ಭಾನುವಾರ, ಅಕ್ಟೋಬರ್ 25, 2020
27 °C
ಹೆಚ್ಚುವರಿ ಗೊಬ್ಬರ ಖರೀದಿಗೆ ಮಾರಾಟಗಾರರ ಮೇಲೆ ಕಂಪನಿಗಳ ಒತ್ತಡ ಆರೋಪ

ಯೂರಿಯಾ ಜೊತೆಗೆ ಡಿಎಪಿ ಕಡ್ಡಾಯ!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಜ್ಯದಲ್ಲಿ ಯೂರಿಯಾ ಅಭಾವವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವು ರಸಗೊಬ್ಬರ ಉತ್ಪಾದನಾ ಕಂಪನಿಗಳು ಅದರೊಟ್ಟಿಗೆ ಉಳಿದ ವಿಧದ ಗೊಬ್ಬರ ಮಾರಾಟಕ್ಕೂ ಮಾರಾಟಗಾರರ ಮೇಲೆ ಒತ್ತಡ ಹೇರತೊಡಗಿವೆ ಎಂಬ ಆರೋಪ ಕೇಳಿಬಂದಿದೆ.

ಸದ್ಯ ರಾಮನಗರ ಜಿಲ್ಲೆಯಾದ್ಯಂತ ಯೂರಿಯಾ ಖರೀದಿಗೆ ರೈತರು ಮುಗಿಬೀಳುತ್ತಿದ್ದಾರೆ. ಮುಂಜಾನೆ ಐದಕ್ಕೆ ಅಂಗಡಿಗಳ ಮುಂಭಾಗ ಸರದಿಯಲ್ಲಿ ನಿಲ್ಲುತ್ತಿದ್ದು, ಕೆಲವೇ ಗಂಟೆಯಲ್ಲಿ ದಾಸ್ತಾನು ಖಾಲಿಯಾಗುತ್ತಿದೆ. ಬೇಡಿಕೆಯಷ್ಟು ಪ್ರಮಾಣದಲ್ಲಿ ಈ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲೆಯ ರಸಗೊಬ್ಬರ ಮಾರಾಟಗಾರರನ್ನು ವಿಚಾರಿಸಿದರೆ ಅವರು ಹೇಳುವುದೇ ಬೇರೆಯಾಗಿದೆ.

"ಸದ್ಯ ಪ್ರತಿ ಒಂದು ಲೋಡ್‌ನಷ್ಟು ಯೂರಿಯಾ ತರಿಸಿಕೊಳ್ಳಬೇಕಾದರೆ ಅದರ ಜೊತೆಗೆ ಒಂದು ಲೋಡ್‌ ಡಿಎಪಿ ಇಲ್ಲವೇ ಮತ್ತೊಂದು ಕಾಂಪ್ಲೆಕ್ಸ್‌ ಗೊಬ್ಬರವನ್ನೂ ತರಿಸಿಕೊಳ್ಳಬೇಕು. ಒಂದು ಲೋಡ್‌ಗೆ 15 ಟನ್‌ನಷ್ಟು ಗೊಬ್ಬರ ಬರುತ್ತದೆ. 300 ಮೂಟೆಗಳ ಒಂದು ಲೋಡ್‌ ಯೂರಿಯಾಕ್ಕೆ ₨80 ಸಾವಿರ ತಗುಲಿದರೆ, ಅದೇ ಒಂದು ಲಾರಿಯಷ್ಟು ಡಿಎಪಿಗೆ ₨ 3.5 ಲಕ್ಷ ತಗುಲುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸದ್ಯ ಕೇವಲ ಯೂರಿಯಾಗೆ ಮಾತ್ರ ಬೇಡಿಕೆ ಇದೆ. ಡಿಎಪಿ ತರಿಸಿಕೊಂಡರೂ ಕೊಳ್ಳುವವರಿಲ್ಲ. ಅಷ್ಟೊಂದು ಬಂಡವಾಳ ಹಾಕಿದ ಬಳಿಕ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಕನಕಪುರ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರೊಬ್ಬರು ದೂರುತ್ತಾರೆ.

"ಕಾಂಪ್ಲೆಕ್ಸ್‌ ಗೊಬ್ಬರ ಜೊತೆಗೆ ಕೊಳ್ಳದೇ ಇರುವವರಿಗೆ ಯೂರಿಯಾ ಪೂರೈಕೆಯನ್ನು ಬೇಕೆಂತಲೇ ವಿಳಂಬ ಮಾಡಲಾಗುತ್ತಿದೆ. ಕಂಪನಿಗಳು ಹೀಗೆ ಮಾಡುವುದರಿಂದ ಮಾರಾಟಗಾರರು ನಷ್ಟದ ಜೊತೆಗೆ ರೈತರಿಂದ ಆರೋಪ ಎದುರಿಸುವಂತೆ ಆಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು’ ಎನ್ನುವುದು ಮಾರಾಟಗಾರರ ಅಳಲು.

ಇನ್ನೆಷ್ಟು ಬೇಕು?: ಈ ಮುಂಗಾರಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಹೀಗಾಗಿ ರಸಗೊಬ್ಬರಕ್ಕೆ ಉತ್ತಮ ಬೇಡಿಕೆ ಇದೆ. ಒಟ್ಟಾರೆ 14 ಸಾವಿರ ಟನ್‌ನಷ್ಟು ಯೂರಿಯಾದ ಅಗತ್ಯ ಇದ್ದು, ಈ ಪೈಕಿ ಈಗಾಗಲೇ 12-13 ಸಾವಿರ ಟನ್‌ನಷ್ಟು ಉತ್ಪನ್ನ ಪೂರೈಕೆ ಆಗಿರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

"ಜಿಲ್ಲೆಗೆ ಈ ವಾರ 500 ಟನ್‌ ಯೂರಿಯಾ ಬಂದಿದೆ. ಇನ್ನು ಒಟ್ಟಾರೆ 600 ಟನ್‌ನಷ್ಟು ಗೊಬ್ಬರ ಬಂದರೂ ಸಾಕು. ಅದೂ ಸಹ ಶೀಘ್ರ ಪೂರೈಕೆ ಆಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ರಸಗೊಬ್ಬರದ ಗಂಭೀರ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಗೊಬ್ಬರ ಮಾರಾಟದ ಬಗ್ಗೆ ಗಮನ ಹರಿಸುವಂತೆ ಎಲ್ಲ ತಾಲ್ಲೂಕಿನ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌.

ಮಧ್ಯವರ್ತಿಗಳ ಕಾಟ: ಯೂರಿಯಾ ಅಭಾವವನ್ನೇ ಬಳಸಿಕೊಂಡು ಕೆಲವು ಮಧ್ಯವರ್ತಿಗಳು ರೈತರನ್ನು ಶೋಷಿಸುತ್ತಿದ್ದು, ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಯೂರಿಯಾ ಮಾರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ತಮ್ಮ ಸಂಗಡಿಗರೊಂದಿಗೆ ತೆರಳಿ ಗೊಬ್ಬರ ಮಾರಾಟಗಾರರ ಬಳಿ ನಿಗದಿತ ದರಕ್ಕೆ ಯೂರಿಯಾ ಖರೀದಿ ಮಾಡುವ ಈ ಮಧ್ಯವರ್ತಿಗಳ ಗುಂಪು ಬಳಿಕ ಅದೇ ಗೊಬ್ಬರವನ್ನು ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದೆ. ಪ್ರತಿ ಮೂಟೆಗೆ ₨400-450ರವರೆಗೂ ಮಾರಾಟ ನಡೆದಿದೆ ಎಂದು ರೈತರು ದೂರುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.