ಸೋಮವಾರ, ಜೂಲೈ 6, 2020
22 °C
ಆಶಾ ಕಾರ್ಯಕರ್ತೆಯರಿಂದ ಮನೆಮನೆಗೆ ತೆರಳಿ ತಪಾಸಣೆ: ಆತಂಕಕ್ಕೆ ಒಳಗಾದವರಿಗೆ ಆಪ್ತ ಸಮಾಲೋಚನೆ

ರಾಮನಗರದಲ್ಲಿ ಸಾವಿರದ ಗಡಿ ದಾಟಿದ ಕೋವಿಡ್‌-19 ಪರೀಕ್ಷೆ!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ತಗುಲಿರುವ ಶಂಕೆಯ ಮೇಲೆ ಪರೀಕ್ಷೆಗೆ ಒಳಪಟ್ಟವರ ಸಾವಿರ ದಾಟಿದೆ. ಆದರೆ ಈವರೆಗೂ ಒಬ್ಬರಲ್ಲೂ ಸೋಂಕು ತಗುಲದೇ ಇರುವುದೇ ಸಮಾಧಾನದ ಸಂಗತಿಯಾಗಿದೆ.

ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ್ದು, ಅವರಲ್ಲಿ ಐದು ಮಂದಿಗೆ ಸೋಂಕು ತಗುಲಿದ ಸುದ್ದಿ ಆತಂಕ ತಂದಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳನ್ನೂ ಒಳಗೊಂಡು ಪ್ರತಿಯೊಬ್ಬರನ್ನೂ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಕಳೆದೊಂದು ವಾರದ ಅವಧಿಯಲ್ಲೇ ಸರಿಸುಮಾರು 500 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಎಲ್ಲ ವರದಿಗಳೂ ನೆಗೆಟಿವ್‌ ಆಗಿವೆ. ಆದಾಗ್ಯೂ ಜೈಲು ಸಿಬ್ಬಂದಿ, ಪೊಲೀಸರೂ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಇಂದಿಗೂ ಕ್ವಾರಂಟೈನ್‌ನಲ್ಲಿ ಮುಂದುವರಿದಿದ್ದಾರೆ.

ರಾಮನಗರ ಜಿಲ್ಲಾ ಆಸ್ಪತ್ರೆಯ ಜೊತೆಗೆ ಉಳಿದ ಮೂರು ತಾಲ್ಲೂಕು ಕೇಂದ್ರಗಳಲ್ಲಿನ ಆಸ್ಪತ್ರೆಗಳಲ್ಲೂ ಕೋವಿಡ್‌-19 ಪರೀಕ್ಷೆ ನಡೆದಿದೆ. ಇದಕ್ಕೆಂದೇ ಪ್ರತ್ಯೇಕವಾದ ಸಿಬ್ಬಂದಿ ಪಾಳಿ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಪಡೆಯಲಾದ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸರಾಸರಿ ಎರಡು ದಿನದ ನಂತರ ಈ ಮಾದರಿಗಳ ಪರೀಕ್ಷಾ ವರದಿಗಳು ಅಧಿಕಾರಿಗಳ ಕೈ ಸೇರುತ್ತಿವೆ. ಆತಂಕಕ್ಕೆ ಒಳಗಾಗುವ ಜನರಿಗೆ ಆಪ್ತ ಸಮಾಲೋಚನೆ ನೀಡುವ ಕಾರ್ಯವೂ ನಡೆದಿದೆ.

ಹೊರಗಿನವರಿಗೆ ಕ್ವಾರಂಟೈನ್‌: ಈಚೆಗೆ ಹೋಮ್ ಕ್ವಾರಂಟೈನ್‌ಗೆ ಒಳಪಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆ ಬಿಟ್ಟು ಹೊರಗೆ ಹೋಗಿ ಬಂದವರನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಸೋಂಕು ಪೀಡಿತ ಪ್ರದೇಶಗಳಿಂದ ಬಂದವರಾದಲ್ಲಿ, ಅವರಲ್ಲಿ ರೋಗದ ಲಕ್ಷಣಗಳು ಇರಲಿ, ಇಲ್ಲದಿರಲಿ ಕಡ್ಡಾಯವಾಗಿ ಹೋಮ್‌ ಕ್ವಾರಂಟೈನ್ ಮಾಡಲಾಗುತ್ತಿದೆ. ನಿತ್ಯ ಸುಮಾರು 40-50 ಮಂದಿ ಈ ಪಟ್ಟಿಗೆ ಸೇರ್ಪಡೆ ಆಗುತ್ತಿದ್ದಾರೆ. ಗ್ರಾಮಗಳಲ್ಲಿನ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಸಮಿತಿಯ ಸದಸ್ಯರು ಹೀಗೆ ಹೊರಗಿನಿಂದ ಬಂದವರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡತೊಡಗಿದ್ದಾರೆ.

ಜ್ವರ ತಪಾಸಣೆ: ಜಿಲ್ಲೆಯಲ್ಲಿ 9 ಕಡೆಗಳಲ್ಲಿ ಫೀವರ್‍ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಇಲ್ಲಿಯೂ ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಥರ್ಮಲ್ ಸ್ಲ್ಯಾನರ್‌ಗಳ ಮೂಲಕವೂ ತಪಾಸಣೆ ನಡೆದಿದೆ. ನಿತ್ಯ ಸುಮಾರು 25-30 ಮಂದಿ ಈ ಕ್ಲಿನಿಕ್‌ಗಳತ್ತ ಹೆಜ್ಜೆ ಇಡುತ್ತಿದ್ದಾರೆ.

ಹಳ್ಳಿಗಳಲ್ಲಿ ನಿಗಾ: ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುವ ಜೊತೆಗೆ ಅವರ ದೇಹದ ತಾಪಮಾನದ ಪರೀಕ್ಷೆಯನ್ನೂ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಥರ್ಮಲ್‌ ಸ್ಕ್ಯಾನರ್‌ಗಳನ್ನು ನೀಡಲಾಗಿದೆ. ನಗರದ ಪ್ರದೇಶಗಳಲ್ಲಿ ಈಗಾಗಲೇ ಮನೆಮನೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿರುವ ಆಶಾ ಕಾರ್ಯಕರ್ತೆಯರು, ಜನರಲ್ಲಿನ ಆರೋಗ್ಯ ಸಮಸ್ಯೆಗಳ ಕುರಿತೂ ಮಾಹಿತಿ ಕಲೆಹಾಕಿದ್ದಾರೆ. ಸೋಂಕು ಪತ್ತೆ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು, ರ್‍ಯಾಂಡಮ್‌ ಪರೀಕ್ಷೆಗೂ ಚಿಂತನೆ ನಡೆಸಿದೆ.

ಅಂಕಿ-ಅಂಶ

1350-ಜಿಲ್ಲೆಯಲ್ಲಿ ಒಟ್ಟು ನಿಗಾಕ್ಕೆ ಒಳಪಟ್ಟವರು
1010- ಜನರ ಗಂಟಲ ದ್ರವದ ಮಾದರಿ ಸಂಗ್ರಹ
898-ಈವರೆಗೆ ನೆಗೆಟಿವ್‌ ಬಂದ ಮಾದರಿಗಳು
1010-637 ಹೋಮ್‌ ಕ್ವಾರಂಟೈನ್‌ಗೆ ಒಳಪಟ್ಟವರು
311- 28 ದಿನಗಳ ನಿಗಾ ಅವಧಿ ಪೂರೈಸಿದವರು
195- 14 ದಿನಗಳ ನಿಗಾ ಅವಧಿ ಪೂರೈಸಿದವರು
499-ಫೀವರ್‍ ಕ್ಲಿನಿಕ್‌ಗಳಲ್ಲಿ ಪರೀಕ್ಷೆಗೆ ಒಳಪಟ್ಟವರು
594-ಸಮಲೋಚನೆಗೆ ಒಳಪಟ್ಟವರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.