ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಮಳೆ ಶುರುವಾದರೂ ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ

ರಾಡಿಯಾಗುವ ರಸ್ತೆಗಳು; ವಾಹನ ಸವಾರರು, ಪಾದಚಾರಿಗಳ ಪರದಾಟಕ್ಕಿಲ್ಲ ಕೊನೆ
Published 25 ಮೇ 2024, 5:15 IST
Last Updated 25 ಮೇ 2024, 5:15 IST
ಅಕ್ಷರ ಗಾತ್ರ

ರಾಮನಗರ: ಮಳೆ ಬಂದರೆ ನಗರದ ಹಲವು ರಸ್ತೆಗಳು ಕೆಸರಿನ ರಾಡಿಯಾಗಿ ಮಾರ್ಪಡುತ್ತವೆ. ಇನ್ನುಳಿದ ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತು ಸಣ್ಣ ದ್ವೀಪಗಳಂತೆ ಭಾಸವಾಗುತ್ತವೆ. ಗಲ್ಲಿ ರಸ್ತೆಗಳಿಂದಿಡಿದು ಕೆಲ ಮುಖ್ಯರಸ್ತೆಗಳು ಸ್ಥಿತಿಯೂ ವಿಭಿನ್ನವಾಗಿಲ್ಲ. ಮುಂಗಾರು ಪೂರ್ವ ಮಳೆ ಶುರುವಾದರೂ ನಗರದ ರಸ್ತೆಗಳು ಮುಂಗಾರು ಮಳೆಯ ಅಬ್ಬರ ಎದುರಿಸಲು ಸಜ್ಜಾಗದೆ, ಇನ್ನೂ ಹದಗೆಟ್ಟ ಸ್ಥಿತಿಯಲ್ಲೇ ಇವೆ.

ಮಾಗಡಿ ರಸ್ತೆ, ಕೆಂಪೇಗೌಡ ವೃತ್ತ, ರೈಲು ನಿಲ್ದಾಣ ರಸ್ತೆ, ಹಳೆ ಬಸ್ ನಿಲ್ದಾಣ ರಸ್ತೆ, ಮುಖ್ಯ ರಸ್ತೆ, ಎಂ.ಜಿ. ರಸ್ತೆ, ಯಾರಬ್ ನಗರ, ಕೋರ್ಟ್ ರಸ್ತೆ, ಐಜೂರು, ಗಾಂಧಿನಗರ, ವಿವೇಕಾನಂದನಗರ ಸೇರಿದಂತೆ ನಗರದ ಯಾವುದೇ ಭಾಗಕ್ಕೆ ಹೋದರೂ ಹದಗೆಟ್ಟ ರಸ್ತೆಗಳ ದರ್ಶನವಾಗುತ್ತದೆ. ಮಳೆಬಂದರೆ ಈ ರಸ್ತೆಗಳಲ್ಲಿ ಹೋಗಲು ಪಾದಚಾರಿಗಳಷ್ಟೇ ಅಲ್ಲದೆ ವಾಹನ ಸವಾರರು ಕೂಡ ಪ್ರಯಾಸಪಡಬೇಕಾಗಿದೆ. ಅಷ್ಟರ ಮಟ್ಟಿಗೆ ಹದಗೆಟ್ಟಿವೆ.

ಕಾಮಗಾರಿಯೂ ಕಾರಣ: ನಗರಕ್ಕೆ 24X7 ನೀರು ಪೂರೈಕೆ ಮಾಡುವ ಮಹತ್ವಕಾಂಕ್ಷಿ ಯೋಜನೆಯನ್ನು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಕೈಗೊಂಡಿದೆ. ಕಾಮಗಾರಿ ಸಹ ತೆವಳುತ್ತಾ ಸಾಗಿದೆ. ಪೈಪ್‌ ಅಳವಡಿಕೆಗಾಗಿ ನಗರದಾದ್ಯಂತ ರಸ್ತೆ ಅಗೆಯಲಾಗಿದ್ದು, ಅವುಗಳನ್ನು ಮತ್ತೆ ಹಿಂದಿನ ಸ್ಥಿತಿಯಲ್ಲಿದ್ದಂತೆ ದುರಸ್ತಿ ಮಾಡುವಲ್ಲಿ ಮಂಡಳಿ ನಿರ್ಲಕ್ಷ್ಯ ತೋರಿದೆ.

‘ಎಂ.ಜಿ. ರಸ್ತೆ ಸೇರಿದಂತೆ ಆಸುಪಾಸಿನ ಗಲ್ಲಿ ರಸ್ತೆಗಳಲ್ಲಿ ಕಾಮಗಾರಿಗಾಗಿ ಅಗೆದು, ಬೇಕಾಬಿಟ್ಟಿಯಾಗಿ ಮಣ್ಣು ಮುಚ್ಚಿ ಹೋಗಿದ್ದಾರೆ. ಮಳೆ ಬಂದರೆ ಇಡೀ ರಸ್ತೆಯು ಕೆಸರುಮಯವಾಗುತ್ತದೆ. ನಡೆದುಕೊಂಡು ಓಡಾಡುವುದಕ್ಕೂ ಕಷ್ಟವಾಗುತ್ತದೆ. ರಸ್ತೆ ಅಗೆದವರು ಸರಿಯಾಗಿ ಮುಚ್ಚಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಎಂ.ಜಿ. ರಸ್ತೆಯ ಸೂರ್ಯ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಅಪಘಾತಕ್ಕೆ ಕಾರಣ: ಕೆಸರುಮಯ ರಸ್ತೆಗಳು ಸಣ್ಣಪುಟ್ಟ ಅಪಘಾತಗಳಿಗೂ ಕಾರಣವಾಗುತ್ತಿವೆ. ಮಾಗಡಿ ರಸ್ತೆ, ಕೆಂಪೇಗೌಡ ವೃತ್ತ, ಎಂ.ಎಚ್. ಕಾಲೇಜು ರಸ್ತೆ, ರೈಲು ನಿಲ್ದಾಣ ರಸ್ತೆ, ರೈಲ್ವೆ ಕೆಳ ಸೇತುವೆ ಸೇರಿದಂತೆ ಹಲವೆಡೆ ಇರುವ ರಸ್ತೆ ಗುಂಡಿಗಳು ಅಪಘಾತದ ಬ್ಲಾಕ್ ಸ್ಪಾಟ್‌ಗಳಾಗಿವೆ. ದ್ವಿಚಕ್ರ ವಾಹನ ಸವಾರರು ಸ್ವಲ್ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದಲ್ಲ.

‘ಒಂದು ವರ್ಷದಿಂದ ಎಂ.ಎಚ್. ಕಾಲೇಜು ರಸ್ತೆಯ ಸ್ಥಿತಿ ಬದಲಾಗಿಲ್ಲ. ಕಾಮಗಾರಿಗಾಗಿ ರಸ್ತೆ ಅಗೆದವರು ಮಣ್ಣನ್ನು ಹಾಗೆಯೇ ತೇಪೆ ಹಾಕಿ ಹೋದರು. ಮಳೆ ಬಂದರೆ ಇಡೀ ರಸ್ತೆ ಕೆಸರಿನ ರಾಡಿಯಾಗುತ್ತದೆ. ಕಾಲೇಜಿನ ಬೈಕ್‌ಗಳಲ್ಲಿ ಬರುವ ವಿದ್ಯಾರ್ಥಿಗಳು ಎಷ್ಟೋ ಸಲ ಸ್ಕಿಡ್ ಆಗಿ ಬಿದ್ದಿದ್ದಾರೆ. ನಡೆದುಕೊಂಡು ಹೋಗುವಾಗ ವಾಹನ ಬಂದರೆ, ಕೆಸರು ಮೈಗೆ ಹಾರುತ್ತದೆ. ರಸ್ತೆ ದುರಸ್ತಿಗಾಗಿ ಹಿಂದೆ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಬೇಸರ ತೋಡಿಕೊಂಡರು.

ರಾಮನಗರದ ರೈಲು ನಿಲ್ದಾಣ ರಸ್ತೆ ಹದಗೆಟ್ಟ ವರ್ಷವಾದರೂ ಇದುವರೆಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರದ ರೈಲು ನಿಲ್ದಾಣ ರಸ್ತೆ ಹದಗೆಟ್ಟ ವರ್ಷವಾದರೂ ಇದುವರೆಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿರುವ ರಾಮನಗರದ ಜನನಿಬಿಡ ಮುಖ್ಯರಸ್ತೆ 
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿರುವ ರಾಮನಗರದ ಜನನಿಬಿಡ ಮುಖ್ಯರಸ್ತೆ  ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ಮಳೆ ಬಂದರೂ ನಮ್ಮ ರಸ್ತೆಗಳು ಇನ್ನು ಹದಗೆಟ್ಟ ಸ್ಥಿತಿಯಲ್ಲೇ ಇವೆ ಎಂದರೆ ಸ್ಥಳೀಯ ಆಡಳಿತ ಮಳೆಗಾಲ ಎದುರಿಸಲು ಸನ್ನದ್ಧವಾಗಿಲ್ಲ ಎಂದರ್ಥ. ರಸ್ತೆಗಳನ್ನು ಉತ್ತಮವಾಗಿ ಇಡಲು ಸಾಧ್ಯವಾಗದಿದ್ದರೆ ಜನ ಯಾಕೆ ತೆರಿಗೆ ಕೊಡಬೇಕು?

-ಸಮದ್ ಐಜೂರು

ಜನ ಬಯಸುವುದೇ ರಸ್ತೆ ಚರಂಡಿ ಹಾಗೂ ಸ್ವಚ್ಛತೆಯನ್ನು. ನಗರಸಭೆಯವರು ಮಳೆ ಬಂದರೂ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚದಿದ್ದರೆ ಜೋರು ಮಳೆ ಶುರುವಾದಾಗ ನಗರದ ಸ್ಥಿತಿ ಅಧೋಗತಿ ತಲುಪಲಿದೆ

-ವಿಕಾಸ್ ಕೆಂಪೇಗೌಡನದೊಡ್ಡಿ

ಹದಗೆಟ್ಟ ರಸ್ತೆಗಳಿಂದ ಜನರ ಓಡಾಟಕ್ಕೆ ತೊಂದರೆಯಾಗುವುದಷ್ಟೇ ಅಲ್ಲದೆ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತದೆ. ಮುಂಗಾರು ಆರಂಭಕ್ಕೂ ಮುನ್ನವೇ ನಗರದ ರಸ್ತೆಗಳನ್ನು ದುರಸ್ತಿ ಮಾಡಬೇಕು

-ಮಮತಾ ಶೆಟ್ಟಿಹಳ್ಳಿ ಬೀದಿ

ರಸ್ತೆ ದುರಸ್ತಿಗೆ ಚಾಲನೆ: ಪೌರಾಯುಕ್ತ

‘ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಇಪ್ಪತ್ತು ದಿನಗಳ ಹಿಂದೆಯೇ ಚಾಲನೆ ನೀಡಲಾಗಿದೆ. ಮೊದಲ ಮಳೆ ಬಿದ್ದಾಗಲೇ ಜಿಲ್ಲಾಧಿಕಾರಿ ಅವರು ಸಭೆ ನಡೆಸಿ ಮಳೆಗಾಲಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನೆ ನೀಡಿದ್ದರು. ಅದರಂತೆ ನಗರಸಭೆಗೆ ವ್ಯಾಪ್ತಿಗೆ ಒಳಪಡುವ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿದೆ. ಜೊತೆಗೆ ರಾಜಕಾಲುವೆ ಮತ್ತು ಚರಂಡಿಗಳಲ್ಲಿ ಹೂಳು ತೆಗೆಯುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಎಲ್. ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ವತಿಯಿಂದ ನಡೆಯುತ್ತಿರುವ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಅವರೇ ದುರಸ್ತಿಗೊಳಿಸಬೇಕಿದೆ. ಆದರೆ ಇನ್ನು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ದುರಸ್ತಿ ಕೆಲಸ ನಡೆದಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT