ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ಎದುರಿಸುವಲ್ಲಿ ಸರ್ಕಾರ ವಿಫಲ: ಆನಂದಸ್ವಾಮಿ ಆರೋಪ

Published 2 ಮಾರ್ಚ್ 2024, 6:46 IST
Last Updated 2 ಮಾರ್ಚ್ 2024, 6:46 IST
ಅಕ್ಷರ ಗಾತ್ರ

ರಾಮನಗರ: ‘ಮಳೆ ಕೊರತೆಯಿಂದಾಗಿ ರಾಜ್ಯವು ಭೀಕರ ಬರ ಎದುರಿಸುತ್ತಿದ್ದು, 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯೋಗಕ್ಕಾಗಿ ಜನ ಗುಳೆ ಹೋಗುತ್ತಿದ್ದಾರೆ. ಬರ ಪರಿಹಾರ ಕಾರ್ಯಕ್ರಮಗಳನ್ನು ಸರಿಯಾಗಿ ಜಾರಿಗೊಳಿಸದ ಸರ್ಕಾರ ಬರ ಎದುರಿಸುವಲ್ಲಿ ವಿಫಲವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ ಆರೋಪಿಸಿದರು.

‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಜಾನುವಾರುಗಳಿಗೆ ನೀರಿನ ಸಮಸ್ಯೆ ಜೊತೆಗೆ, ಮೇವಿನ ಕೊರತೆ ಎದುರಾಗಿದೆ. ಇಷ್ಟಾದರೂ ಸರ್ಕಾರದ ಯಾವ ಸಚಿವರೂ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ನೋವು ಆಲಿಸುತ್ತಿಲ್ಲ’ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದೆ. ರೈತರಿಗಾಗಿ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ₹6 ಸಾವಿರ ನೀಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ₹4 ಸಾವಿರ ಸೇರಿಸಿ ರೈತರಿಗೆ ವರ್ಷಕ್ಕೆ ₹10 ಸಾವಿರ ಕೊಡುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚುವರಿ ₹4 ಸಾವಿರ ಪಾವತಿಸುವುದನ್ನು ನಿಲ್ಲಿಸಿದೆ’ ಎಂದು ಆರೋಪಿಸಿದರು.

‘ರೈತರ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಹಿಂದಿನ ಸರ್ಕಾರ ವಿದ್ಯಾನಿಧಿ ಯೋಜನೆ ಜಾರಿಗೆ ತಂದು ಶಿಷ್ಯ ವೇತನ ನೀಡುತ್ತಿತ್ತು. ಈಗಿನ ಸರ್ಕಾರ ಆ ಹಣವನ್ನು ಸಹ ಬಿಡುಗಡೆ ಮಾಡುತ್ತಿ‌ಲ್ಲ. ಅಲ್ಲದೆ, ಸಂಸದ ಡಿ.ಕೆ. ಸುರೇಶ್ ಅವರು ಕೇಂದ್ರ ಸರ್ಕಾರದ ನೆರವಿನೊಂದಿಗೆ ಜಿಲ್ಲೆಯ ವಿವಿಧೆಡೆ ನಿರ್ಮಿಸಿರುವ ಬಸ್ ತಂಗುದಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿಲ್ಲ. ಕೂಡಲೇ ಅವರ ಚಿತ್ರ ಹಾಕಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಮುಖಂಡ ಗೌತಮ್ ಗೌಡ ಮಾತನಾಡಿ, ‘ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಗ್ರಹಣ ಹಿಡಿದಿದೆ. ಜನರಷ್ಟೇ ಅಲ್ಲದೆ, ಆಡಳಿತಾರೂಢ ಪಕ್ಷದವರೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರ ಸಂಘ ಈ ಸರ್ಕಾರದ ಮೇಲೂ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ಒಬಿಸಿ ಮೋರ್ಚಾದ ಪ್ರಭಾರಿ‌ಗಳಾದ ಕೆ.ಜೆ.‌ ವಿಜಯಕುಮಾರ್, ಪ್ರೇಮಾ ನಾಗಯ್ಯ, ಉಪಾಧ್ಯಕ್ಷರಾದ ಎಸ್.ಆರ್.‌ ನಾಗರಾಜ್, ಜಯರಾಮ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಜಗನ್ನಾಥ ಗೌಡ, ನಗರ ಮಂಡಲ ಅಧ್ಯಕ್ಷ ದರ್ಶನ್, ಗ್ರಾಮಾಂತರ ಅಧ್ಯಕ್ಷ ಜಗದೀಶ್, ಒಬಿಸಿ ಅಧ್ಯಕ್ಷ ನಾರಾಯಣ ಸ್ವಾಮಿ, ಜಿಲ್ಲಾ ವಕ್ತಾರ ಪದ್ಮನಾಭ, ಮುಖಂಡರಾದ ರುದ್ರದೇವರು, ಅನಿಲ್, ಚಂದ್ರಶೇಖರ್, ರಾಜೇಶ್ ಇದ್ದರು.

ಜಾತಿಗಣತಿ ವರದಿಯು ಜಾತಿ ಮತ್ತು ಧರ್ಮಾಧಾರಿತ ವಿಭಜನೆಯ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ವರದಿಗೆ ವಿರೋಧ ವ್ಯಕ್ತವಾಗುತ್ತಿದೆ. ಅದಕ್ಕೆ ನಮ್ಮ ಧಿಕ್ಕಾರವಿದೆ
– ಪ್ರಸಾದ್ ಗೌಡ ಬಿಜೆಪಿ ಮುಖಂಡ ಮಾಗಡಿ
ಕಮಲವೇ ಅಭ್ಯರ್ಥಿ; ಭಯದಿಂದ ಗಿಫ್ಟ್ ಹಂಚಿಕೆ’
‘‘ನಮಗೆ ಕಮಲ ಚಿಹ್ನೆಯೇ ಅಭ್ಯರ್ಥಿಯಾಗಿದ್ದು ಯಾರೇ ನಿಂತರೂ ಕೆಲಸ ಮಾಡುತ್ತೇವೆ. ತಳಮಟ್ಟದಲ್ಲಿ ಗ್ರಾಮ ಚಲೋ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲಾಗುತ್ತಿದೆ. ಮೈತ್ರಿ ಪಕ್ಷ ಜೆಡಿಎಸ್‌ನವರು ಅವರ ಪಕ್ಷದಡಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನಾಯಕರ ಸೂಚನೆ ಮೇರೆಗೆ ಅಗತ್ಯವಿದ್ದಾಗ ಇಬ್ಬರೂ ಸೇರಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನವರು ಸೋಲಿನ ಭಯದಿಂದ ಈಗಲೇ ಮತದಾರರಿಗೆ ಉಡುಗೊರೆ ಹಂಚಲು ಶುರು ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲ ಸಲ ಗಿಫ್ಟ್ ಹಂಚಿಕೆ ಶುರುವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಆನಂದಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT