ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶುದ್ಧ ಕುಡಿಯುವ ನೀರು | ಸದ್ಯಕ್ಕೆ ಸಮಸ್ಯೆ ಇಲ್ಲ: ಮುಂದೇನು ಗೊತ್ತಿಲ್ಲ

ಕುದೂರು: ಶುದ್ಧ ಕುಡಿಯುವ ನೀರು ಘಟಕಗಳ ರಿಪೇರಿ ಯಾವಾಗ?
ವಿವೇಕ್ ಕುದೂರು
Published 26 ಮಾರ್ಚ್ 2024, 5:14 IST
Last Updated 26 ಮಾರ್ಚ್ 2024, 5:14 IST
ಅಕ್ಷರ ಗಾತ್ರ

ಕುದೂರು: ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಕುದೂರು ಸುತ್ತಮುತ್ತಲಿನ ಹಲವಾರು ಕೆರೆ ಬಾವಿಗಳು ಭರ್ತಿಯಾಗಿದ್ದವು. ಆದರೆ, ಈ ವರ್ಷಮಳೆ ಅಭಾವದಿಂದ ಕೆರೆ–ಬಾವಿಗಳ ತಳಭಾಗದ ಮಣ್ಣು ಬಿರುಕು ಬಿಟ್ಟಿದೆ. ಇತ್ತ 400-500 ಅಡಿ ಆಳ ಕೊರೆಯಲಾಗಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿದೆ.

ಕುದೂರು ಹೋಬಳಿಯ ಬಿಸ್ಕೂರು ಕೆರೆಯು ನೀರಿಲ್ಲದೆ ಭಣಗುಡುತ್ತಿದೆ. ಹೋಬಳಿಯಾದ್ಯಂತ ಒಂದು ತಿಂಗಳಿನಿಂದ ಹಿಂದೆಂದೂ ಕಾಣದಷ್ಟು ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಜನತೆ ಬಿಸಿಲಿನ ಧಗೆ ತಾಳಲಾರದೆ ಹೈರಾಣಾಗುತ್ತಿದ್ದಾರೆ. ಹಲವಾರು ಕೆರೆಕಟ್ಟೆಗಳು, ಹಳ್ಳಕೊಳ್ಳಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. 

ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಕುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 8 ವಾರ್ಡ್‌ಗಳಿದ್ದು, 3,380 ಮನೆಗಳಿವೆ.ದಿನ ಬಿಟ್ಟು ದಿನ ಪ್ರತಿ ಮನೆಗೆ ನೀರು ಸರಬರಾಜಾಗುತ್ತಿದೆ. ಸದ್ಯಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲ. ಮನೆಗಳಿಗೆ ನೀರನ್ನು ಸರಬರಾಜು ಮಾಡುವ ಮೂಲ ಬೋರ್‌ವೆಲ್. ಒಟ್ಟು 32 ಬೋರ್‌ವೆಲ್‌ಗಳಲ್ಲಿ  30 ಬೋರ್‌ವೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ.

ಸದ್ಯದ ಮಟ್ಟಿಗೆ ಮನೆಗಳಲ್ಲಿ ಕುಡಿಯುವ ನೀರಿಗೆ, ಮತ್ತಿತರ ಕೆಲಸಗಳಿಗೆ ನೀರಿನ ತೊಂದರೆ ಇಲ್ಲ. ಬಿಸಿಲ ಧಗೆ ಹೀಗೆ ಮುಂದುವರೆದರೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೇಸಿಗೆ ಕಳೆಯುವವರೆಗೂ ಜನರಿಗೆ ನೀರಿನ ಸಮಸ್ಯೆ ಕಾಡದಂತೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಕುದೂರು ನಿವಾಸಿ ಗಂಗಮ್ಮ.

