ಬುಧವಾರ, ಡಿಸೆಂಬರ್ 7, 2022
22 °C
ಮೀನುಗಾರಿಕೆ ಸಹಾಯವಾಣಿಗೆ ಚಾಲನೆ

ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಸಚಿವ ಎಸ್‌. ಅಂಗಾರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಇಲ್ಲಿನ ನಲ್ಲಿಗುಡ್ಡೆಯ ಕೆರೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಮೀನುಗಾರಿಕೆ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಮೀನುಗಾರಿಕೆಯ ಮಾಹಿತಿ ನೀಡುವ ಸಹಾಯವಾಣಿ 8277200300ಕ್ಕೆ ಚಾಲನೆ ದೊರೆಕಿದೆ. ಇದಕ್ಕೆ ಕರೆ ಮಾಡಿ ಸದುಪಯೋಗಪಡೆಯಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲು ಹಾಗೂ ಅವರು ಮಾಡಿದ ಶ್ರಮ ತಿಳಿಸಲು ಮೀನು ಕೃಷಿಕರ ದಿನ ಆಚರಿಸಲಾಗುತ್ತದೆ. ಹೀರಾಲಾಲ್ ಚೌದರಿ ಅವರ ಸಾಧನೆ ಅಂಗವಾಗಿ ಜುಲೈ 10ರಂದು ಮೀನು ಕೃಷಿಕರ ದಿನ ಆಚರಿಸಲಾಗುತ್ತಿದೆ. ಮೀನು ಕೃಷಿಗೆ ಪ್ರೋತ್ಸಾಹ ನೀಡಲು ಪ್ರಧಾನ ಮಂತ್ರಿ ಮತ್ಸ ಸಂಪದ ಹಾಗೂ ಇನ್ನಿತರ ಯೋಜನೆಯಡಿ ಸಹಾಯ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜನರ ಯೋಚನೆ ಹಾಗೂ ಜೀವನಶೈಲಿಗೆ ತಕ್ಕಂತೆ ಕೃಷಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನೀತಿ ರೂಪಿಸಿ ಅಭಿವೃದ್ಧಿಪಡಿಸಬೇಕಿದೆ. ಮೀನು ಉತ್ಪಾದನೆಯ ಜೊತೆ ಮಾರಾಟಕ್ಕೆ ಪೂರಕ ವ್ಯವಸ್ಥೆ ಮಾಡಿಕೊಂಡಾಗ ಹೆಚ್ಚು ಲಾಭಗಳಿಸಬಹುದು. ಕರಾವಳಿ ಹಾಗೂ ಒಳನಾಡಿನಲ್ಲಿ ಬೇರೆ ಬೇರೆ ರೀತಿ ಮೀನು ಕೃಷಿ ಇದೆ. ಇವುಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ರೈತರು ಸಮಗ್ರ ಕೃಷಿ ಬಗ್ಗೆ ಮಾಹಿತಿ ಪಡೆಯಬೇಕಾದರೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆ ಸುತ್ತಬೇಕು. ಇದು ರೈತನಿಗೆ ಕಷ್ಟಕರ. ಇದರ ಬದಲಿಗೆ ಎಲ್ಲಾ ಮಾಹಿತಿ ಒಂದೇ ಕಡೆ ಸಿಗುವಂತಾಗಬೇಕು‌ ಎಂದು
ಹೇಳಿದರು.

ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಪ್ರಧಾನ ಮಂತ್ರಿ ಮತ್ಸ ಯೋಜನೆ ರೂಪಿಸಿ ವಿವಿಧ ರೀತಿಯಲ್ಲಿ ಸಹಾಯಧನ ನೀಡಲಾಗುತ್ತಿದೆ. ಯುವಕರು ಸ್ವಾವಲಂಬಿಯಾಗಲು ಕೃಷಿಯೇ ರಹದಾರಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೃಷಿ ಅಥವಾ ಯಾವುದೇ ಉದ್ದಿಮೆ ರೂಢಿಸಿಕೊಂಡರೂ ಎಚ್ಚರಿಕೆ ಹಾಗೂ ಜ್ಞಾನ ಇರಬೇಕು ಎಂದು ಸಲಹೆ ನೀಡಿದರು.

ಸದೃಢ ಆರೋಗ್ಯದ ಹಿನ್ನೆಲೆಯಲ್ಲಿ ಇಂದು ಆಹಾರದಲ್ಲಿ ಜನರು ಮೀನಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಮೀನು ಕೃಷಿ ಕೂಡ ಲಾಭದಾಯಕ ಉದ್ದಿಮೆಯಾಗಿದೆ. ಈ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವವರು ಆಸಕ್ತಿ ಹಾಗೂ ಜವಾಬ್ದಾರಿ ರೂಢಿಸಿಕೊಳ್ಳಬೇಕು. ಕೃಷಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ. ಮುಂದಿನ ದಿನದಲ್ಲಿ ಇಡೀ ಭಾರತದ ಚಿತ್ರಣವನ್ನೇ ಬದಲಾಯಿಸಲಿದೆ‌ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸಿ‌.ಎಂ. ಲಿಂಗಪ್ಪ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್, ಮೀನು ಕೃಷಿಕರಾದ ಅರುಣಾಚಲಂ, ಪುರಸಭೆ ಮಾಜಿ ಸದಸ್ಯರಾದ ರಮೇಶ್, ಸಿ. ಲೋಕೇಶ್, ಸಿ. ಉಮೇಶ್, ಸರಸ್ವತಿ ರಮೇಶ್ ಕುಮಾರ್, ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು