈಸ್ ಸಂಸ್ಥೆಗೆ ಬೆಂಗಳೂರಿನಿಂದ ಮೈಸೂರು ತನಕ ಸುಮಾರು 152 ಗ್ರಾಮಗಳ ಸಾವಿರಾರು ಎಕರೆ ರೈತರ ಭೂಮಿಯನ್ನು ಕೆಐಡಿಬಿ ಮೂಲಕ ವಶಪಡಿಸಿಕೊಂಡು ಹಸ್ತಾಂತರ ಮಾಡಲಾಗಿದೆ. ಆದರೆ, 27ವರ್ಷ ಕಳೆದರೂ ನೆಲಮಂಗಲ ರಸ್ತೆಯಿಂದ ಹೊಸೂರು ರಸ್ತೆವರೆಗೆ ರಸ್ತೆ ನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಉಳಿದ ಕಡೆ ಅಭಿವೃದ್ಧಿ ಮಾಡಿಲ್ಲ. ಅಲ್ಲದೆ, ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಕಾಮಗಾರಿ ನಡೆಸಿ ಅವ್ಯವಹಾರದಲ್ಲಿ ಕಂಪನಿ ತೊಡಗಿದೆ ಎಂದು ದೂರಿದರು.
ಈ ನೈಸ್ ಕಂಪನಿ ಅವ್ಯವಹಾರ ಬಗ್ಗೆ ತನಿಖೆ ನಡೆಸಲು ಸರ್ಕಾರ ನೇಮಿಸಿದ ಸದನ ಸಮಿತಿಯು ಪರಿಶೀಲನೆ ನಡೆಸಿ ವರದಿ ನೀಡಿದೆ. ಈ ಪ್ರಕಾರ ಸಾವಿರಾರು ಎಕರೆ ಭೂ ಕಬಳಿಕೆ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದೆ. ಆದರೂ, ಯಾವುದೇ ಸರ್ಕಾರ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಸಂಸ್ಥೆ ಕಾನೂನು ಮೀರಿ ರೈತರ ಭೂಮಿ ವಶಪಡಿಸಿಕೊಂಡಿದೆ. ಗೂಂಡಾಗಿರಿ ಮತ್ತು ಪೊಲೀಸರನ್ನು ಬಳಸಿ ರೈತರಿಗೆ ತೊಂದರೆ ನೀಡುತ್ತಿದೆ ಎಂದು ದೂರಿದರು.
ಕಂಪನಿಯು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ. ರೈತ ಮುಖಂಡರನ್ನು ಪೊಲೀಸ್ ಠಾಣೆ ಮತ್ತು ಕೋರ್ಟ್‌ಗೆ ಅಲೆದಾಡುವಂತೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ಮುಖಂಡರಾದ ಸೋಮೇಶ್ವರ, ಚಂದ್ರಶೇಖರ್, ಶಶಿಕುಮಾರ್, ದಿನೇಶ್ ಆರಾಧ್ಯ, ರಾಮಣ್ಣ ಇದ್ದರು.