ಪಟ್ಟಣದಲ್ಲಿ ಈಗಿರುವ 6 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎಲ್ಲವೂ ಕಾರ್ಯಾಚರಣೆಯಲ್ಲಿವೆ. 6 ಘಟಕಗಳಲ್ಲಿ 4 ಘಟಕಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿವೆ. ಇನ್ನೆರಡು ಘಟಕಗಳು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಕುದೂರು ಗ್ರಾಮ ಪಂಚಾಯಿತಿ ಪಿಡಿಒ ಪುರುಷೋತ್ತಮ್ ಮಾಹಿತಿ ನೀಡುತ್ತಾರೆ. 

ಕುದೂರು ಹೋಬಳಿ ವ್ಯಾಪ್ತಿಯ ವೀರಸಾಗರ, ಬೆಟ್ಟಹಳ್ಳಿ ಹಾಗೂ ಮಲ್ಲಪ್ಪನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುಹೋಗಿವೆ. ಹಾಗಾಗಿ, ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಾಗಿದೆ. 

ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು 8 ತಿಂಗಳು ಕಳೆದಿವೆ. ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ. ಚಿಕ್ಕಮಸ್ಕಲ್ ಊರಿನಿಂದ ಶುದ್ಧ ನೀರು ತರುವ ಪ್ರಮೇಯ ಒದಗಿದೆ ಎಂದು ಬೇಸರದಿಂದ ನುಡಿದರು ಮಲ್ಲಪ್ಪನಹಳ್ಳಿ ನಿವಾಸಿ ರಘು.

ವೈದ್ಯರ ಸಲಹೆ: ಬೇಸಿಗೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು, ಗರ್ಭಿಣಿಯರು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕಿದೆ. ಬೇಸಿಗೆ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರನ್ನು ಕುಡಿಯಬೇಕು. ಮಕ್ಕಳನ್ನು ಸಾಧ್ಯವಾದಷ್ಟು ಬಿಸಿಲಲ್ಲಿ ಅಡ್ಡಾಡುವುದನ್ನು ಪೋಷಕರು ತಪ್ಪಿಸಬೇಕು. ಇದರಿಂದ ಮಕ್ಕಳು ಸನ್ ಬರ್ನ್ ಸೇರಿದಂತೆ ಅನೇಕ ಚರ್ಮ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯಬಹುದು.

ಚಿಕ್ಕ ಮಕ್ಕಳು ನೀರನ್ನು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಚರಣ ಉಂಟಾಗಿ ಮಲಮೂತ್ರ ಸರಿಯಾಗಿ ಹೋಗಲು ಸಮಸ್ಯೆಯಾಗುತ್ತದೆ. ಕಲುಷಿತ ನೀರನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಂಭವವಿರುತ್ತದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ಎಂ.ಸಿ ತಿಳಿಸಿದರು.

ಕುದೂರು ಹೋಬಳಿ ವೀರಸಾಗರ ಗ್ರಾಮದಲ್ಲಿ ಉದ್ಘಾಟನೆಗೊಳ್ಳದ ಶುದ್ಧ ಕುಡಿಯುವ ನೀರಿನ ಘಟಕ
ಕುದೂರು ಹೋಬಳಿ ವೀರಸಾಗರ ಗ್ರಾಮದಲ್ಲಿ ಉದ್ಘಾಟನೆಗೊಳ್ಳದ ಶುದ್ಧ ಕುಡಿಯುವ ನೀರಿನ ಘಟಕ
ಕುದೂರು ಹೋಬಳಿ ಬೆಟ್ಟಹಳ್ಳಿ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ
ಕುದೂರು ಹೋಬಳಿ ಬೆಟ್ಟಹಳ್ಳಿ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ
ಕುದೂರು ಹೋಬಳಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ
ಕುದೂರು ಹೋಬಳಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ

Quote - ತಾಲ್ಲೂಕಿನಲ್ಲಿ ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿಗೆ ಕ್ರಮ ಕೈಗೊಳ್ಳಲಾಗುವುದು. ನೀರಿನ ತೊಂದರೆ ಆಗದಂತೆ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  ವಿಜಯ್ ಕುಮಾರ್ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT