ರಾಮನಗರ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ದುಂದುವೆಚ್ಚಕ್ಕಿಂತ ಇವುಗಳಿಗೆ ಅವಶ್ಯವಾದ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನಂತರ ಶಿಲ್ಹಾಂಧರ ರೆಸಾರ್ಟ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
‘ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಇತರೆ ಇಲಾಖೆಗಳ ಸಂಪನ್ಮೂಲಗಳನ್ನು ಕ್ರೋಡೀಕರಿಸಲಾಗುವುದು. ಅಗತ್ಯ ಬಿದ್ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.
ಪರಿಸರಕ್ಕೆ ಧಕ್ಕೆ ಆಗದಂತೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲಾಗುವುದು. ಬರುವ ಪ್ರವಾಸಿಗರಿಗೆ ಭದ್ರತೆ ಜೊತೆಗೆ
ವಾಹನ ನಿಲುಗಡೆ, ಭದ್ರತೆ,ಕುಡಿಯುವ ನೀರು, ಶೌಚಾಲಯ ಮೊದಲಾದ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದರು.
ಕೆಆರ್‌ಎಸ್ ಮಾದರಿ ಉದ್ಯಾನ: ಮಂಚನಬೆಲೆ ಜಲಾಶಯದ ಬಳಿ ಇಲಾಖೆಯಿಂದ ಜಂಗಲ್ ಲಾಡ್ಜ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದರೊಟ್ಟಿಗೆ ಕೆಆರ್‌ಎಸ್ ಮಾದರಿಯಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುವುದು. ಇಲ್ಲಿ ಜಿಲ್ಲಾಡಳಿತಕ್ಕೆ ಸೇರಿದ 259 ಎಕರೆ ಗೋಮಾಳ ಇದೆ. ಜೊತೆಗೆ ಕಾವೇರಿ ನೀರಾವರಿ ನಿಗಮದ ಭೂಮಿ ಇದೆ. ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಮಾಗಡಿ ರಂಗನಾಥ ದೇವಾಲಯದ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆ ಸಹಕಾರ ಪಡೆಯಲಾಗುವುದು. ಇದರೊಂದಿಗೆ ರೇವಣ ಸಿದ್ದೇಶ್ವರ ಬೆಟ್ಟಕ್ಕೆ ರೂಫ್ ವೇ, ಕಣ್ವ ಜಲಾಶಯಲ್ಲಿ ಉದ್ಯಾನ ಅಭಿವೃದ್ಧಿ ಜೊತೆಗೆ ಜಲಕ್ರೀಡೆಗಳಿಗೂ ಅವಕಾಶ ನೀಡಲಾಗುವುದು ಎಂದರು.
ಪ್ರವಾಸೋದ್ಯಮ ವರ್ತುಲ: ರಾಜಧಾನಿ ಬೆಂಗಳೂರಿಗೆ ಸಮೀಪ ಇರುವ ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವರ್ತುಲ ನಿರ್ಮಾಣ ಪ್ರಕ್ರಿಯೆ ಚಾಲನೆಯಲ್ಲಿದೆ. ಎಲ್ಲ ಪ್ರವಾಸಿ ತಾಣಗಳನ್ನೂ ಒಂದೇ ವರ್ತುಲದ ಅಡಿ ತಂದು ಅದಕ್ಕೆ ಅಗತ್ಯವಾದ ನೆರವು ನೀಡಲಾಗುವುದು. ಶಿಲ್ಹಾಂಧರ ಸೇರಿದಂತೆ ಅನೇಕ ಖಾಸಗಿ ರೆಸಾರ್ಟ್ ಮಾಲೀಕರು ನೀರು ಸೇರಿದಂತೆ ಹಲವು ಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದು, ಅವರಿಗೂ ನೆರವು ನೀಡಲಾಗುವುದು ಎಂದರು.
ಖಾಸಗೀಕರಣಕ್ಕೂ ಆದ್ಯತೆ: ಪ್ರವಾಸೋದ್ಯಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಗುತ್ತಿಗೆ ನೌಕರರ ನೇಮಕದ ಜೊತೆಗೆ ಕೆಲವು ಕಡೆ ಖಾಸಗೀಕರಣಕ್ಕೂ ಅವಕಾಶ ನೀಡಲಾಗುತ್ತಿದೆ. ಜಿಲ್ಲೆಯ ಕಣ್ವ ಮತ್ತು ಇಗ್ಗಲೂರು ಜಲಾಶಯಗಳ ಅಭಿವೃದ್ಧಿಗೆ ಅನುದಾನ ಬಂದಿದ್ದು, ಇದರ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.