ರಾಮನಗರ: ‘ನಗರದ ವಾರ್ಡ್ ಸಂಖ್ಯೆ 26ರ ವ್ಯಾಪ್ತಿಯ ಐಜೂರು ಗುಡ್ಡದಲ್ಲಿ ವಾಸವಾಗಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರಿಗೆ ನಿರ್ಮಿಸಿ ಕೊಟ್ಟಿರುವ ಮನೆಗಳಿಗೆ ನಗರಸಭೆಯಿಂದ ಇ-ಖಾತೆ ಮಾಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಇ-ಖಾತೆ ಮಾಡಿಸಿ ಕೊಟ್ಟಲ್ಲಿ ಸಮುದಾಯದವರಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಕೂಡಲೇ ಪರಿಶೀಲಿಸಿ, ಎರಡು ದಿನದಲ್ಲಿ ನನಗೆ ಮಾಹಿತಿ ನೀಡಬೇಕು. ಜೊತೆಗೆ ಎಲ್ಲರಿಗೂ ಇ-ಖಾತೆ ಮಾಡಿಸಿ ಕೊಡಬೇಕು’ ಎಂದು ಸೂಚಿಸಿದರು.
‘ಐಜೂರು ಗುಡ್ಡ ಪ್ರದೇಶದಲ್ಲಿ ವಾಸವಾಗಿರುವ ಸಮುದಾಯದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು. ಈ ನಿಟ್ಟಿನಲ್ಲಿ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಅಗತ್ಯ ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಲಾಗುವುದು’ ಎಂದು ನೀಡಿದರು.
‘ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದ ದೊಂಬಿದಾಸ, ಹೇಳವ, ಬುಡಬುಡಿಕೆ ಸೇರಿದಂತೆ ವಿವಿಧ ಸಮುದಾಯಗಳ ಸಾವಿರಾರು ಜನರು ಜಿಲ್ಲೆಯಲ್ಲಿ ವಾಸವಿದ್ದಾರೆ. ಅವರು ಉತ್ತಮ ಬದುಕು ಸಾಗಿಸಲು ಅನುಕೂಲವಾಗುವಂತೆ ಸರ್ಕಾರದಿಂದ ಒದಗಿಸುವ ಸೌಲಭ್ಯಗಳನ್ನು ತಲುಪಿಸಬೇಕು’ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಹಾಯಕ ಕಾಯದರ್ಶಿ ಶಿವಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿರುವ ಅಲೆಮಾರಿ ಸಮುದಾಯದವರಿಗೆ ನಿವೇಶನವಿದೆ. ಮನೆ ಇಲ್ಲದಿದ್ದಲ್ಲಿ ಕೂಡಲೇ ಅವರು ವಾಸಿಸುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸೌಲಭ್ಯ ನೀಡಲಾಗುವುದು’ ಎಂದು ತಿಳಿಸಿದರು.
‘ಅಲೆಮಾರಿಗಳು ವಾಸವಾಗಿರುವ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚೆಕ್ ಲೀಸ್ಟ್ ಪ್ರಕಾರ ದಾಖಲಾತಿಗಳನ್ನು ಸಲ್ಲಿಸಿದರೆ, ಸರ್ಕಾರದಿಂದ ಮಂಜೂರು ಮಾಡಿಸಿ ಕೊಡಲಾಗುವುದು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಲಾಲ್ ಎಂ.ಜಿ. ಸಭೆಗೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಜಿಲ್ಲಾ ಮಟ್ಟದ ಅಲೆಮಾರಿ ಹಾಗೂ ಅರೆಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಡಿ. ರಂಗನಾಥಪ್ಪ, ಮಾರಯ್ಯ, ಮುಖಂಡರಾದ ಬಾಲರಾಜ್ ನಾಗಪ್ಪ, ನಾರಾಯಣಮೂರ್ತಿ, ರಂಗಸ್ವಾಮಯ್ಯ, ನಾಗರಾಜ್, ಬಳೆ ನಾರಾಯಣ್ ಹಾಗೂ ಇತರರು ಇದ್ದರು.
ಗುಡ್ಡದಲ್ಲಿ ಕುಡುಕರ ಹಾವಳಿ: ಮಹಿಳೆಯರ ಅಳಲು
‘ನಮ್ಮ ಸಮುದಾಯದವರು ವಾಸಿಸುವ ಐಜೂರು ಗುಡ್ಡದಲ್ಲಿ ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿದೆ. ಯಾರನ್ನಾದರೂ ಪ್ರಶ್ನಿಸಿದರೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ. ಕುಡುಕರ ಹಾವಳಿಯನ್ನು ನಿಯಂತ್ರಿಸಬೇಕು’ ಎಂದು ಸಭೆಯಲ್ಲಿದ್ದ ಅಲೆಮಾರಿ ಸಮುದಾಯದ ಮಹಿಳೆಯರು ಜಿಲ್ಲಾಧಿಕಾರಿ ಅವರ ಬಳಿ ಅಳಲು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಯಾರಾದರೂ ನಿಮ್ಮ ಜಾಗಕ್ಕೆ ಬಂದು ಮದ್ಯಪಾನ ಮಾಡಿ ಗಲಾಟೆ ಮಾಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಅಲ್ಲದೆ ಪೊಲೀಸರು ಐಜೂರು ಗುಡ್ಡದಲ್ಲಿ ಗಸ್ತು ಹೆಚ್ಚಿಸಿ ಪುಂಡರಿಗೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.