ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಟಲ್ ಭೂ ಜಲ: ಜಿಲ್ಲೆಯ ಪ್ರಗತಿಗೆ ಮೆಚ್ಚುಗೆ

ಲೋಕಸಭೆಯ ಸ್ಥಾಯಿ ಸಮಿತಿಯಿಂದ ‘ಅಟಲ್ ಭೂ ಜಲ’ ಯೋಜನೆಯ ಪ್ರಗತಿ ಪರಿಶೀಲನೆ
Published 13 ಜನವರಿ 2024, 7:22 IST
Last Updated 13 ಜನವರಿ 2024, 7:22 IST
ಅಕ್ಷರ ಗಾತ್ರ

ರಾಮನಗರ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕಸಭೆಯ ಜಲ ಸಂಪನ್ಮೂಲ ಸ್ಥಾಯಿ ಸಮಿತಿಯು ಶುಕ್ರವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಫಲಾನುಭವಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ, ರಾಮನಗರ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನ ಕುರಿತು ಸಮಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದ ಮಾಹಿತಿ ಕುರಿತು ರಾಜ್ಯ ಯೋಜನಾ ಅನುಷ್ಠಾನ ಘಟಕ ಹಾಗೂ ಜಿಲ್ಲಾ ಘಟಕದ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಿದರು. ಯೋಜನೆಯಡಿ, ಕನಕಪುರ ಹಾಗೂ ರಾಮನಗರ ತಾಲ್ಲೂಕಿನ 50 ಗ್ರಾಮ ಪಂಚಾಯಿತಿಗಳನ್ನು ಯೋಜನೆಯಡಿ ಪರಿಗಣಿಸಿ, ಪಾಲುದಾರ ಇಲಾಖೆಗಳಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ಮಾಹಿತಿ ನೀಡಿದರು.

ಸಮಿತಿ ಅಧ್ಯಕ್ಷ ಪರಭಾತ್ ಬಾಯಿ ಸವಾಬಾಯಿ ಪಟೇಲ್ ಮಾತನಾಡಿ, ‘ಯೋಜನೆಯು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಬೇಕಾದರೆ ಸಂಬಂಧಪಟ್ಟ ಇಲಾಖೆಗಳೆಲ್ಲೂ ಕೈ ಜೋಡಿಸಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಇದರಿಂದ ನಾಡಿನ ಅಭಿವೃದ್ಧಿಯಾಗುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

‘ಸಮುದಾಯದ ಸಹಭಾಗಿತ್ವವಿದ್ದಾಗ ಮಾತ್ರ ಯಾವುದೇ ಯೋಜನೆಯ ಯಶಸ್ಸಾಗಲು ಸಾಧ್ಯ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಅಟಲ್ ಭೂ ಜಲ ಯೋಜನೆ ಯಶಸ್ವಿಯಾಗಬೇಕಾದ ಜನರ ಸಹಭಾಗಿತ್ವ ಅತಿ ಮುಖ್ಯ. ವಿಶ್ವಬ್ಯಾಂಕ್ ನೆರವಿನೊಂದಿಗೆ ದೇಶದ 7 ರಾಜ್ಯಗಳಲ್ಲಿ ಅಟಲ್ ಭೂ ಜಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ‘ಕ್ಷೀಣಿಸುತ್ತಿರುವ ಅಂತರ್ಜಲ ಮಟ್ಟವನ್ನು ವೃದ್ಧಿಪಡಿಸಲು ಹಾಗೂ ನೀರನ್ನು ಮಿತವಾಗಿ ಬಳಸಲು ಯೋಜನೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಯೋಜನೆಯ ವ್ಯಾಪ್ತಿಯಲ್ಲಿರುವ ರಾಮನಗರ ಜಿಲ್ಲೆಯ 50 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಫಲಾನುಭವಿಗಳು ಹಾಗೂ ಪಂಚಾಯಿತಿ ಮಟ್ಟದ ಸಮಿತಿ ಸಭೆಯ ಸದಸ್ಯರು ಯೋಜನೆ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು. ಅಂತರ್ಜಲ ಉಳಿಸುವ ಜೊತೆಗೆ, ಮಿತವಾಗಿ ಬಳಸಲು ಕ್ರಮ ಕೈಗೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದ ಅವರು, ‘ಅಂತರ್ಜಲ ಅತಿಯಾಗಿ ಬಳಕೆಯಾಗುತ್ತಿರುವ ಇತರ ಪಂಚಾಯಿತಿಗಳಲ್ಲೂ ಸಹ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಸಮಿತಿ ಸದಸ್ಯರಿಗೆ ಮನವಿ ಮಾಡಿದರು.

ಸ್ಥಾಯಿ ಸಮಿತಿ ಸದಸ್ಯರಾದ ಹಸ್‍ಮುಖ್ ಬಾಯಿ ಸೋಮಾ ಬಾಯಿ ಪಟೇಲ್, ಸಂಸದರಾದ ವಿಜಯ್ ಭಗೇಲ್, ಅನಿಲ್ ಪ್ರಸಾದ್ ಹೆಗ್ಗಡೆ, ಸುನೀಲ್ ಕುಮಾರ್, ಕುರುವ ಗೊರಂಟ್ಲಾ ಮಾಧವ್, ಕೇಂದ್ರ ಜಲ ಆಯೋಗದ ಅಧ್ಯಕ್ಷ ಕುಶ್ವಿಂದರ್ ವೋಹ್ರಾ, ಕೇಂದ್ರ ಅಂತರ್ಜಲ ಮಂಡಳಿ ಅಧ್ಯಕ್ಷ ಸುನೀಲ್‌ಕುಮಾರ್ ಅಂಬಸ್ತ್, ಕೇಂದ್ರೀಯ ನಿದೇರ್ಶಕ ಎನ್. ಜ್ಯೋತಿ ಕುಮಾರ್, ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ ಯಾದವ್, ಅಟಲ್ ಯೋಜನೆ ರಾಷ್ಟ್ರೀಯ ಯೋಜನಾ ನಿರ್ದೇಶಕ ಪ್ರತುಲ್ ಸಕ್ಸೇನಾ, ಲೋಕಸಭಾ ಸಚಿವಾಲಯದ ಅಧಿಕಾರಿಗಳಾದ ಕೆ.ಪಿ. ಕಶ್ಯಪ್, ಗೌರವ್ ಜೈನ್, ಪಿ. ಅಶೋಕ್, ಬ್ರಹ್ಮಪ್ರಕಾಶ್ ಹಾಗೂ ವಿನೋದ್ ಅವರು ಯೋಜನೆ ಅನುಷ್ಠಾನದ ಮಾಹಿತಿ ಪರಿಶೀಲಿಸಿದರು. ಫಲಾನುಭವಿಗಳೊಂದಿಗೆ ಸಮಿತಿ ಸದಸ್ಯರು ಸಂವಾದ ನಡೆಸಿದರು.

ರಾಮನಗರ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೇನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಮುಖ್ಯ ಯೋಜನಾ ಅಧಿಕಾರಿ ಚಿಕ್ಕಸುಬ್ಬಯ್ಯ, ಅಧೀಕ್ಷಕ ಎಂಜಿನಿಯರ್ ಸಂಜೀವ್ ರಾಜು ಬಿ.ಪಿ, ಸಣ್ಣ ನೀರಾವರಿ ವಿಭಾಗದ ಇಇ ರವೀಂದ್ರನಾಥ್ ಎಸ್.ಆರ್, ಎಇಇ ಕೊಟ್ರೇಶ್, ಅಟಲ್ ಭೂಜಲ್ ಯೋಜನೆ ಜಿಲ್ಲಾ ಘಟಕದ ನೋಡಲ್ ಅಧಿಕಾರಿ ರವಿ ಸಿ.ಪಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

‘14 ಜಿಲ್ಲೆಗಳಲ್ಲಿ ಯೋಜನೆ ಜಾರಿ’

‘ಕರ್ನಾಟಕದ 14 ಜಿಲ್ಲೆಗಳಲ್ಲಿ ಅಟಲ್ ಭೂ ಜಲ ಯೋಜನೆ ಜಾರಿಯಾಗುತ್ತಿದೆ. ಯೋಜನೆಯ ಅವಧಿ ಐದು ವರ್ಷವಾಗಿದ್ದು ಕಾಮಗಾರಿಗಳ ಮೊತ್ತ ಅಂದಾಜು ಮೊತ್ತ ₹6 ಸಾವಿರ ಕೋಟಿಯಾಗಿದೆ. ಅಂತರ್ಜಲ ಅತಿಯಾಗಿ ಬಳಕೆಯಾಗಿರುವ 1199 ಗ್ರಾಮ ಪಂಚಾಯ್ತಿಗಳನ್ನು ಯೋಜನೆಗೆ ಪರಿಗಣಿಸಲಾಗುತ್ತಿದೆ. ಅಂತರ್ಜಲ ಬಳಕೆ ಪ್ರಮಾಣವನ್ನು ಮಿತವ್ಯಯವಾಗಿಸಲು ಹಾಗೂ ಅಂತರ್ಜಲ ವೃದ್ಧಿಗೊಳಿಸುವ ಧ್ಯೇಯವನ್ನು ಯೋಜನೆ ಹೊಂದಿದೆ. ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಮುಂದಿನ ಪೀಳಿಗೆಗೆ ಅಂತರ್ಜಲ ಉಳಿಯಲಿದೆ. ಹಾಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಯೋಜನೆ ಕುರಿತು ಜನರಿಗೆ ಅರಿವು ಮೂಡಿಸಬೇಕಿದೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪರಭಾತ್ ಬಾಯಿ ಸವಾಬಾಯಿ ಪಟೇಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT