ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ನೀರಿನ ಸಮಸ್ಯೆ ತಾರಕಕ್ಕೆ; ಟ್ಯಾಂಕರ್‌ ನೀರಿಗೂ ಬರ

ರಾಮನಗರ: ಕನಿಷ್ಠ 8– 15 ದಿನಕ್ಕೊಮ್ಮೆ ನೀರು ಪೂರೈಕೆ, ಬತ್ತಿದ ಕೊಳವೆ ಬಾವಿಗಳು
Published 2 ಏಪ್ರಿಲ್ 2024, 4:11 IST
Last Updated 2 ಏಪ್ರಿಲ್ 2024, 4:11 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆಯ ಬಿರು ಬಿಸಿಲಿನ ಕಾವು ಹೆಚ್ಚಿದಂತೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸದ್ಯ ನಗರದಲ್ಲಿ ಕನಿಷ್ಠ 10 ದಿನಗಳಿಂದ 15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆಗೀಗ ಬರುವ ಅಲ್ಪಸ್ವಲ್ಪ ನೀರಿನಲ್ಲೇ ಬದುಕಿನ ಬಂಡಿ ಸಾಗಿಸಬೇಕಾದ ಅನಿವಾರ್ಯತೆ ಜನರದ್ದಾಗಿದೆ.

ಹಿಂದಿನಿಂದಲೂ ನಗರವು ನೀರಿನ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಕೆಲ ತಿಂಗಳುಗಳ ಹಿಂದೆ ತ್ವರಿತಗೊಂಡಿದ್ದ ನಿರಂತರ ನೀರು ಪೂರೈಕೆ ಯೋಜನೆಯು 2023ರ ವರ್ಷಾಂತ್ಯಕ್ಕೆ ಪೂರ್ಣಗೊಂಡು, ನಗರದ ಜಲ ಸಮಸ್ಯೆ ನೀಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಯೋಜನೆಯ ವೇಗ ಆಮೆಗತಿಯಂತಾಗಿದೆ. ಬರದಿಂದಾಗಿ ನೀರಿನ ಮೂಲಗಳಲ್ಲೇ ಕೊರತೆ ಇರುವುದರಿಂದ, ನಗರದ ನೀರಿನ ಸಮಸ್ಯೆ ಮುಗಿಲು ಮುಟ್ಟಿದೆ.

ಕೇಳೋರಿಲ್ಲ ಗೋಳು: ‘ನಗರದ ಹಲವೆಡೆ 15 ದಿನಗಳಿಂದ ತಿಂಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಅರ್ಧ ಮುಕ್ಕಾಲು ಗಂಟೆ ಬರುವ ನೀರು ಸಿಕ್ಕಿದವರಿಗೆ ಸೀರುಂಡೆ ಎಂಬಂತಾಗಿದೆ. ಹೊತ್ತಿಲ್ಲದ ಹೊತ್ತಿನಲ್ಲಿ ಬಿಡುವ ನೀರು ಹಿಡಿಯಲು ನಮ್ಮ ಕೆಲಸ–ಕಾರ್ಯ ಬಿಟ್ಟು ಕಾಯಬೇಕಾದ ಸ್ಥಿತಿ ಬಂದಿದೆ’ ಎಂದು ಐಜೂರಿನ ಶಾಂತಮ್ಮ ಬೇಸರ ವ್ಯಕ್ತಪಡಿಸಿದರು.

‘ಅಪರೂಪಕ್ಕೊಮ್ಮೆ ಬರುವ ನೀರನ್ನು ಬ್ಯಾರೆಲ್, ಸಣ್ಣ ಟ್ಯಾಂಕ್ ಹಾಗೂ ಬಿಂದಿಗೆಗಳಲ್ಲಿ ದಿನಗಳವರೆಗೆ ತುಂಬಿಸಿ ಇಟ್ಟುಕೊಳ್ಳಬೇಕಾಗಿದೆ. ಹೆಚ್ಚು ದಿನ ಇಡುವುದರಿಂದ ನೀರಿನಲ್ಲಿ ಹುಳುಗಳು ಸಹ ಕಾಣಿಸಿಕೊಳ್ಳುವುದುಂಟು. ಶ್ರೀಮಂತರು ದುಡ್ಡು ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಾರೆ. ಆದರೆ, ಬಡವರು ವಿಧಿ ಇಲ್ಲದೆ ನೀರು ಬಿಟ್ಟಾಗಲೇ ಹಿಡಿದುಕೊಂಡು ಬದುಕು ಸಾಗಿಸಬೇಕಿದೆ’ ಎಂದು ಅಳಲು ತೋಡಿಕೊಂಡರು.

ಟ್ಯಾಂಕರ್ ನೀರೂ ಸಿಗುತ್ತಿಲ್ಲ: ‘ನಗರಸಭೆಯವರು ಟ್ಯಾಂಕರ್‌ನಲ್ಲಿ ನಿತ್ಯ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಅವರು ಸರಿಯಾಗಿ ಎಲ್ಲಾ ಕಡೆಗೂ ಬರುವುದಿಲ್ಲ. ಎರಡ್ಮೂರು ಬಿಂದಿಗೆ ನೀರು ಸಿಕ್ಕರೆ ಹೆಚ್ಚು. ಆ ನೀರನ್ನು ಹರಸಾಹಸಪಟ್ಟು ಹಿಡಿಯಬೇಕಾಗುತ್ತದೆ. ವಾರ್ಡ್‌ಗಳ ಎಲ್ಲಾ ರಸ್ತೆಗಳಿಗೂ ಟ್ಯಾಂಕರ್ ಬಾರದಿರುವುದರಿಂದ ಎಷ್ಟೋ ಜನರಿಗೆ ನೀರೇ ಸಿಗುತ್ತಿಲ್ಲ’ ಎಂದು ಟಿಪ್ಪು ನಗರದ ರೇಷ್ಮಾ ಹೇಳಿದರು.

‘ನೀರಿನ ಸಮಸ್ಯೆ ಹೆಚ್ಚಾದಂತೆ ಖಾಸಗಿ ಟ್ಯಾಂಕರ್‌ನವರಿಗೆ ಬೇಡಿಕೆ ಹೆಚ್ಚಾಗಿದೆ. ಮುಂಚೆ ₹300ಕ್ಕೆ ಟ್ಯಾಂಕರ್ ನೀರು ಈಗ ₹700ರಿಂದ ₹1 ಸಾವಿರಕ್ಕೆ ಏರಿಕೆಯಾಗಿದೆ. ಬರದ ಸಮಯ ನೋಡಿಕೊಂಡು ಖಾಸಗಿ ಟ್ಯಾಂಕರ್ ಮಾಲೀಕರು ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಇದನ್ನು ಹೇಳುವವರು ಕೇಳುವವರೇ ಇಲ್ಲವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದ್ದಾರೆ’ ಎಂದು ಐಜೂರಿನ ಸಾದಿಕ್ ಪಾಷ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರದ ಬಡಾವಣೆಯೊಂದರಲ್ಲಿ ಜನರು ಟ್ಯಾಂಕರ್‌ ನೀರನ್ನು ಪಾತ್ರೆ ಹಾಗೂ ಬಕೆಟ್‌ಗಳಲ್ಲಿ ತುಂಬಿಸಿ ಇಟ್ಟುಕೊಳ್ಳುತ್ತಿರುವುದು
ರಾಮನಗರದ ಬಡಾವಣೆಯೊಂದರಲ್ಲಿ ಜನರು ಟ್ಯಾಂಕರ್‌ ನೀರನ್ನು ಪಾತ್ರೆ ಹಾಗೂ ಬಕೆಟ್‌ಗಳಲ್ಲಿ ತುಂಬಿಸಿ ಇಟ್ಟುಕೊಳ್ಳುತ್ತಿರುವುದು

ನಮ್ಮ ರಸ್ತೆಗೆ ನೀರಿನ ಟ್ಯಾಂಕರ್ ಬರುತ್ತಿಲ್ಲ. ದೈನಂದಿನ ಚಟುವಟಿಕೆಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಹರಿದು ಹೋಗುವ ನೀರನ್ನು ಹಿಡಿದು ಬಳಕೆ ಮಾಡುತ್ತಿದ್ದೇವೆ

- ಯಶೋದಮ್ಮ ಹನುಮಂತನಗರ

ನಲ್ಲಿಯಲ್ಲಿ ತಿಂಗಳಿಗೊಮ್ಮೆ ನೀರು ಬಂದರೆ ವಾರಕ್ಕೊಮ್ಮೆ ಟ್ಯಾಂಕರ್‌ ನೀರು ಬರುತ್ತದೆ. ಹೀಗಾದರೆ ನಾವು ಜೀವನ ಸಾಗಿಸುವುದಾರೂ ಹೇಗೆ? ಬಡವರ ಕಷ್ಟವನ್ನು ಕೇಳುವವರೇ ಇಲ್ಲವಾಗಿದೆ

- ರೇಷ್ಮಾ ಟಿಪ್ಪು ನಗರ

ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ತಮಗೇನೂ ಗೊತ್ತಿಲ್ಲದವರಂತೆ ಓಡಾಡುತ್ತಿದ್ದಾರೆ. ವೋಟು ಕೇಳುವಾಗ ಆಡುವ ಬೆಣ್ಣೆ ಮಾತನಾಡುವವರು ಕಷ್ಟ ಬಂದಾಗ ಕಾಣಿಸಿಕೊಳ್ಳುವುದಿಲ್ಲ

–ಸಾಧಿಕ್ ಪಾಷ ಐಜೂರು

‘22 ಟ್ಯಾಂಕರ್‌ನಿಂದ ನೀರು ಪೂರೈಕೆ ’

‘ನಗರದ ಎಲ್ಲಾ ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಸದ್ಯ 1ರಿಂದ 10ನೇ ಹಾಗೂ 12ನೇ ವಾರ್ಡ್‌ಗೆ 6ರಿಂದ 7 ದಿನಗಳಿಗೊಮ್ಮೆ ಹಾಗೂ 11 ಮತ್ತು 13ರಿಂದ 31ನೇ ವಾರ್ಡ್‌ಗಳಿಗೆ 9–11 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಟಿ.ಕೆ. ಹಳ್ಳಿ ಮತ್ತು ಅರ್ಕಾವತಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ಇಲ್ಲಿಯೂ ನಿರೀಕ್ಷಿತ ಪ್ರಮಾಣದ ನೀರು ಸಿಗದಿರುವುದರಿಂದ 22 ಟ್ಯಾಂಕರ್‌ಗಳಲ್ಲಿ ನಿತ್ಯ 7–8 ಟ್ರಿಪ್ ನೀರು ಕೊಡಲಾಗುತ್ತಿದೆ. ಸದ್ಯ ಅರ್ಕಾವತಿ ನದಿಯಿಂದ ಕೇವಲ 3 ಎಂಎಲ್‌ಡಿ ನೀರು ಮಾತ್ರ ಸಿಗುತ್ತಿದೆ. ನದಿಯಲ್ಲಿ ನೀರು ಕಡಿಮೆಯಾದಾಗ ಮಂಚನಬೆಲೆ ಜಲಾಶಯದಿಂದ ಬಿಡಿಸಿಕೊಳ್ಳಲಾಗುತ್ತಿದೆ’ ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಸುಮಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೊಸದಾಗಿ 21 ಕೊಳವೆಬಾವಿ’ ‘ನಗರದಲ್ಲಿ 292 ಕೊಳವೆಬಾವಿಗಳಿದ್ದು ಕೆಲ ಬಾವಿಗಳಲ್ಲಿ ನೀರಿನ ಪ್ರಮಾಣ ತೀರಾ ಕುಸಿದಿದೆ. ಇವುಗಳನ್ನು ನಿರ್ಮಿತಿ ಕೇಂದ್ರದವರು ನಿರ್ವಹಣೆ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ನಗರದಲ್ಲಿ ಹೊಸದಾಗಿ 21 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಈ ಪೈಕಿ ನಾಲ್ಕೈದರಲ್ಲಿ ನೀರು ಸಿಕ್ಕಿಲ್ಲ. ನಗರದ ವ್ಯಾಪ್ತಿಯಲ್ಲಿ 25 ಶುದ್ಧ ಕುಡಿಯವ ನೀರಿನ ಘಟಕಗಳಿವೆ. ಅವುಗಳಲ್ಲಿ ಸಹ ಕೆಲವು ನೀರಿನ ಕೊರತೆಯಿಂದಾಗಿ ಸ್ಥಗಿತಗೊಂಡಿವೆ. ನೀರಿನ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಎಲ್. ನಾಗೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT