ಹಾರೋಹಳ್ಳಿ: ಹಾರೋಹಳ್ಳಿಯ ಬಿರಿಯಾನಿ ಎಂದರೆ ಅದು ರಾಮಣ್ಣ ಧಮ್ ಬಿರಿಯಾನಿ. ಕಳೆದ 9 ವರ್ಷಗಳಿಂದ ರುಚಿಕರ ಹಾಗೂ ಗುಣಮಟ್ಟದ ಬಿರಿಯಾನಿಗೆ ಹೆಸರುವಾಸಿಯಾಗಿದೆ ರಾಮಣ್ಣ ಧಮ್ ಬಿರಿಯಾನಿ.
ಹಾರೋಹಳ್ಳಿ ಪಟ್ಟಣದ ಬಿಡದಿ ರಸ್ತೆಯಲ್ಲಿರುವ ರಾಮಣ್ಣ ಧಮ್ ಬಿರಿಯಾನಿ ಹೋಟೆಲ್ ಸುತ್ತಮುತ್ತಲಿನ ಜನರ ಮೆಚ್ಚುಗೆ ಪಡೆದಿದೆ. ಪಟ್ಟಣ ಸೇರಿದಂತೆ ಹೊರ ಊರುಗಳಿಂದ ಬಂದವರಿಗೆ ರುಚಿಯಾದ ಬಿರಿಯಾನಿ ಜೊತೆಗೆ, ಕಾಲ್‌ಸೂಪ್, ಬೋಟಿ ಫ್ರೈ, ಚಿಕನ್ ಕಬಾಬ್, ಚಿಕನ್ ಫ್ರೈ ಮತ್ತು ಮಟನ್ ಫ್ರೈ, ಮಟನ್ ಸಾಂಬಾರ್, ಕೈಮಾ, ಲಿವರ್ ಫ್ರೈ, ಬ್ಲಡ್ ಫ್ರೈ ಮತ್ತು ತಲೆ ಮಾಂಸ ಸೇರಿದಂತೆ ಹಲವು ಖಾದ್ಯಗಳು ನಾಲಿಗೆಯ ರುಚಿ ಮೊಗ್ಗುಗಳನ್ನು ತಣಿಸುವಂತಿರುತ್ತವೆ. ಹೋಟಲ್ ಸದಾ ಗ್ರಾಹಕರಿಂದ ತುಂಬಿರುತ್ತದೆ. ಮದ್ಯಾಹ್ನ ಊಟದ ಸಮಯದಲ್ಲಿ ಹೋಟೆಲ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ.
ಶ್ರೀನಿವಾಸ್ ಗೌಡ ಮಾಲೀಕತ್ವದಲ್ಲಿ 9 ವರ್ಷಗಳ ಹಿಂದೆ ಪ್ರಾರಂಭವಾದ ಹೋಟೆಲ್ ಬೆಳಗಿನ 10.30ಕ್ಕೆ ಪ್ರಾರಂಭವಾಗಿ, ರಾತ್ರಿ 10.30ರವರೆಗೆ ತೆರೆದಿರುತ್ತದೆ. ಅವರಿಗೆ ಸಹೋದರ ಕೈ ಜೋಡಿಸಿದ್ದಾರೆ.
ಹಾರೋಹಳ್ಳಿ ಪಟ್ಟಣದ ಬಿಡದಿ ರಸ್ತೆಯಲ್ಲಿರುವ ರಾಮಣ್ಣ ಧಮ್ ಬಿರಿಯಾನಿ ಹೋಟೆಲ್
‘ಮೊದಲು ಬೇರೆ ಹೋಟಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲ ವರ್ಷಗಳ ನಂತರ ನಮ್ಮದೇ ಹೋಟೆಲ್ ತೆರೆಯಬೇಕು ಎನಿಸಿತು. ಆರಂಭದಿಂದಲೂ ಗ್ಡಾಹಕರಿಗೇನೂ ಕೊರತೆ ಇಲ್ಲ. ದಿನಕ್ಕೆ 10-11 ಸಾವಿರ ವ್ಯಾಪಾರವಾಗುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕ ಶ್ರೀನಿವಾಸ್ ಗೌಡ.
ಗ್ರಾಹಕರ ಅನುಕೂಲಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ನೀಡುವ ಹಣಕ್ಕೆ ಮೋಸವಾಗದಂತೆ ಆಹಾರ, ಸ್ವಚ್ಛತೆ ಹಾಗೂ ಸೇವೆ ನೀಡುವುದೇ ನಮ್ಮ ಗುರಿ ಎನ್ನುತ್ತಾರೆ ಅವರು.
ಆಹಾರದ ಗುಣಮಟ್ಟದ ದೃಷ್ಠಿಯಿಂದ ಕುರಿ, ಮೇಕೆ ಮತ್ತು ಕೋಳಿ ಮಾಂಸ ತಂದು ಸ್ವಚ್ಛಗೊಳಿಸಿ, ಸೌದೆಯ ಒಲೆಯಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತದೆ. ಯಾವುದೇ ರಾಸಾಯನಿಕ ಮಸಾಲೆ ಅಥವಾ ಬಣ್ಣಗಳನ್ನು ಬಳಸದೇ ಸ್ವತಃ ಮಸಾಲೆ ತಯಾರಿಸಿ ಬಳಸುತ್ತಾರೆ. ಇದರಿಂದ ಅಡುಗೆಯ ಸ್ವಾದವೂ ಹೆಚ್ಚುತ್ತದೆ, ಗ್ರಾಹಕರ ಆರೋಗ್ಯಕ್ಕೂ ಕೆಡುಕಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.