ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಸಂಪೂರ್ಣ ಸ್ತಬ್ಧ

ಭಾನುವಾರದ ಲಾಕ್‌ಡೌನ್ ಕರೆಗೆ ಜನರ ಸ್ಪಂದನೆ: ರೇಷ್ಮೆ ಮಾರುಕಟ್ಟೆಯೂ ಬಂದ್‌
Last Updated 24 ಮೇ 2020, 15:06 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ಲಾಕ್‌ಡೌನ್‌ ಅಂಗವಾಗಿ ಭಾನುವಾರ ರಾಜ್ಯ ಸರ್ಕಾರ ಹೇರಿದ್ದ ಕರ್ಫ್ಯು ಕರೆಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಡೀ ರಾಮನಗರ ಸ್ತಬ್ಧವಾಗಿತ್ತು.

ಬೆಳಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇಡೀ ಬಸ್ ನಿಲ್ದಾಣ ಬಿಕೋ ಎನ್ನುತಿತ್ತು. ಖಾಸಗಿ ವಾಹನಗಳ ಓಡಾಟಕ್ಕೂ ಕಡಿವಾಣ ಹಾಕಲಾಗಿತ್ತು. ಆಟೊಗಳ ಸಂಚಾರ ಸಹ ಇರಲಿಲ್ಲ. ಹೀಗಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಪೂರ ಖಾಲಿಖಾಲಿಯಾಗಿತ್ತು. ದಿನಬಳಕೆ ವಸ್ತು ಹಾಗೂ ಆರೋಗ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಹೋಟೆಲ್‌ಗಳು ಸಹ ಬಾಗಿಲು ತೆರೆಯಲು ಅನುಮತಿ ಇರಲಿಲ್ಲ. ಮದ್ಯದಂಗಡಿಗಳ ಬಾಗಿಲಿಗೂ ಬೀಗ ಬಿದ್ದಿತ್ತು.

ಮಾರುಕಟ್ಟೆಗಳು ಬಂದ್‌: ಸಂಪೂರ್ಣ ಲಾಕ್‌ಡೌನ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಮೂರು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಿಗೂ ರಜೆ ಘೋಷಿಸಲಾಗಿತ್ತು. ಹೀಗಾಗಿ ಈ ದಿನ ಯಾವುದೇ ವಹಿವಾಟು ನಡೆಯಲಿಲ್ಲ. ರೈತರಿಗೆ ಮೊದಲೇ ಮಾಹಿತಿ ಸಿಕ್ಕಿದ್ದರಿಂದ ಯಾರೂ ಮಾರುಕಟ್ಟೆಗೆ ಗೂಡು ತಂದಿರಲಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಹ ರಜೆ ಘೋಷಣೆಯಾಗಿತ್ತು. ಸಂಜೆ ಮಾವು ಮಂಡಿಗಳು ಬಾಗಿಲು ತೆರೆಯಲಿಲ್ಲ.

ಅತ್ಯಗತ್ಯ ವಸ್ತುಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಹಾಲು, ಹಣ್ಣು, ತರಕಾರಿ, ದಿನಸಿ ಮಾರಾಟದ ಅಂಗಡಿಗಳು ತೆರೆದಿದ್ದವು. ಕೆಲವು ಕಡೆ ಬೆಳಗ್ಗೆ ಮಾಂಸದ ಅಂಗಡಿಗಳಲ್ಲೂ ಮಾರಾಟ ನಡೆಯಿತು. ಆಸ್ಪತ್ರೆ, ಕ್ಲಿನಿಕ್‌ಗಳು, ಔಷಧದ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಪೆಟ್ರೋಲ್‍ಗೆ ಪರದಾಟ: ಜಿಲ್ಲೆಯ ಪೆಟ್ರೋಲ್ ಬಂಕ್‍ಗಳು ಸಂಪೂರ್ಣವಾಗಿ ಬಾಗಿಲು ಹಾಕಿದ್ದವು. ಇದರಿಂದಾಗಿ ಪೆಟ್ರೋಲ್ ಸಿಗದೆ ವಾಹನ ಸವಾರರು ಪರದಾಡಿದರು. ತೈಲ ನೀಡುವಂತೆ ಮಾಲೀಕರ ಮುಂದೆ ಗೋಗರಿಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.

ನಗರದ ಪ್ರಮುಖ ವೃತ್ತಗಳೂ, ಜಿಲ್ಲೆಯ ಗಡಿ ಭಾಗಗಳಲ್ಲಿ ಪೊಲೀಸರು ಚೆಕ್‌ ಪೋಸ್ಟ್ ಹಾಕಿದ್ದು, ಅನಗತ್ಯವಾಗಿ ರಸ್ತೆಗೆ ಇಳಿದವರನ್ನು ಎಚ್ಚರಿಕೆ ನೀಡಿ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT