ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | ನನೆಗುದಿಗೆ ಬಿದ್ದ ಯುಜಿಡಿ ಕಾಮಗಾರಿ

ಇಚ್ಛಾಶಕ್ತಿ ಕೊರತೆ * ತೆವಳುತ್ತಾ, ಕುಂಟುತ್ತಾ ಸಾಗಿದ ಕಾಮಗಾರಿ
Published 12 ಆಗಸ್ಟ್ 2024, 5:00 IST
Last Updated 12 ಆಗಸ್ಟ್ 2024, 5:00 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರಸಭೆ ವತಿಯಿಂದ ಸುಮಾರು ₹19ಕೋಟಿ ಅಂದಾಜು ವೆಚ್ಚದಲ್ಲಿ ನಗರದಲ್ಲಿ ಆರಂಭಿಸಿದ್ದ ಒಳಚರಂಡಿ (ಯುಜಿಡಿ) ಕಾಮಗಾರಿ ಸುಮಾರು 17 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿಗೆ ಗ್ರಹಣ ಹಿಡಿದಿದೆ.

ಮನೆಗಳ ಶೌಚದ (ಮಲ) ನೀರು ಚರಂಡಿಗಳಲ್ಲಿ ಹರಿಯಬಾರದು ಎಂಬ ಉದ್ದೇಶದಿಂದ 2007ರಲ್ಲಿ ಚಾಲನೆ ನೀಡಲಾಗಿದ್ದ ಯುಜಿಡಿ ಕಾಮಗಾರಿ ಆರಂಭದಲ್ಲಿ ಭರದಿಂದ ಸಾಗಿತ್ತು. ಮೊದಲ ಹಂತವಾಗಿ ಪೈಪ್‌ಲೈನ್ ಹಾಗೂ ಚೇಂಬರ್ ಕೂಡ ಅಳವಡಿಸಲಾಗಿತ್ತು. ನಂತರ ಕುಂಟುತ್ತಾ, ತೆವಳುತ್ತ ಕಾಮಗಾರಿ ಸಾಗಿತ್ತು.

2013ರಲ್ಲಿ ಕಾಮಗಾರಿ ಮುಗಿದಿರುವ ಕಡೆ ನಗರದ ಮನೆಗಳಿಗೆ ಯುಜಿಡಿ ಲಿಂಕ್ ಕೂಡ ಮಾಡಲಾಗಿತ್ತು. ಶೇ50ರಷ್ಟು ಪೈಪ್‌ಲೈನ್ ಹಾಗೂ ಚೇಂಬರ್ ಕೆಲಸ ಮುಗಿದಿತ್ತು. ಆದರೆ, ಮನೆಗಳಿಂದ ಪೈಪ್‌ಲೈನ್ ಮೂಲಕ ಬರುವ ತ್ಯಾಜ್ಯ ಸಂಗ್ರಹಿಸುವ ಜಾಗ (ವೆಟ್‌ವೆಲ್) ಗುರುತಿಸಲು ವಿಫಲವಾದ ಕಾರಣ ಕಾಮಗಾರಿ ನನೆಗುದಿಗೆ ಬೀಳಲು ಪ್ರಮುಖ ಕಾರಣವಾಗಿದೆ.

ಕಾಮಗಾರಿ ಆರಂಭಕ್ಕೂ ಮುನ್ನ ವೆಟ್‌ವೆಲ್ ಜಾಗದ ಬಗ್ಗೆ ಗಮನಹರಿಸದೆ ಕೊನೆ ಕ್ಷಣದಲ್ಲಿ ತೆಗೆದುಕೊಂಡ ಕ್ರಮ ಕಾಮಗಾರಿ ಹಳ್ಳ ಹಿಡಿಯಲು ಕಾರಣ ಎಂಬುದು ನಾಗರಿಕರ ಆರೋಪ. ಮೊದಲು ₹19ಕೋಟಿ ವೆಚ್ಚದಲ್ಲಿ ಆರಂಭವಾದ ಈ ಕಾಮಗಾರಿಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹90ಕೋಟಿ ಬಿಡುಗಡೆಯಾಗಿದೆ. ಆದರೆ, ವೆಟ್‌ವೆಲ್ ಜಾಗದ ಸ್ವಾಧೀನ ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ಈ ಕಾಮಗಾರಿ ಮತ್ತೆ ಆರಂಭಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯುಜಿಡಿ ಕಾಮಗಾರಿ ಹಳ್ಳ ಹಿಡಿದಿದೆ ಎನ್ನುವುದು ನಾಗರಿಕರ ಆರೋಪ.

ಯುಜಿಡಿ ಕಾಮಗಾರಿಗೆ ಅಗತ್ಯವಾಗಿರುವ ವೆಟ್‌ವೆಲ್ ನಿರ್ಮಾಣಕ್ಕೆ ನಗರಸಭೆಯಿಂದ ಗುರುತಿಸಲಾಗಿರುವ ಖಾಸಗಿ ಜಾಗ ಸರ್ಕಾರದಿಂದ ಭೂಸ್ವಾಧೀನ ಮಾಡಿಕೊಳ್ಳಲು ಕಳೆದ ಒಂದು ವರ್ಷದ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಹಾಗೂ ನಗರಸಭೆ ಆಡಳಿತ ಮಂಡಳಿ ಸರ್ಕಾರದ ಗಮನ ಸೆಳೆಯದ ಕಾರಣ ಇದುವರೆಗೂ ಭೂ-ಸ್ವಾಧೀನ ಪ್ರಕ್ರಿಯೆ ಸಾಧ್ಯವಾಗಿಲ್ಲ ಎಂದು ಹೆಸರೇಳಲಿಚ್ಛಿಸದ ನಗರಸಭೆ ಸದಸ್ಯರೊಬ್ಬರು ತಿಳಿಸುತ್ತಾರೆ.

ರಸ್ತೆಯಲ್ಲಿಯೇ ಶೌಚಗುಂಡಿ: ಯುಜಿಡಿ ಕಾಮಗಾರಿ ನನೆಗುದಿಗೆ ಬಿದ್ದಿರುವ ಕಾರಣ ಹಲವು ಬಡಾವಣೆಯಲ್ಲಿ ರಸ್ತೆ ಮಧ್ಯೆಯಲ್ಲಿಯೆ ಶೌಚ ಗುಂಡಿ ನಿರ್ಮಾಣ ಮಾಡಲಾಗಿದೆ. ಕೆಲವೆಡೆ ಈ ಶೌಚ ಗುಂಡಿಗಳು ತುಂಬಿ ಹರಿಯುತ್ತಿವೆ. ಇದು ರಸ್ತೆಗಳ ಅಕ್ಕಪಕ್ಕದ ಚರಂಡಿಗಳಲ್ಲಿ ಹರಿದು ವಾತಾವರಣ ಕಲುಷಿತಗೊಳಿಸಿದೆ ಎಂದು ವಿವೇಕಾನಂದ ನಗರದ ಸುಶೀಲಮ್ಮ, ಭಾಗ್ಯಮ್ಮ, ಮಹದೇವಯ್ಯ ದೂರುತ್ತಾರೆ.

ನಗರದ ರಸ್ತೆ ಪಕ್ಕದ ಚರಂಡಿಗಳಲ್ಲಿ ಮನೆಗಳ ಶೌಚ ಹರಿಯುವುದನ್ನು ತಪ್ಪಿಸಲು ಕೆಲವು ಮನೆಯವರು ರಸ್ತೆಯಲ್ಲಿರುವ ಗುಂಡಿ ಅಗೆಯುವ ಕಾರಣ ವಾಹನ ಸವಾರರಿಗೆ ತೊಂದರೆಯಾಗುವ ಜತೆಗೆ ಸುತ್ತಮುತ್ತಲ ಜಾಗವೆಲ್ಲ ಗಬ್ಬೆದ್ದು ನಾರುತ್ತಿದೆ. ಕೆಲವರು ಗುಂಡಿ‌ ಎರಡು ಮೂರು ದಿನ ಮುಚ್ಚದೆ ಇರುವ ಕಾರಣ ಮನೆಯಲ್ಲಿ ವಾಸಿಸುವುದೇ ದುಸ್ತರ ಎಂದು ನೋವು ತೋಡಿಕೊಳ್ಳುತ್ತಾರೆ.

ಪಾಳುಬಿದ್ದ ಮ್ಯಾನ್ ಹೋಲ್: ಯುಜಿಡಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ನಗರದ ಹಲವು ಕಡೆ ಪೈಪ್ ಲೈನ್‌ಗೆ ಅಳವಡಿಸಿದ್ದ ಮ್ಯಾನ್ ಹೋಲ್ ಪಾಳು ಬಿದ್ದಿದೆ. ಕೆಲವೆಡೆ ಮ್ಯಾನ್ ಹೋಲ್‌ಗಳಿಗೆ ಕಸಕಡ್ಡಿ, ಮಣ್ಣು ತುಂಬಿಕೊಂಡು ಅವು ಉಪಯೋಗಕ್ಕೆ ಬಾರದಂತಾಗಿದೆ. ಇನ್ನೂ ಕೆಲವೆಡೆ ಮ್ಯಾನ್ ಹೋಲ್ ಕುರುಹು ಇಲ್ಲದಂತೆ ಸಂಪೂರ್ಣ ಮುಚ್ಚಿ ಹೋಗಿದೆ. ಮತ್ತೆ ಕೆಲವೆಡೆ ಮ್ಯಾನ್ ಹೋಲ್ ಮೇಲೆ ಮುಚ್ಚಿದ್ದ ಮುಚ್ಚಳ ಕಾಣೆಯಾಗಿ ಅಲ್ಲಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿರುವ ಉದಾಹರಣೆ ಇದೆ ಎಂದು ನಾಗರಿಕರು ಆರೋಪಿಸುತ್ತಾರೆ.

ಕಾಮಗಾರಿಗೆ ಅಗತ್ಯ ಅನುದಾನ ಲಭ್ಯವಿದೆ. ವೆಟ್ ವೆಲ್ ಜಾಗದ ಸಮಸ್ಯೆ ನಿವಾರಿಸಿದರೆ ಕಾಮಗಾರಿಗೆ ಮತ್ತೆ ಚಾಲನೆ ನೀಡಬಹುದು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನದಿಂದ ಉದ್ದೇಶಿತ ಯುಜಿಡಿ ಕಾಮಗಾರಿ ಹಳ್ಳ ಹಿಡಿದಿದೆ. ನಗರದ ಸೌಂದರ್ಯ ಹಾಳು ಮಾಡುತ್ತಿರುವ ಕಾಮಗಾರಿ ಮುಕ್ತಾಯ ಯಾವಾಗ ಎಂಬುದೇ ನಾಗರಿಕರ ಪ್ರಶ್ನೆಯಾಗಿ ಉಳಿದಿದೆ.

‘ನಗರಸಭೆಗೆ ಈಚೆಗೆ ಪೌರಾಯಕ್ತನಾಗಿ ಬಂದಿದ್ದೇನೆ. ನಗರದ ಸಮಸ್ಯೆ ತಿಳಿದುಕೊಳ್ಳುತ್ತಿದ್ದೇನೆ. ಯುಜಿಡಿ ಕಾಮಗಾರಿ ಬಗ್ಗೆ ಪೂರ್ಣ ಮಾಹಿತಿ ಪಡೆದು ನಂತರ ಮುಂದಿನ ಕ್ರಮಕೈಗೊಳ್ಳುತ್ತೇನೆ’ ಎಂದು ನೂತನ ಪೌರಾಯುಕ್ತ ಮಹೇಂದ್ರ ‌‌‌‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆಮಧ್ಯೆ ಶೌಚಗುಂಡಿ ತೆಗೆದಿರುವುದು
ರಸ್ತೆಮಧ್ಯೆ ಶೌಚಗುಂಡಿ ತೆಗೆದಿರುವುದು
ಚನ್ನಪಟ್ಟಣ ರಸ್ತೆಯೊಂದರಲ್ಲಿ ಮ್ಯಾನ್ ಹೋಲ್ ದುಸ್ಥಿತಿ
ಚನ್ನಪಟ್ಟಣ ರಸ್ತೆಯೊಂದರಲ್ಲಿ ಮ್ಯಾನ್ ಹೋಲ್ ದುಸ್ಥಿತಿ
ಕಣ್ವ ಚಾನಲ್ ರಸ್ತೆ ರಾಜಕಾಲುವೆ
ಕಣ್ವ ಚಾನಲ್ ರಸ್ತೆ ರಾಜಕಾಲುವೆ
ಜೆಸಿಬಿ ಲೋಕೇಶ್
ಜೆಸಿಬಿ ಲೋಕೇಶ್
ಅನಿಲ್
ಅನಿಲ್

ಕಾಮಗಾರಿಗೆ ಮತ್ತೆ ಜೀವ ಕೊಡಿ ಯುಜಿಡಿ ಕಾಮಗಾರಿಗೆ ಅಗತ್ಯವಾಗಿರುವ ವೆಟ್‌ವೆಲ್ ನಿರ್ಮಾಣಕ್ಕೆ ಸರ್ಕಾರಿ ಜಾಗ ಇಲ್ಲದ ಕಾರಣ ಖಾಸಗಿ ಜಮೀನು ಖರೀದಿ ಪ್ರಕ್ರಿಯೆ ಅವಶ್ಯಕವಾಗಿದೆ. ಜಲ ಮಂಡಳಿ ಅಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಂಟಿ ಪರಿಶೀಲನೆ ನಡೆಸಿ ಜಾಗ ಗುರುತಿಸಲಾಗಿದೆ. ಆದರೆ ಈ ಜಾಗವನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡು ಕಾಮಗಾರಿಗೆ ಮತ್ತೆ ಜೀವ ಕೊಡಬೇಕು. ಜೆಸಿಬಿ ಲೋಕೇಶ್ ನಗರಸಭೆ ಮಾಜಿ ಸದಸ್ಯ ಚನ್ನಪಟ್ಟಣ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಲಿ ಯುಜಿಡಿ ಕಾಮಗಾರಿ ಪೂರ್ಣವಾಗದ ಕಾರಣ ಚರಂಡಿ ರಾಜಕಾಲುವೆಗಳಿಗೆ ಮನೆ ಶೌಚಾಲಯದ ಗಲೀಜು ಬಿಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ಸಂಚರಿಸಲು ಆಗದ ಪರಿಸ್ಥಿತಿ ಇದೆ. ಯುಜಿಡಿ ಕಾಮಗಾರಿಗೆ ಅಳವಡಿಸಿರುವ ಪೈಪ್ ಅಲ್ಲಲ್ಲಿ ಮಣ್ಣು ತುಂಬಿ ಮುಚ್ಚಿ ಹೋಗಿದೆ. ಈ ಕಾಮಗಾರಿ ಪೂರ್ಣವಾಗದ ಹೊರತು ನಾಗರಿಕರ ಸಮಸ್ಯೆ ತಪ್ಪುವುದಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನ ವಹಿಸಬೇಕು. ಅನಿಲ್ ಕೆಂಪೇಗೌಡ ಬಡಾವಣೆ ನಿವಾಸಿ. ಚನ್ನಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT