ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರಿಗಷ್ಟೇ ಅಚ್ಛೇ ದಿನ್‌: ಸೈಯದ್ ಜಿಯಾವುಲ್ಲಾ ಬೇಸರ

Last Updated 22 ಡಿಸೆಂಬರ್ 2019, 13:29 IST
ಅಕ್ಷರ ಗಾತ್ರ

ರಾಮನಗರ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಕೆಲ ನಾಯಕರಿಗಷ್ಟೇ ಅಚ್ಛೇ ದಿನಗಳು ಬಂದಿವೆ. ಆದರೆ, ಜನಸಾಮಾನ್ಯರಿಗೆ ಕೆಟ್ಟ ದಿನಗಳನ್ನು ನೋಡುವಂತಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಛೆ ದಿನಗಳು ಬರುತ್ತವೆ ಎಂದು ಕಾದು ಕುಳಿತ ಭಾರತದ ಪ್ರಜೆಗಳ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಂದಾಂದ ಮೇಲೊಂದು ಜನ ವಿರೋಧಿ ನೀತಿಗಳನ್ನು ಹೇರುತ್ತಿದೆ. ಅಚ್ಛೇ ದಿನ್ ಅಂದರೆ ಇದೇನಾ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಆಡಳಿತದ ಉದ್ದಕ್ಕೂ ಜನ ಸಾಮಾನ್ಯ ವಿರೋಧಿ ಯೋಜನೆಗಳನ್ನು ಜಾರಿಗೊಳಿಸಿಕೊಂಡೇ ಬರುತ್ತಿದೆ ಎಂದು ಆರೋಪಿಸಿದರು.

ನೋಟು ರದ್ದತಿ, ಜಿಎಸ್ ಟಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿರುವುದನ್ನೇ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ವಾಸ್ತವವಾಗಿ ಇವ್ಯಾವುದೂ ಜನಪರ ಕಾರ್ಯಗಳಲ್ಲ. ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಯಿಂದ ಸಾಮಾನ್ಯ ಜನರು ನಲುಗುತ್ತಿದ್ದಾರೆಯೇ ಹೊರತು, ಧನಿಕರಿಗೆ ಕಿಂಚಿತ್ತು ಧಕ್ಕೆಯಾಗಿಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಂವಿಧಾನಕ್ಕೆ ಧಕ್ಕೆ ತಂದಿದೆ ಎಂದು ಟೀಕಿಸಿದರು.

ಸಂವಿಧಾನದ ಕಲಂ 14 ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತದೆ. ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಸೇರಿದಂತೆ ಇನ್ನಿತರೆ ಯಾವುದೇ ಅಂಶಗಳನ್ನು ಪರಿಗಣಿಸದೆ ಕಲಂ 14 ಸಮಾನತೆಯನ್ನು ಸಾರುತ್ತದೆ. ಆದರೆ, ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಂವಿಧಾನದ ಕಲಂ 14 ರಿಂದ 32ರವರೆಗಿನ ಅಂಶಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದರು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಲೆಯಲ್ಲಿ ಇನ್ನು ಏನೇನು ಯೋಜನೆಗಳಿವೆಯೋ. ಜನ ಇನ್ನೇಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆಯೋ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಮುಖಂಡ ಕೆ. ಶೇಷಾದ್ರಿ ಎನ್‍ಆರ್‍ಸಿಯಿಂದ ಮುಸಲ್ಮಾನರಿಗೆ ಮಾತ್ರ ಸಮಸ್ಯೆಯಾಗಿಲ್ಲ. ಇತರೆ ಧರ್ಮದವರಿಗೂ ತೊಂದರೆಯಾಗುತ್ತದೆ ಎಂದರು.

ಮುಖಂಡ ಇಕ್ಬಾಲ್ ಹುಸೇನ್ ಮಾತನಾಡಿ, ಕಾಯ್ದೆಯನ್ನು ವಿರೋಧಿಸಿ ಇದೇ 24ರಂದು ನಗರದಲ್ಲಿ ಪಕ್ಷಾತೀತವಾಗಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಪೊಲೀಸ್ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬೃಹತ್ ಮೆರವಣಿಗೆ ಹೊರಟು ಮುಖ್ಯರಸ್ತೆಯಲ್ಲಿ ಸಾಗಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಸಮಾವೇಶಗೊಂಡು ಅಹವಾಲುಗಳನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್, ಕಾಂಗ್ರೆಸ್ ಮುಖಂಡರಾದ ಕೆ.ರಮೇಶ್, ಸಿ.ಎನ್.ಆರ್. ವೆಂಕಟೇಶ್, ನಿಜಾಮುದ್ದೀನ್ ಷರೀಫ್, ವಿ.ಎಸ್ .ರಾಜು, ಎ.ಬಿ. ಚೇತನ್‍ ಕುಮಾರ್, ಎಚ್.ಎಸ್. ಲೋಹಿತ್ ಬಾಬು, ಸಮದ್, ಶಿವಮಾದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT