ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಹೊರಗಷ್ಟೇ ಥಳುಕು; ಒಳಗಡೆ ಹುಳುಕು

ಅತ್ತಿಹಳ್ಳಿ: ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ, ದುರಸ್ತಿ ನಿರೀಕ್ಷೆಯಲ್ಲಿ ಡಿಸಿಎಂ ತವರಿನ ಪ್ರೌಢಶಾಲೆ
Published 22 ಜೂನ್ 2024, 6:01 IST
Last Updated 22 ಜೂನ್ 2024, 6:01 IST
ಅಕ್ಷರ ಗಾತ್ರ

ಕನಕಪುರ: ಈ ಶಾಲಾ ಕಟ್ಟಡವನ್ನು ಹೊರಗಡೆಯಿಂದ ನೋಡಿದರೆ, ಇಷ್ಟೊಂದು ಚನ್ನಾಗಿದೆ ಎಂದು ಯಾರಿಗಾದರೂ ಅನಿಸದೇ ಇರದು. ಆದರೆ, ಕಟ್ಟಡದೊಳಗೆ ಭೇಟಿ ನೀಡಿದರೆ, ಕೊಠಡಿಗಳನ್ನು ಪರಿಶೀಲಿಸಿದರೆ ಅದರ ಶಿಥಿಲಾವಸ್ಥೆ ತಲುಪಿರುವ ಕಟ್ಟಡದ ನೈಜ ಬಂಡವಾಳ ಏನೆಂದು ಗೊತ್ತಾಗುತ್ತದೆ. ಆದರೂ, ಪೇಂಟಿಂಗ್ ಮಾಡಿ ಹುಳುಕು ಮರೆಮಾಚಲು ಯತ್ನಿಸಲಾಗಿದೆ. ಹಾಗಾಗಿ, ಈ ಶಾಲೆ ನೋಡುವುದಕ್ಕೆ ಹೊರಗೆ ಥಳುಕು, ಒಳಗೆ ಹುಳುಕು ಎಂಬಂತಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರದ ಸಾತನೂರು ಹೋಬಳಿಯ ಅರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅತ್ತಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಸ್ಥಿತಿ ಇದು.

ನಲವತ್ತು ವರ್ಷಗಳ ಹಿಂದೆ ಕಟ್ಟಿರುವಂತಹ ಇಲ್ಲಿನ ಶಾಲಾ ಕಟ್ಟಡಗಳು ಗಟ್ಟಿಯಾಗಿ ಸುಸ್ಥಿತಿಯಲ್ಲಿದ್ದರೆ, ಹತ್ತನ್ನೆರಡು ವರ್ಷಗಳ ಹಿಂದೆ ನಿರ್ಮಿಸಿರುವ ಕೊಠಡಿಗಳು ಶೋಚನೀಯ ಸ್ಥಿತಿ ತಲುಪಿವೆ. ಆದಷ್ಟು ಬೇಗ ದುರಸ್ತಿ ಮಾಡದಿದ್ದರೆ ಅಥವಾ ಕೆಡವವಿದ್ದರೆ, ಮುಂದೊಂದು ದಿನ ನೆಲಕಚ್ಚುವುದು ಮಾತ್ರ ಖಚಿತ.

ಸೋರುವ ಚಾವಣಿ, ತುಕ್ಕು ಹಿಡಿದ ಕಬ್ಬಿಣ: 1984ರಲ್ಲಿ ಪ್ರಾರಂಭಗೊಂಡ ಅತ್ತಿಹಳ್ಳಿ ಸರ್ಕಾರಿ ಶಾಲೆ ಎಂದರೆ, ಸುತ್ತಲಿನ ಹತ್ತು ಹಳ್ಳಿಗಳಿಗೆ ಹೆಸರಾಗಿತ್ತು. ಶಾಲೆಯ ಆವರಣ, ವಿಶಾಲವಾದ ಮೈದಾನ, ಶೈಕ್ಷಣಿಕ ಪ್ರಗತಿ, ಸಾಂಸ್ಕೃತಿಕ ಮತ್ತು ಕ್ರೀಡೆ ಚಟುವಟಿಕೆಗಳಿಂದಾಗಿ ಗ್ರಾಮವು ಗಮನ ಸೆಳೆದಿತ್ತು. ಒಂದೊಮ್ಮೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಅಂತಹ ಶಾಲೆ ಇದೀಗ, ಶಿಥಿಲಾವಸ್ಥೆ ತಲುಪಿ ಅವನತಿ ಹಂತಕ್ಕೆ ಬಂದಿದೆ.

ಹಳೆಯದಾದ ಕೊಠಡಿಗಳ ಚಾವಣಿಯಿಂದ ಮಳೆ ನೀರು ಸೋರುತ್ತದೆ. ಆರ್‌ಸಿಸಿಗೆ ಬಳಸಿರುವ ಕಬ್ಬಿಣದ ರಾಡುಗಳು ತುಕ್ಕು ಹಿಡಿದಿದ್ದು, ಹೊರಕ್ಕೆ ಗೋಚರಿಸುತ್ತಿವೆ. ತಾರಸಿಯ ಕಾಂಕ್ರೀಟ್ ಚಕ್ಕೆಯಂತೆ ಮೇಲಕ್ಕೆದ್ದು ಉದುರುತ್ತಿದೆ. ಮಳೆಗಾಲ ಬಂದರೆ ಮೇಲಿನಿಂದ ನೀರು ತೊಟ್ಟಿಕ್ಕುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕದಲ್ಲೇ ಕಾಲ ಕಳೆಯಬೇಕಾಗಿದೆ.

5 ಕೊಠಡಿ ಶಿಥಿಲ: ಹಳೆಯ ಶಾಲಾ ಕಟ್ಟಡದಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ 2012ರಲ್ಲಿ 3 ಕೊಠಡಿ ಹಾಗೂ 2014ರಲ್ಲಿ 2 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. 40 ವರ್ಷಗಳ ಹಿಂದೆ ನಿರ್ಮಾಣ ಮಾಡಿದ 4 ಕೊಠಡಿಗಳು ಗಟ್ಟಿಮುಟ್ಟಾಗಿ ಸುಸ್ಥಿತಿಯಲ್ಲಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ 5 ಕೊಠಡಿಗಳು ಕಳಪೆಯಾಗಿದ್ದು ಆರ್‌ಸಿಸಿ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಎನ್ನುತ್ತಾರೆ ಸ್ಥಳೀಯರು.

ಕೊಠಡಿಗಳು ಶಿಥಿಲವಾಗಿರುವುದರಿಂದ 3 ಕೊಠಡಿಗಳ ಪೈಕಿ ಒಂದನ್ನು ಅಡುಗೆ ಕೋಣೆ, ಮತ್ತೊಂದು ಶಿಕ್ಷಕರ ವಿಶ್ರಾಂತಿ ಕೊಠಡಿ ಹಾಗೂ ಇನ್ನೊಂದನ್ನು ಕಲಿಕಾ ಸಾಮಗ್ರಿ ಇಡಲು ಬಳಸಿಕೊಳ್ಳಲಾಗುತ್ತಿದೆ. ಕೊಠಡಿಗಳ ದುರಸ್ತಿ ಮಾಡುವಂತೆ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದವರು ಮತ್ತು ಪೋಷಕರು ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಪತ್ರ ಬರೆದು ಒತ್ತಾಯಿಸುತ್ತಲೇ ಬಂದಿದ್ದಾರೆ. 

ಶೀಟು ಅಳವಡಿಕೆ: ಶಾಲೆಯ ಶಿಕ್ಷಕರ ಒತ್ತಾಯದ ಮೇರೆಗೆ ಶಿಕ್ಷಣ ಇಲಾಖೆಯು 2022-23ರಲ್ಲಿ ಚಾವಣಿಯಲ್ಲಿನ ಸೋರಿಕೆ ತಡೆಗಟ್ಟಲು ಕಟ್ಟಡದ ಎರಡು ಕೊಠಡಿಗಳ ಮೇಲೆ ತಗಡಿನ ಶೀಟುಗಳನ್ನು ಅಳವಡಿಸಲಾಗಿದೆ. ಆದರೆ, ಇನ್ನು ಮೂರು ಕೊಠಡಿಗಳ ಮೇಲೆ ನಿರ್ಮಾಣ ಮಾಡಿಲ್ಲ. ಹಾಗಾಗಿ, ಮಳೆ ಬಂದರೆ ಈ ಕೊಠಡಿಗಳಲ್ಲಿ ಸೋರಿಕೆ ತಪ್ಪಿದ್ದಲ್ಲ.

‘ಶಾಲೆಗೆ ಪ್ರತಿ ವರ್ಷ ಶೇ 100ರಷ್ಟ ಫಲಿತಾಂಶ ಬರುತ್ತಿದೆ. ಸರ್ಕಾರಿ ಶಾಲೆಯಾದರೂ ಹೆಸರುವಾಸಿ ಆಗಿರುವುದರಿಂದ ಗೇರಹಳ್ಳಿ, ಯಲವಳ್ಳಿ, ಅತ್ತಿಹಳ್ಳಿ, ಕಚ್ಚುವನಹಳ್ಳಿ, ಸೂರನಹಳ್ಳಿ, ಗ್ರಾಮಗಳ ಮಕ್ಕಳು ಈ ಶಾಲೆಗೆ ಬಂದು ದಾಖಲಾಗುತ್ತಾರೆ. ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಹೇಳುತ್ತದೆ. ಆದರೆ ಅದಕ್ಕೆ ತಕ್ಕ ಸೌಕರ್ಯಗಳನ್ನು ಕೊಡಬೇಕಿದೆ. ಪ್ರಮುಖವಾಗಿ ಶಾಲಾ-ಕೊಠಡಿಗಳು, ಶೌಚಾಲಯ, ಕುಡಿಯುವ ನೀರು ಒದಗಿಸಿ, ಶಾಲೆಗಳನ್ನು ಸಬಲೀಕರಿಸಬೇಕಿದೆ’ ಎಂದು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹೊಸ ಕಟ್ಟಡದ ಅಗತ್ಯವಿದೆ: ‘ಹೆಚ್ಚುವರಿಯಾಗಿ ನಿರ್ಮಿಸಿದ್ದ ಶಾಲಾ ಕೊಠಡಿಗಳು ಗುಣಮಟ್ಟವಿಲ್ಲದೆ ಬೇಗನೆ ಹಾಳಾಗಿವೆ. ಆರ್‌ಸಿಸಿ ಸೀಲಿಂಗ್ ಸೋರುತಿದ್ದು, ಕಬ್ಬಿಣದ ಸರಳುಗಳು ಆಚೆ ಬಂದಿವೆ. ಕಾಂಕ್ರೀಟ್ ಕಳಚಿ ಬೀಳುತ್ತಿದೆ. ಮಕ್ಕಳ ತಲೆ ಮೇಲೆ ಬಿದ್ದು ಅನಾಹುತವಾದರೆ ಎಂಬ ಆತಂಕದಿಂದ  3 ಕೊಠಡಿಗಳನ್ನು ಬಳಕೆ ಮಾಡುತ್ತಿಲ್ಲ. ದುಃಸ್ಥಿತಿಯಲ್ಲಿರುವ ಕೊಠಡಿಗಳನ್ನು ಒಡೆದು ಹಾಕಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕಿದೆ. ಈ ಕುರಿತು ಇಲಾಖೆಗೂ ಮನವಿ ಮಾಡಲಾಗಿದೆ’ ಎಂದು ಶಾಲೆಯ ಸಹ ಶಿಕ್ಷಕ ಬಿ.ವಿ. ವೆಂಕಟೇಶ್‌ಮೂರ್ತಿ ಹೇಳಿದರು.

ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಪ್ರೌಢಶಾಲೆಯ ಕಿಟಕಿಗಳು ತುಕ್ಕ ಹಿಡಿದಿರುವುದು
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಪ್ರೌಢಶಾಲೆಯ ಕಿಟಕಿಗಳು ತುಕ್ಕ ಹಿಡಿದಿರುವುದು
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಪ್ರೌಢಶಾಲೆಯ ಮುಂದೆ ನಿರ್ಮಿಸಿದ್ದ ಹಳೆಯ ಕಟ್ಟೆ ಒಡೆದಿರುವುದು
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಪ್ರೌಢಶಾಲೆಯ ಮುಂದೆ ನಿರ್ಮಿಸಿದ್ದ ಹಳೆಯ ಕಟ್ಟೆ ಒಡೆದಿರುವುದು
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹೊರನೋಟ
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹೊರನೋಟ
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಚಾವಣಿ ಶಿಥಿಲಾವಸ್ಥೆ ತಲುಪಿ ಸಿಮೆಂಟ್ ಕಾಂಕ್ರೀಟ್ ಉದುರಿ ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಹೊರಕ್ಕೆ ಗೋಚರಿಸುತ್ತಿವೆ
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಚಾವಣಿ ಶಿಥಿಲಾವಸ್ಥೆ ತಲುಪಿ ಸಿಮೆಂಟ್ ಕಾಂಕ್ರೀಟ್ ಉದುರಿ ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಹೊರಕ್ಕೆ ಗೋಚರಿಸುತ್ತಿವೆ
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಚಾವಣಿ ಶಿಥಿಲಗೊಂಡು ಸಿಮೆಂಟ್ ಕಾಂಕ್ರೀಟ್ ಚಕ್ಕೆಯಂತೆ ಮೇಲಕ್ಕೆದ್ದಿದೆ
ಕನಕಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಚಾವಣಿ ಶಿಥಿಲಗೊಂಡು ಸಿಮೆಂಟ್ ಕಾಂಕ್ರೀಟ್ ಚಕ್ಕೆಯಂತೆ ಮೇಲಕ್ಕೆದ್ದಿದೆ
ಜಿ.ಬಿ. ರಾಮಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
ಜಿ.ಬಿ. ರಾಮಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
ಕುಮಾರ್ ಅಧ್ಯಕ್ಷ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅತ್ತಿಹಳ್ಳಿ ಸರ್ಕಾರಿ ಪ್ರೌಢಶಾಲೆ
ಕುಮಾರ್ ಅಧ್ಯಕ್ಷ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅತ್ತಿಹಳ್ಳಿ ಸರ್ಕಾರಿ ಪ್ರೌಢಶಾಲೆ
ಗೇರಳ್ಳಿ ಕಿರಣ್ ಶಾಲೆಯ ಹಳೆ ವಿದ್ಯಾರ್ಥಿ
ಗೇರಳ್ಳಿ ಕಿರಣ್ ಶಾಲೆಯ ಹಳೆ ವಿದ್ಯಾರ್ಥಿ

ಅತ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಯು ಸ್ಥಳೀಯವಾಗಿ ಜನಪ್ರಿಯವಾಗಿದ್ದು ಮಕ್ಕಳ ದಾಖಲಾತಿಯೂ ಉತ್ತಮವಾಗಿದೆ. ಶಾಲಾ ಕಟ್ಟಡವು ಶಿಥಿಲವಾಗಿರುವ ಬಗ್ಗೆ ಮಾಹಿತಿ ಬಂದಿದ್ದು ಕಟ್ಟಡ ದುರಸ್ತಿಗೆ ಕ್ರಮ ಕೈಗೊಂಡು ಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು

– ಜಿ.ಬಿ. ರಾಮಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ

‘ಸ್ಪಂದಿಸದ ಜನಪ್ರತಿನಿಧಿಗಳು ಅಧಿಕಾರಿಗಳು’ ‘ನಮ್ಮೂರ ಶಾಲಾ ಕಟ್ಟಡವು ಶಿಥಿಲಗೊಂಡು ಹಾಳಾಗಿರುವ ಕುರಿತು ಸಂಸದರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಸುತ್ತಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ನಮ್ಮೂರ ಶಾಲೆಯೇ ಕೇಂದ್ರ ಸ್ಥಾನವಾಗಿದೆ. ಒಂದು ವೇಳೆ ಈ ಶಾಲೆ ಏನಾದರೂ ಮುಚ್ಚಿದರೆ ಬೇರಾವುದೇ ಶಾಲೆಗಳಿಲ್ಲ. ಬಡವರ ಮಕ್ಕಳಿಗೆ ಈ ಶಾಲಾ ತುಂಬಾ ಅನಿವಾರ್ಯವಾಗಿದೆ. ನಮ್ಮೂರ ಶಾಲೆ ಉಳಿವಿಗಾಗಿ ನಾವು ಹೋರಾಟ ಮಾಡುತ್ತಲೇ ಇದ್ದೇವೆ. ಹಳೆಯ ವಿದ್ಯಾರ್ಥಿಗಳು ಸಹ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. ಶಿಕ್ಷಣ ಇಲಾಖೆಯವರು ಹಾಳಾಗಿರುವ ಕೊಠಡಿಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಬೇಕು. ಒಟ್ಟಿನಲ್ಲಿ ನಮ್ಮೂರ ಶಾಲೆ ಉಳಿಸಿ ಕೊಡಬೇಕು ಎಂಬುದಷ್ಟೇ ನಮ್ಮ ಮನವಿ’ ಎಂದು ಅತ್ತಿಹಳ್ಳಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಕುಮಾರ್ ‘ಪ್ರಜಾವಾಣಿ’ ಮೂಲಕ ಮನವಿ ಮಾಡಿದರು. ‘ನಮ್ಮೂರ ಶಾಲೆ ಉಳಿಸಿ ಕೊಡಿ’ ‘ಶಾಲೆಯಲ್ಲಿ ಇದುವರೆಗೆ ಸಾವಿರಾರು ಮಂದಿ ವ್ಯಾಸಂಗ ಸರ್ಕಾರಿ ಹುದ್ದೆ ಸೇರಿದಂತೆ ವಿವಿಧ ಉನ್ನತ ಸ್ಥಾನದಲ್ಲಿದ್ದಾರೆ. ಸದ್ಯ ಶಾಲೆಯಲ್ಲಿ 60 ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಕಟ್ಟಡ ಒದಗಿಸಲಾಗದ ಸ್ಥಿತಿ ಇದೆ. ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಹೇಳುತ್ತದೆ. ಆದರೆ ಶಿಥಿಲಗೊಂಡಿರುವ ಕೊಠಡಿಗಳನ್ನು ಅಭಿವೃದ್ಧಿಪಡಿಸುವುದಿಲ್ಲ. ಇನ್ನಾದರೂ ಶಾಲೆಗಳತ್ತ ಗಮನ ಹರಿಸಬೇಕು. ಶಿಥಿಲಗೊಂಡಿರುವ ನಮ್ಮೂರ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿ ಕೊಡಬೇಕು. ಇತಿಹಾಸವಿರುವ ಶಾಲೆಯನ್ನು ಉಳಿಸಿ ಕೊಡಬೇಕು’ ಎಂದು ಶಾಲೆಯ ಹಳೆ ವಿದ್ಯಾರ್ಥಿ ಗೇರಳ್ಳಿ ಕಿರಣ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT