ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ |ಫೆ. 10–11ಕ್ಕೆ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ,19 ಮಂದಿಗೆ ಪ್ರಶಸ್ತಿ

Published 7 ಫೆಬ್ರುವರಿ 2024, 9:33 IST
Last Updated 7 ಫೆಬ್ರುವರಿ 2024, 9:33 IST
ಅಕ್ಷರ ಗಾತ್ರ

ರಾಮನಗರ: ‘ನಗರದ ಜಾನಪದ ಲೋಕದಲ್ಲಿ ಫೆ. 10 ಮತ್ತು 11ರಂದು ನಡೆಯಲಿರುವ ಸುವರ್ಣ ಕರ್ನಾಟಕ ಲೋಕೋತ್ಸವದ ಅಂಗವಾಗಿ, ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜಾನಪದ ವಿದ್ವಾಂಸರು, ಕಲಾವಿದರು ಹಾಗೂ ಸಂಸ್ಥೆ ಒಳಗೊಂಡಂತೆ 19 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಹೇಳಿದರು.

‘ನಾಡೋಜ ಎಚ್‌.ಎಲ್. ನಾಗೇಗೌಡ ಜಾನಪದ ಲೋಕಶ್ರಿ ಪ್ರಶಸ್ತಿಗೆ ಮೈಸೂರಿನ ಜಾನಪದ ವಿದ್ವಾಂಸ ಡಾ. ಡಿ.ಕೆ. ರಾಜೇಂದ್ರ, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿಗೆ ಚನ್ನಪಟ್ಟಣದ ಜಾನಪದ ವಿದ್ವಾಂಸ ಡಾ. ಕಾಳೇಗೌಡ ನಾಗವಾರ, ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿಗೆ ಬೆಂಗಳೂರಿನ ಸಹಜ ಸಮೃದ್ಧ, ಸಾವಯವ ಮತ್ತು ಕೃಷಿ ಬಳಗ ಆಯ್ಕೆಯಾಗಿದೆ’ ಎಂದು ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಕೌದಿ ಕಲಾವಿದೆ ಭಾಗೀರಥಿ ಸಂಗಣ್ಣ ಮಲಗೊಂಡ, ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿಗೆ ರಾಮನಗರದ ಪೂಜಾ ಕುಣಿತ ಕಲಾವಿದರಾದ ಜಯರಾಮಯ್ಯ ಮತ್ತು ಏಕತಾರಿ ಕಲಾವಿದ ಶಿವಪ್ಪ ಭಾಜನರಾಗಿದ್ದಾರೆ. ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಗೆ ಲೇಖಕ ಪಿ.ಡಿ. ವಾಲೀಕಾರ ಅವರ ಜನಪದ ಕೆರೆಗಳ ಸಂಸ್ಕೃತಿ ಪುಸ್ತಕ ಆಯ್ಕೆಯಾಗಿದೆ’ ಎಂದರು.

‘ವಿವಿಧ ದತ್ತಿಗಳ ಹೆಸರಿನಲ್ಲಿ ನೀಡುವ ಜಾನಪದ ಲೋಕ ಪ್ರಶಸ್ತಿಗೆ ಡೊಳ್ಳಿನ ಪದ ಕಲಾವಿದ ಇಮಾಮ್ ಸಾಬ್ ವಲ್ಲೆಪ್ಪನವರ (ಧಾರವಾಡ), ದೈವ ನರ್ತನ ಕಲಾವಿದ ಶೇಖರ ಪಂಬದ (ದಕ್ಷಿಣ ಕನ್ನಡ), ಸೋಮನ ಕುಣಿತ ಕಲಾವಿದ ದ್ಯಾವೇಗೌಡ ಎನ್.ಎಂ (ಹಾಸನ), ಡೊಳ್ಳು ಕಲಾವಿದ ಬೆಳ್ಳಿಯಪ್ಪ (ಶಿವಮೊಗ್ಗ), ಯಕ್ಷಗಾನ ಮದ್ದಳೆ ಕಲಾವಿದ ಬನ್ನಂಜೆ ನಾರಾಯಣ (ದಕ್ಷಿಣ ಕನ್ನಡ), ಸಾಹಸ ಕಲಾವಿದ ಜ್ಯೋತಿ ರಾಜು (ಚಿತ್ರದುರ್ಗ), ಜನಪದ ಗಾಯಕ ಮೈಸೂರು ಮಹಾದೇವಪ್ಪ (ಮಂಡ್ಯ), ಸೋಬಾನೆ ಕಲಾವಿದ ಮಹೇಶಪ್ಪ ಚನ್ನಪ್ಪ ಕಂಬಳಿ (ಕೊಪ್ಪಳ), ಗೊರವ ಕುಣಿತ ಕಲಾವಿದ ಎನ್‌.ಎಂ. ಮಹದೇವೇಗೌಡ (ಚಾಮರಾಜನಗರ), ಗೀಗೀ ಪದ ಕಲಾವಿದೆ ಲಕ್ಷ್ಮೀಬಾಯಿ ಹರಿಜನ (ಧಾರವಾಡ), ಬುಲಾಯಿ ಹಾಡು ಕಲಾವಿದೆ ನಾಗಮ್ಮ ಮರಖಲ (ಬೀದರ್) ಹಾಗೂ ಮೂಡಲಪಾಯ ಯಕ್ಷಗಾನ ಭಾಗವತರಾದ ಎ.ಎಂ. ಶಿವಶಂಕರಯ್ಯ (ತುಮಕೂರು) ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗಿನ ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದೆ. ಫೆ. 11ರಂದು ಸಂಜೆ 5.30ಕ್ಕೆ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ. ಸಂತೋಷ ಹೆಗ್ಡೆ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT