ಶನಿವಾರ, ಜುಲೈ 24, 2021
28 °C
ಅರಣ್ಯ ಇಲಾಖೆಯಿಂದ ಕಾಡಂಚಿನ ‌ರೈತರಿಗೆ ತೊಂದರೆ ನಿಲ್ಲಲಿ: ಡಿ.ಕೆ ಸುರೇಶ್

ಹಕ್ಕಿಪಿಕ್ಕಿ ಕಾಲೊನಿ ಜನರಿಗೆ ಶೀಘ್ರ ಹಕ್ಕುಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬನ್ನೇರುಘಟ್ಟದ ಸಮೀಪದ ಬೂತಾನಹಳ್ಳಿ, ಬ್ಯಾಲದ ಮರದದೊಡ್ಡಿ, ಬ್ಯಾಟರಾಯನದೊಡ್ಡಿ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಅರಣ್ಯ ಇಲಾಖೆ ತೊಂದರೆ ನೀಡದೆ ಕಾನೂನು ಪರಿಹಾರ ಸಿಗುವವರೆಗೂ ಯಥಾಸ್ಥಿತಿ ಮುಂದುವರಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ತಾಲ್ಲೂಕಿನ ಬನ್ನೇರುಘಟ್ಟ ಕಲ್ಕೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ರೈತರೊಂದಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸಿ ಮಾತನಾಡಿದರು.

ರೈತರಿಗೆ 1950ರಲ್ಲಿಯೇ ಸುಮಾರು 120 ಎಕರೆ ಜಮೀನು ಕಂದಾಯ ಇಲಾಖೆಯಿಂದ ಮಂಜೂರಾಗಿದೆ. ಪಹಣಿ ಸಹ ಇದೆ. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಕೃಷಿ ಕೆಲಸಗಳಿಗೆ ತಡೆಯೊಡ್ಡುತ್ತಿದ್ದಾರೆ. ಕಾನೂನಾತ್ಮಕ ಸಮಸ್ಯೆ ಪರಿಹಾರ ಆಗುವವರೆಗೂ ಕೃಷಿ ಕೆಲಸ ಮತ್ತು ಮನೆಗಳನ್ನು ರಿಪೇರಿ ಮಾಡಿಕೊಳ್ಳಲು ತೊಂದರೆ ಮಾಡುವುದು ಬೇಡ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವಂತೆ ಅಧಿಕಾರಿಗಳಿಗೆ ಕೋರಲಾಗಿದೆ. ಕೇಂದ್ರ ಸರ್ಕಾರದಲ್ಲಿ ಚರ್ಚಿಸಿ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡಲಾಗುವುದು ಎಂದರು.

ಈಚೆಗೆ ಮಳೆಯಾದ ಹಿನ್ನೆಲೆಯಲ್ಲಿ ರೈತರು ಉಳುಮೆ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಉಳುಮೆ ಮಾಡುವುದನ್ನು ತಡೆದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆ ಮತ್ತು ರೈತರ ನಡುವಿನ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಹಕ್ಕಿಪಿಕ್ಕಿ ಕಾಲೊನಿಯ ಸುಮಾರು 350 ಎಕರೆ ಜಮೀನು ಸರ್ಕಾರದಿಂದ ಬಿಡುಗಡೆಯಾಗಿದ್ದು ಮಂಜೂರಾತಿಗೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕೆಲವು ಕುಟುಂಬಗಳಲ್ಲಿ ವಿವಾದ ಉಂಟಾಗಿದ್ದು ನ್ಯಾಯಾಲಯದ ಮೊರೆ ಹೋಗಿವೆ. ವಿವಾದ ಪರಿಹಾರದ ನಂತರ ಎಲ್ಲರಿಗೂ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌.ಕೆ.ರಮೇಶ್‌, ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಚ್ಯುತರಾಜು, ಮುಖಂಡರಾದ ರುದ್ರಸ್ವಾಮಿ, ಶ್ರೀನಿವಾಸಯ್ಯ, ಸಂಪಂಗಿರಾಮಯ್ಯ, ಸುಜಯ್‌, ಜಗ್ಗುಸಿಂಗ್‌, ನಾಗರಾಜು, ನಾಗೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.