ಶುಕ್ರವಾರ, ಮೇ 14, 2021
31 °C

ಚೇತರಿಸಿಕೊಂಡವರ ಆಶೀರ್ವಾದವೇ ನಮಗೆ ಶ್ರೀರಕ್ಷೆ: ಇಂದಿರಾ ಎನ್‌.ಜಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಕೊರೊನಾ ಸೋಂಕಿತರ ಸೇವೆ ಮಾಡುವುದು ಜೀವನದಲ್ಲಿ ಮರೆಯಲಾರದ ಮಾನವೀಯತೆ ಕಲಿಸಿದೆ. ಪಿಪಿಇ ಕಿಟ್ ಧರಿಸಿರುವುದು ಸವಾಲಾದರೂ ಸಂತಸ ತರುತ್ತಿದೆ. ಪರೋಪಕಾರವೇ ಜೀವನದ ನಿಜವಾದ ಉದ್ದೇಶ’

ಹೀಗೆಂದು ಹೇಳಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿ ಇಂದಿರಾ ಎನ್‌.ಜಿ.

‘ನನ್ನ ತಾಯಿ ಪುಟ್ಟಲಕ್ಷ್ಮಮ್ಮ ಗಂಗಯ್ಯ ಪರರಿಗೆ ಉಪಕಾರಿಯಾಗುವಂತೆ ಬದುಕುಬೇಕು ಎಂದು ಕಲಿಸಿಕೊಟ್ಟಿದ್ದಾರೆ. ಜನರಲ್ ನರ್ಸಿಂಗ್ ವ್ಯಾಸಂಗ ಮಾಡುವಾಗ ನಮ್ಮ ಗುರುಗಳು ನೈತಿಕತೆ ಮತ್ತು ಎಂತಹ ಸಂಕಟದ ಸಮಯದಲ್ಲೂ ಧೈರ್ಯ ಕಳೆದುಕೊಳ್ಳಬಾರದು. ರೋಗಿಗಳನ್ನು ದೇವರೆಂದು ಪರಿಭಾವಿಸಿ, ಸೇವೆ ಮಾಡಬೇಕು ಎಂದು ಹೇಳುತ್ತಿದ್ದರು’ ಎಂದರು.

‘ಮೊದಲು ಬೆಂಗಳೂರಿನ ಸಾಗರ ಅಪೊಲೊ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನೋವಿನಿಂದ ನರಳುತ್ತಾ ಆಸ್ಪತೆಗೆ ಬರುವ ರೋಗಿಗಳಿಗೆ ನಮ್ಮ ಕೈಲಾದ ಚಿಕಿತ್ಸೆ ಒದಗಿಸಿದಾಗ ಸಿಗುವ ಸಂತೃಪ್ತಿಗೆ ಬೆಲೆಕಟ್ಟಲಾಗದು. 15 ವರ್ಷಗಳಿಂದಲೂ ನರ್ಸ್‌ ಹುದ್ದೆಯಲ್ಲಿ ಸೇವೆ ಸಲ್ಲಿಸುತಿದ್ದೇನೆ. ಕೆಲಸದ ಬಗ್ಗೆ ತೃಪ್ತಿ ಇದೆ’ ಎನ್ನುತ್ತಾರೆ ಅವರು.

ಕೊರೊನಾ ಸೋಂಕು ಕಾಣಿಸಿಕೊಂಡ ಮೇಲೆ ರಾಮನಗರದ ಕಂದಾಯ ಭವನ ಮತ್ತು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ವಾರದಲ್ಲಿ ಎರಡೂ ಕಡೆ ತಲಾ ಮೂರು ದಿನ ಕೊರೊನಾ ಸೋಂಕಿತರ ಸೇವೆಯನ್ನು ಅರ್ಪಣೆಯಿಂದ ಮಾಡುತ್ತಿದ್ದೇನೆ. ನೋವಿನಿಂದ ಚೇತರಿಸಿಕೊಂಡವರು ನೀಡುವ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ನಂಬಿದ್ದೇನೆ. ಸಂಸಾರದೊಂದಿಗೆ ಕರ್ತವ್ಯ ನಿರ್ವಹಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾರೆ.

‘ನಿಸ್ವಾರ್ಥವಾಗಿ ಸೇವೆ ಮಾಡುತ್ತಿದ್ದೇನೆ. ದೇವರು ನಮ್ಮ ಕುಟುಂಬಕ್ಕೆ ಆರೋಗ್ಯ ಕೊಟ್ಟು ಕಾಪಾಡಿದರೆ ಸಾಕು. ನೋವು ನಿವಾರಣೆಯಾದ ರೋಗಿಗಳ ಮುಖದಲ್ಲಿ ನಗು ಕಂಡಾಗ ದೇವರನ್ನು ಕಂಡಂತಾಗುತ್ತದೆ. ಕೊರೊನಾ ಸೋಂಕು ಯಾರಿಗೂ ಬರದಿರಲಿ ಎಂದು ನಿತ್ಯ ಪ್ರಾರ್ಥಿಸುತ್ತೇನೆ. ಕೊರೊನಾ ಸೋಂಕಿತರು ಭಯಪಡದೆ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತರಾಗಬಹುದು. ರೋಗಿಗಳ ಹಾರೈಕೆ ಮಾಡುವುದು ಮುಖ್ಯ’ ಎನ್ನುತ್ತಾರೆ ಅವರು.

ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಮತ್ತು ಇತರೆ ವೈದ್ಯರು ಹಾಗೂ ದಾದಿಯರು, ಸಿಬ್ಬಂದಿ, ರೋಗಿಗಳ ಬಂಧುಗಳು ನೀಡುವ ಸಹಕಾರ ಮರೆಯುವಂತಿಲ್ಲ. ಹುಟ್ಟಿದವರು ಒಂದಲ್ಲ, ಒಂದು ದಿನ ಸಾಯಲೇ ಬೇಕು. ಹುಟ್ಟು, ಸಾವಿನ ನಡುವೆ ಉತ್ತಮ ಸೇವೆ ಮಾಡಬೇಕೆಂಬ ಹಂಬಲವಿದೆ ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು