ಗುರುವಾರ , ಜನವರಿ 23, 2020
28 °C
ಮತದಾರರ ದಿನಾಚರಣೆ; ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜನೆ

‘ಮತದಾನದ ಬಗ್ಗೆ ಪ್ರಜ್ಞಾವಂತಿಕೆ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮತದಾನದಿಂದ ದೇಶಕ್ಕೆ ಒಳಿತು ಎನ್ನುವ ಪ್ರಜ್ಞಾವಂತಿಕೆ ಪ್ರತಿಯೊಬ್ಬರಲ್ಲೂ ಇದ್ದಾಗ ಉತ್ತಮ ಪ್ರಜಾಪ್ರತಿನಿಧಿಗಳು ಆಯ್ಕೆಯಾಗಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಸೆ ಆಮಿಷಗಳಿಗೆ ಒಳಗಾಗದೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮತ ಚಲಾಯಿಸಬೇಕು. ಆಗ ಉತ್ತಮ ಸರ್ಕಾರ ಅಧಿಕಾರಕ್ಕೆ ಬಂದು ದೇಶ ಮುನ್ನಡೆ ಹೊಂದುತ್ತದೆ. ಪ್ರಜೆಗಳೆಲ್ಲರಲ್ಲಿ ಸಮಾನತೆ ನೆಲೆಸುತ್ತದೆ ಎಂದು ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮದನ್, ಮತದಾನ ನಮ್ಮ ಸಂವಿಧಾನಾತ್ಮಕ ಜವಾಬ್ದಾರಿ. 18 ವರ್ಷ ತುಂಬಿದ ಪ್ರತಿಯೊಬ್ಬ ಯುವ ಜನರು ಪತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು. ಚುನಾವಣೆಯ ದಿನದ ಸಾರ್ವತ್ರಿಕ ರಜೆಯನ್ನು ಮತ ಚಲಾಯಿಸಲು ಮೀಸಲಿಡಬೇಕು. ಪ್ರವಾಸಕ್ಕೆ ಹೋಗಿ ಮಜಾ ಮಾಡಲು ಬಳಕೆ ಮಾಡಬಾರದು. ಪಂಚಾಯಿತಿಯಿಂದ ಲೋಕಸಭಾ ಚುನಾವಣೆಯವರೆಗೂ ಮತದಾನ ಮಾಡಿ ದೇಶದ ಅಭಿವೃದ್ಧಿಗೆ ನಾನು ಕೈಜೋಡಿಸಿದ್ದೇನೆ ಎನ್ನುವ ಹೆಮ್ಮೆ ಪ್ರತಿಯೊಬ್ಬ ಪ್ರಜೆಗೂ ಬರಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೋಮಶೇಖರಯ್ಯ ಮಾತನಾಡಿ ಮತದಾನ ಪವಿತ್ರವಾದ ಕರ್ತವ್ಯ ಎನ್ನುವ ಮನೋಭಾವ ಪ್ರತಿಯೊಬ್ಬ ಮತದಾರನಲ್ಲೂ ಬೆಳೆದಾಗ ಮಾತ್ರ ದೇಶದಲ್ಲಿ ಸುಭದ್ರ ಮತ್ತು ಸುವ್ಯವಸ್ಥಿತ ಸರ್ಕಾರ ಅಸ್ಥಿತ್ವಕ್ಕೆ ಬರುತ್ತದೆ ಎಂದರು.

ಭಾರತೀಯ ಸಂಸ್ಕತಿ ವಿದ್ಯಾ ಪೀಠದ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಶಿವಣ್ಣ ಮಾತನಾಡಿ ನಮ್ಮ ಸಂವಿಧಾನ ಮತದಾರರಿಗೆ ಮಹತ್ವದ ಜವಾಬ್ದಾರಿ ಕೊಟ್ಟಿದೆ. ದೇಶದಲ್ಲಿ ಭದ್ರತೆ, ಅಭ್ಯುದಯ, ಶಾಂತಿ, ಸುವ್ಯವಸ್ಥೆ ಶಾಶ್ವತವಾಗಿ ಇರಬೇಕಾದರೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಯೊಬ್ಬ ಪತದಾರನೂ ಪಾಲಿಸಬೇಕು. ಪ್ರಜಾಪ್ರಭುತ್ವಕ್ಕೆ ಮತದಾನವೇ ಅಡಿಗಲ್ಲು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮರೀಗೌಡ, ಪಿ. ಸೋಮಲಿಂಗಯ್ಯ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಸವಲಿಂಗಾಚಾರಿ, ಪ್ರಾಚಾರ್ಯರಾದ ಬಿ.ಸುಲೇಖಾ, ಎಂ.ಸಿ. ಗೋವಿಂದರಾಜು, ಉಪನ್ಯಾಸಕರಾದ ಎಂ.ಎನ್. ಪ್ರದೀಪ್, ಕಿರಣ್‌ಮಾರ್, ಭರತ್, ಗೋವಿಂದಸ್ವಾಮಿ, ಗಾಯಕ ವಿನಯ್‌ಕುಮಾರ್‌ ಇದ್ದರು. 

ಪ್ರತಿಕ್ರಿಯಿಸಿ (+)