ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಣಿಗರ ಸ್ವರ್ಗ ಕಬ್ಬಾಳು ದುರ್ಗ

Last Updated 23 ಸೆಪ್ಟೆಂಬರ್ 2021, 3:14 IST
ಅಕ್ಷರ ಗಾತ್ರ

ಕನಕಪುರ: ಒಂದೂವರೆ ಸಾವಿರ ಅಡಿ ಎತ್ತರವಾದ ಬೆಟ್ಟವನ್ನು ಕಡಿದಾಗಿರುವ ದಾರಿಯಲ್ಲಿ ತುಂಬಾ ಪ್ರಯಾಸ ಪಟ್ಟು ಹತ್ತಿದರೆ ಅಲ್ಲಿ ವಿಶಾಲವಾದ ಜಾಗವಿದೆ. ಸುಮಾರು 10 ಎಕರೆ ಪ್ರದೇಶದಲ್ಲಿ ಪುರಾತನವಾದ ಭೀಮೇಶ್ವರ ದೇವಾಲಯವಿದೆ.

ರಾಜ್ಯದ ಧಾರ್ಮಿಕ ಪ್ರಸಿದ್ಧ ಕೇಂದ್ರವೆನಿಸಿರುವ ಶಕ್ತಿ ದೇವತೆ ತಾಯಿ ಕಬ್ಬಾಳಮ್ಮ ದೇವಿ ನೆಲೆಸಿರುವಂತ ಕಬ್ಬಾಳು ಗ್ರಾಮದಲ್ಲಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಕಬ್ಬಾಳು ದುರ್ಗವೇ ಕಬ್ಬಾಳು ಬೆಟ್ಟವಾಗಿದ್ದು ಅತ್ಯಂತ ಆಕರ್ಷಕ ತಾಣ. ಇಲ್ಲಿ ನಿಂತು ನೋಡಿದರೆ ಇಡೀ ಕನಕಪುರ ತಾಲ್ಲೂಕನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ.

ಇಂದು ಕಬ್ಬಾಳು ದುರ್ಗವೆನಸಿರುವ ಈ ಬೆಟ್ಟದ ಮೇಲೆ ಟಿಪ್ಪು ಸುಲ್ತಾನ ತನ್ನ ಆಳ್ವಿಕೆಯಲ್ಲಿ ಮದ್ದಿನ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದ. ಅಲ್ಲದೆ ತಪ್ಪು ಮಾಡಿದವರನ್ನು ಇದೇ ಬೆಟ್ಟದಲ್ಲಿ ತಳ್ಳುವ ಮೂಲಕ ಶಿಕ್ಷೆ ನೀಡುತ್ತಿದ್ದರೆನ್ನುವ ಉಲ್ಲೇಖವಿದೆ. ಬೆಟ್ಟದ ಮೇಲೆ ಈಗಲೂ ತಳ್ಳುವ ದ್ವಾರವಿದೆ. ಕಡಿದಾದ ಬೆಟ್ಟವನ್ನು ಕುದುರೆಯ ಮೂಲಕವೇ ಬೆಟ್ಟವನ್ನೇರುತ್ತಿದ್ದರು ಎಂದು ಹಿರಿಯರು ತಿಳಿಸುತ್ತಾರೆ.

ಬೆಟ್ಟದ ಮೇಲೆ ಈಗಲೂ ಹಿಂದಿನ ಕಾಲದ ಕೊಣ(ಕಲ್ಯಾಣಿ)ವಿದೆ, ಸುರಂಗ ಮಾರ್ಗವಿದೆ. ಅಂದಿನ ಕಾಲದಲ್ಲೇ ದೇವಾಲಯದ ಮೇಲ್ಭಾಗಕ್ಕೆ ವಿದ್ಯುತ್‌ ಸಂಪರ್ಕವನ್ನು ದುರ್ಗಮದ ದಾರಿಯಲ್ಲೇ ತೆಗೆದುಕೊಂಡು ಹೋಗಿದ್ದಾರೆ. ಸಾತನೂರಿನ ಪಾಂಡು ಎಂಬುವರು ಈಗಲೂ ಕಡಿದಾದ ಬೆಟ್ಟವನ್ನೇರಿ ವಾರದಲ್ಲಿ ಮೂರು ದಿನ ಭೀಮೇಶ್ವರ ದೇವರಿಗೆ ಪೂಜೆಯನ್ನು ನೆರವೇರಿಸುತ್ತಿದ್ದಾರೆ.

ಕಬ್ಬಾಳಮ್ಮನ ದೇವಾಲಯಕ್ಕೆ ಬರುವ ಭಕ್ತರು ಬೆಟ್ಟವನ್ನು ಏರುವ ಸಾಹಸಿಗರು, ಚಾರಣ ನಡೆಸುವವರು ಈ ಬೆಟ್ಟಕ್ಕೆ ಆಗಾಗ ಬಂದು ಬೆಟ್ಟವನ್ನೇರುತ್ತಾರೆ. ಬೆಟ್ಟದ ಮೇಲೆ ಹೋಗಲು ಕಡಿದಾದ ದಾರಿಬಿಟ್ಟರೆ ಬೇರಾವ ದಾರಿಯಿಲ್ಲ. ಟಿಪ್ಪುಸುಲ್ತಾನ ತನ್ನ ಕುದುರೆಯ ಮೇಲೆ ಹೋಗುತ್ತಿದ್ದರಿಂದ ಕುದುರೆಯ ಪಾದದಷ್ಟು ಸಣ್ಣ ಸಣ್ಣ ಮೆಟ್ಟಿಲುಗಳಿವೆ. ಹಿಡಿದುಕೊಳ್ಳಲು ಯಾವುದೆ ಆದಾರವಿಲ್ಲ.

ಇತ್ತೀಚೆಗೆ ಕಬ್ಬಾಳಮ್ಮನ ಭಕ್ತರು ಬೆಟ್ಟದ ಮೇಲೆ ಹೋಗಲು ಹಳೆಯ ದಾರಿಯಲ್ಲೇ ಬೆಟ್ಟವನ್ನು ಕೊರೆದು ಮೆಟ್ಟಿಲುಗಳನ್ನಾಗಿ ಮಾಡುತ್ತಿದ್ದು ಸುಮಾರು 205 ಮೆಟ್ಟಿಲುಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಬೆಟ್ಟದ ತಳದಿಂದ ಮೇಲ್ಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ಮೆಟ್ಟಿಲುಗಳನ್ನು ಮಾಡಿ ಹಿಡಿದುಕೊಳ್ಳಲು ಕಂಬಿಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ತಲುಪುವುದು ಹೇಗೆ?: ಕಬ್ಬಾಳು ದುರ್ಗವು ಕನಕಪುರ ತಾಲ್ಲೂಕು ಸಾತನೂರು ಹೋಬಳಿ ಕಬ್ಬಾಳು ಗ್ರಾಮದಲ್ಲಿದೆ. ಸಾತನೂರು–ಚನ್ನಪಟ್ಟಣ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇದೆ. ಇಲ್ಲಿಗೆ ಬರಲು ದಿನವಿಡಿ ಬಸ್‌ ವ್ಯವಸ್ಥೆಯಿದೆ. ಚನ್ನಪಟ್ಟಣದಿಂದ 22 ಕಿಲೋ ಮೀಟರ್‌, ಕಬ್ಬಾಳಿನಿಂದ 6 ಕಿಲೋ ಮಿಟರ್‌ ಇದೆ. ಕನಕಪುರದಿಂದ 22 ಕಿಲೋ ಮೀಟರ್‌, ಬೆಂಗಳೂರಿನಿಂದ 78 ಕಿಲೋ ಮೀಟರ್‌.

ರಾಜ್ಯದ ನಾನಾ ಭಾಗದಿಂದ ಭಕ್ತರು ಇಲ್ಲಿಗೆ ಬರುತ್ತಿದ್ದು ಕಬ್ಬಾಳಮ್ಮನ ದರ್ಶನ ಪಡೆದವರು ಕಬ್ಬಾಳು ದುರ್ಗವನ್ನೇರುವುದು ಸಾಮಾನ್ಯವಾಗಿದೆ. ಕಬ್ಬಾಳು ಬೆಟ್ಟಕ್ಕೆ ಎಲ್ಲಾ ಭಾಗದಿಂದ ಬರಲು ಉತ್ತಮ ರಸ್ತೆ ಸಂಪರ್ಕವಿದೆ. ಕಬ್ಬಾಳುಬೆಟ್ಟಕ್ಕೆ ಮೆಟ್ಟಿಲುಗಳ ವ್ಯವಸ್ಥೆಯಾದರೆ ನೆಚ್ಚಿನ ಪ್ರವಾಸಿ ತಾಣವಾಗಲಿದೆ.

ನೋಡಸಿಗುವ ಸ್ಥಳಗಳು: ಇಲ್ಲಿಗೆ ಬರುವವರು ಕಬ್ಬಾಳಮ್ಮ ದೇವಾಲಯ ಮತ್ತು ಕಬ್ಬಾಳು ದುರ್ಗದ ಜತೆಗೆ ಪಕ್ಕದಲ್ಲೇ ಇರುವ ಭೀಮನಕಿಂಡಿ ಬೆಟ್ಟ, ಮುತ್ತತ್ತಿಯಲ್ಲಿರುವ ಮುತ್ತತ್ತಿರಾಯ, ಕಾವೇರಿ ನದಿ, ಸಂಗಮ, ಮೇಕೆದಾಟು, ಚುಂಚಿಪಾಲ್ಸ್‌, ಕಲ್ಲಹಳ್ಳಿ ಶ್ರೀನಿವಾಸ, ಶಿವನಾಂಕರೇಶ್ವರ ದೇವಾಲಯ, ಬಿಳಿಕಲ್‌‌ಬೆಟ್ಟ ಮೊದಲಾದ ಪ್ರವಾಸಿತಾಣಗಳನ್ನು ನೋಡಬಹುದುದಾಗಿದೆ. ಒಂದು ದಿನದ ಪ್ರವಾಸದಲ್ಲಿ ಧಾರ್ಮಿಕ ಕಾರ್ಯದ ಜತೆಗೆ ಬೆಟ್ಟವನ್ನೇರುವ ಚಾರಣ ಮಾಡುವ ಅವಕಾಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT