ಭಾನುವಾರ, ಸೆಪ್ಟೆಂಬರ್ 20, 2020
23 °C
ಕೂಡ್ಲೂರು ಗ್ರಾಮದಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸ್ವಾಸ್ಥ್ಯಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಎಂದು ಕನ್ನಡ ಶಿಕ್ಷಕ ಯೋಗೀಶ್ ಚಕ್ಕೆರೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಕೂಡ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶೋಕಿ ಜೀವನದ ಕೆಟ್ಟ ಭ್ರಮೆಯಲ್ಲಿರುವುದರಿಂದ ಭಾರತೀಯ ಸಂಸ್ಕೃತಿ, ಸಂಸ್ಕಾರ ನೆಲೆಯಾಗಲು ತಡೆಯುಂಟಾಗಿದೆ. ದೇಶದ ಬೆನ್ನೆಲುಬಾಗಿರುವ ಯುವಕರು ದಾರಿತಪ್ಪುತ್ತಿರುವುದು ದುರಂತದ ಸಂಗತಿ. ಹದಿಹರೆಯ ತುಂಬಾ ಅಪಾಯಕಾರಿಯಾದ ವಯಸ್ಸು. ಈ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ಬಿದ್ದವರ ಸಂಖ್ಯೆ ಅಪಾರ. ಇಂತಹ ಚಟಕ್ಕೆ ಬಿದ್ದರೆ ಮತ್ತೆ ಹೊರಬರುವುದು ಕಷ್ಟ. ವಿದ್ಯಾರ್ಥಿಗಳು ಉತ್ತಮ ಆಹಾರ, ಹವ್ಯಾಸ ಬೆಳೆಸಿಕೊಂಡು ಆರೋಗ್ಯವಂತ ಹೊಸ ನಾಡನ್ನು ಕಟ್ಟಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ತಮಾಷೆಗಾಗಿ ಮಾದಕ ವಸ್ತುಗಳಿಗೆ ಮೋಹಿತರಾಗಿ ನಂತರ ಅದರೊಳಗೆ ಜಾರಿಬಿಡುತ್ತಾರೆ. ಇದರಿಂದ ಅಂತಹವರ ಕುಟುಂಬ ಬೀದಿ ಪಾಲಾಗುವುದರ ಜೊತೆಗೆ ಜನರ ನಗೆಪಾಟಲಿಗೆ ಬಲಿಯಾಗುತ್ತಾರೆ. ಇಪ್ಪತ್ತನೆಯ ವಯಸ್ಸಿನ ತನಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮಾದಕ ವಸ್ತುಗಳಿಂದ ದೂರವಿದ್ದಲ್ಲಿ ಮುಂದಿನ ನಿಮ್ಮ ಜೀವನ ಪರಿಪಕ್ವವಾಗುತ್ತದೆ ಎಂದರು.

ಯೋಜನೆಯ ಮೇಲ್ವಿಚಾರಕಿ ನಂದಿನಿ ಮಾತನಾಡಿ, ‘ವಿದ್ಯಾರ್ಥಿಗಳು ಮೊದಲು ನಿಮ್ಮ ಮನೆ, ಕುಟುಂಬ, ಗ್ರಾಮಗಳಿಂದ ಮಾದಕ ವಸ್ತುಗಳ ನಿರ್ಮೂಲನೆ ಮಾಡೇಕು. ಆಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಕೈಜೋಡಿಸಬೇಕು’ ಎಂದರು.

ಸೇವಾ ಪ್ರತಿನಿಧಿ ರತ್ನಮಣ್ಣಿ ನಿರೂಪಿಸಿದರು. ಶಿಕ್ಷಕರಾದ ಬಸವರಾಜು, ಚಿಕ್ಕ ಚೆನ್ನೇಗೌಡ, ರಾಜೇಶ್, ಈರಾ ನಾಯಕ್, ಉಮೇಶ್, ಭೀಮೇಶ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ಸಮಾಜದ ಸತ್ಪ್ರಜೆಗಳಾಗಿ ಜೀವನ ನಡೆಸುವ ಪ್ರತಿಜ್ಞೆ ಸ್ವೀಕರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು