ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರಕ್ಕೆ ಇನ್ನೂ ಹರಿಯದ ಜೀವಜಲ: ಬೇಸಿಗೆ ಬೆನ್ನಲ್ಲೇ ನೀರಿಗೆ ಹೆಚ್ಚಿದ ಹಾಹಾಕಾರ

ಪೂರ್ಣಗೊಳ್ಳದ 24X7 ನೀರು ಯೋಜನೆ
Published 19 ಫೆಬ್ರುವರಿ 2024, 4:17 IST
Last Updated 19 ಫೆಬ್ರುವರಿ 2024, 4:17 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆಯ ಬೇಗೆ ಹೆಚ್ಚಾಗುವುದಕ್ಕೆ ಮುಂಚೆ, 2023ರ ವರ್ಷಾಂತ್ಯಕ್ಕೆ ನಗರದ ನೀರಿನ ಬವಣೆ ನೀಗಲಿದೆ ಎಂದು ಕಾಯುತ್ತಿದ್ದ ಜನರ ನಿರೀಕ್ಷೆ ಹುಸಿಯಾಗಿದೆ. ರಾಮನಗರಕ್ಕೆ ಬರಬೇಕಿದ್ದ 24X7 ಕುಡಿಯುವ ನೀರಿಗೆ ವಿಘ್ನಗಳು ಎದುರಾಗುತ್ತಲೇ ಇವೆ. ಮತ್ತೊಂದು ವರ್ಷ ಕಳೆದು ಎರಡನೇ ತಿಂಗಳಿಗೆ ಕಾಲಿಟ್ಟರೂ ನೀರು ಮಾತ್ರ ಬಂದಿಲ್ಲ.

ರಾಮನಗರಕ್ಕೆ ನೀರು ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ, ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕ ಹಾಗೂ ಪೂರೈಕೆ ಮಾರ್ಗಕ್ಕೆ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್  ಕಳೆದ ಆಗಸ್ಟ್‌ನಲ್ಲಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು.

ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದ ಅವರು, ವರ್ಷಾಂತ್ಯ ಅಥವಾ ಜನವರಿಯಲ್ಲಿ ರಾಮನಗರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕಾಮಗಾರಿ ತ್ವರಿತಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ, ಕೆಲಸ ಮಾತ್ರ ಮುಗಿದಿಲ್ಲ.

ನೀರಿಗೆ ಹಾಹಾಕಾರ: ಬೇಸಿಗೆಯ ಬೇಗೆ ಹೆಚ್ಚಿದಂತೆ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸದ್ಯ ನಗರದಲ್ಲಿ ಕನಿಷ್ಠ 4 ದಿನಗಳಿಂದ 10 ದಿನಗಳವರೆಗೆ ಒಮ್ಮೆ ನೀರು ಪೂರೈಕೆಯಾಗುವ ವಿವಿಧ ಪ್ರದೇಶಗಳಿವೆ. 24X7 ನೀರು ಬಂದರೆ ಈ ನಮ್ಮ ಬವಣೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಸದ್ಯ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಮತ್ತು ನಗರಸಭೆಯು ನೀರಿನ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಿದೆ. ಕೊಳವೆಬಾವಿಗಳ ಮೂಲಕವೂ ನೀರು ಒದಗಿಸಲಾಗುತ್ತಿದೆ. ಇತ್ತೀಚೆಗೆ ನಗರಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಸಭೆ ನಡೆಸಿದ್ದಾಗಲೂ, ನೀರಿನ ಸಮಸ್ಯೆ ಕುರಿತು ಸದಸ್ಯರು ಗಮನ ಸೆಳೆದಿದ್ದರು. ಆಗ ಸಂಸದರು, ಹೆಚ್ಚುವರಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೆ ಸೂಚನೆ ನೀಡಿದ್ದರು.

₹450 ಕೋಟಿ ಮೊತ್ತದ ಯೋಜನೆ: ರಾಮನಗರ ನಗರಸಭೆ ವ್ಯಾಪ್ತಿಯ ಜನರಿಗೆ ನೀರು ಪೂರೈಕೆ ಮಾಡುವ ಈ ಯೋಜನೆಯನ್ನು ₹450 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೆಯುಡಬ್ಲ್ಯೂಎಸ್‌ಡಿಬಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದೆ. ಟಿ.ಕೆ. ಹಳ್ಳಿಯಿಂದ ರಾಮನಗರಕ್ಕೆ ನೀರು ತರಲು ಸುಮಾರು 60 ಕಿ.ಮೀ. ಪೈಪ್‌ಲೈನ್ ಅಳವಡಿಕೆಗೆ ಯೋಜನೆ ರೂಪಿಸಲಾಗಿತ್ತು. ಬಹುತೇಕ ಕಾಮಗಾರಿ ಮುಗಿದಿದ್ದು, ಕೆಲವೆಡೆ ಸಮಸ್ಯೆಯಾಗಿದ್ದರಿಂದ ಇನ್ನೂ ಪೂರ್ಣಗೊಂಡಿಲ್ಲ.

‘ರಾಮನಗರದ ಮುಖ್ಯ ರಸ್ತೆಯಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದ ಬಳಿಯ ಅರ್ಕಾವತಿ ನದಿಯ ಬಳಿ ಹಾಗೂ ಬಿ.ಎಂ. ರಸ್ತೆಯ ಸೇತುವೆ ಬಳಿ ಪೈಪ್‌ಲೈನ್ ಅಳವಡಿಕೆ ಕೆಲಸ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದ ಚನ್ನಮಾನಹಳ್ಳಿ ಹಾಗೂ ರೈಲ್ವೆ ಹಳಿ ಬಳಿಯೂ ಕೆಳ ಮಟ್ಟದಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಎಲ್ಲಾ ಮುಗಿಯಲು ಒಂದು ತಿಂಗಳು ಬೇಕಾಗುತ್ತದೆ’ ಎಂದು ಕೆಯುಡಬ್ಲ್ಯೂಎಸ್‌ಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾವೇರಿ ನದಿಯಿಂದ ಬಿಡಬ್ಲ್ಯೂಎಸ್‌ಎಸ್‌ಬಿಯವರು ಬೆಂಗಳೂರಿಗೆ ಪಂಪ್‌ ಮಾಡುವ ನೀರನ್ನು, ರಾಮನಗರಕ್ಕೆ ನೆಟಕಲ್‌ ಜಲ ಸಂಗ್ರಹಗಾರದಿಂದ ನಾವು ತೆಗೆದುಕೊಳ್ಳುತ್ತೇವೆ. ಮುಂಚೆ ನೀರು ತೊರೆಕಾಡನಹಳ್ಳಿಯಿಂದ ಗುರುವಿನಪುರ, ಚನ್ನಪಟ್ಟಣ ಹಾದು ರಾಮನಗರಕ್ಕೆ ಹೋಗುತ್ತಿತ್ತು. ಕಾಮಗಾರಿ ಮುಗಿದ ಬಳಿಕ, ಕಾರೇಕೊಪ್ಪ ಗೇಟ್‌ನಿಂದಲೇ ರಾಮನಗರಕ್ಕೆ ಪೈಪ್‌ಲೈನ್ ಮೂಲಕ ನೀರು ಹರಿಯಲಿದೆ. ಮಾರ್ಗಮಧ್ಯೆ, ಷರತ್ತಿನ ಪ್ರಕಾರ 12 ಗ್ರಾಮಗಳಿಗೆ ನಳದ ನೀರು ಕೊಡಲಾಗುವುದು’ ಎಂದು ಮಂಡಳಿ ಅಧಿಕಾರಿಗಳು ಹೇಳಿದರು.

ರಾಮನಗರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಇರುವ ಅರ್ಕಾವತಿ ಸೇತುವೆ ಬಳಿ ನಡೆಯುತ್ತಿರುವ 24X7 ಕುಡಿಯುವ ನೀರು ಯೋಜನೆಯ ಕಾಮಗಾರಿ
ರಾಮನಗರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಇರುವ ಅರ್ಕಾವತಿ ಸೇತುವೆ ಬಳಿ ನಡೆಯುತ್ತಿರುವ 24X7 ಕುಡಿಯುವ ನೀರು ಯೋಜನೆಯ ಕಾಮಗಾರಿ

62 ಎಂಎಲ್‌ಡಿ ಸಾಮರ್ಥ್ಯ: ‘ರಾಮನಗರದ ನೀರಿನ ಅಗತ್ಯ 2050ನೇ ವರ್ಷದಲ್ಲಿ ಎಷ್ಟಿರಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಸದ್ಯ ನಗರಕ್ಕೆ ಬೇಕಿರುವುದು 25 ಎಂಎಲ್‌ಡಿ ನೀರು ಮಾತ್ರ. ಸದ್ಯ ಟಿ.ಕೆ. ಹಳ್ಳಿಯಲ್ಲಿರುವ ಘಟಕವು 62 ಎಂಎಲ್‌ಡಿ ಸಾಮರ್ಥ್ಯದ್ದಾಗಿದೆ. ಪೂರೈಕೆಯಾಗುವ ನೀರು ಸಂಗ್ರಹಕ್ಕಾಗಿ, ರಾಮನಗರದ ಕೊತ್ತೀಪುರದಲ್ಲಿ 200 ಲಕ್ಷ ಲೀಟರ್ ಹಾಗೂ ಬೋಳಪ್ಪನಹಳ್ಳಿಯಲ್ಲಿ 100 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ನೀರನ್ನು ಪಂಪ್ ಮಾಡಲು 800 ಎಚ್‌.ಪಿ ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ರಾಮನಗರಕ್ಕೆ ನೀರು ಪೂರೈಕೆ ಮಾಡುವುದಕ್ಕಾಗಿ ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಮತ್ತು ಪೂರೈಕೆ ಘಟಕ
ರಾಮನಗರಕ್ಕೆ ನೀರು ಪೂರೈಕೆ ಮಾಡುವುದಕ್ಕಾಗಿ ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಮತ್ತು ಪೂರೈಕೆ ಘಟಕ

ಸರ್ಕಾರವೇ ಹೇಳುವಂತೆ, ಪ್ರತಿ ಪ್ರಜೆಗೆ ನಿತ್ಯ 135 ಲೀಟರ್‌ನಷ್ಟು ನೀರು ಸಿಗಬೇಕು. ಸದ್ಯ ಅಷ್ಟು ನೀರು ನಗರದ ಜನರಿಗೆ ಸಿಗುತ್ತಿಲ್ಲ. ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಪೈಕಿ, ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಕೊರತೆ ಇದೆ. ಯಾವ ವಾರ್ಡ್ ಸಹ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ನೀರಿಗಾಗಿ ನಡೆದ ಪ್ರತಿಭಟನೆಗಳಿಗೂ ಲೆಕ್ಕವಿಲ್ಲ. ಪ್ರತಿಭಟನೆ ನಡೆಸಿ ಹೈರಾಣಾಗಿರುವ ಜನ, ಇದೀಗ 24X7 ನೀರಿನ ನಿರೀಕ್ಷೆಯಲ್ಲಿದ್ದಾರೆ.

ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ ರಾಮನಗರ
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ ರಾಮನಗರ
ಸದ್ಯದಲ್ಲೇ‌ ಪ್ರಯೋಗಾರ್ಥ ಪೂರೈಕೆ
‘ಕುಡಿಯುವ ನೀರಿನ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಪೈಪ್‌ಲೈನ್ ಅಳವಡಿಸಲು ಅನುಮತಿ ಸಿಗುವುದರಲ್ಲಿ ವಿಳಂಬ ಗ್ರಾಮಸ್ಥರ ವಿರೋಧ ಸೇರಿದಂತೆ ಕಾಮಗಾರಿ ಬೇಗನೆ ಮುಗಿಯಲು ಹಲವು ತೊಂದರೆಗಳು ಎದುರಾದವು. ಈಗ ಎಲ್ಲವನ್ನೂ ಪರಿಹರಿಸಲಾಗಿದ್ದು ಉಳಿಕೆ ಕೆಲಸಗಳು ಭರದಿಂದ ಸಾಗುತ್ತಿವೆ. ಫೆಬ್ರುವರಿ ಅಂತ್ಯಕ್ಕೆ ಪ್ರಯೋಗಾರ್ಥವಾಗಿ ನಗರಕ್ಕೆ 24X7ನೀರು ಪೂರೈಕೆಯಾಗಲಿದೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣ

‘ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲವೆಡೆ ಕಾಮಗಾರಿಗೆ ತೊಂದರೆ ಎದುರಾಗಿದ್ದರಿಂದ ವಿಳಂಬವಾಯಿತು. ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ಟೆಂಡರುದಾರರೊಂದಿಗೆ ಸಭೆ ನಡೆಸಿ ಮಾರ್ಚ್ ತಿಂಗಳೊಳಗೆ ಮುಗಿಸಲು ಸೂಚನೆ ನಿಡಲಾಗಿದೆ. ಬೆಂಗಳೂರು ಕುಡಿಯುವ ನೀರು ಸರಬರಾಜು ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ರಾಮನಗರಕ್ಕೆ ನೀರು ಪೂರೈಕೆ ಮಾಡುವ ಟಿ.ಕೆ. ಹಳ್ಳಿಯ ಘಟಕಕ್ಕೆ ನೀರು ಪೂರೈಕೆಗೆ ಅನುಮತಿ ಕೊಡಬೇಕು. ಜೊತೆಗೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಿಂದ ನೀರು ಪೂರೈಕೆಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಸಿಗಬೇಕಿದೆ. ರಾಮನಗರ ವ್ಯಾಪ್ತಿಯ ಎರಡು ಕಡೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಸದ್ಯದಲ್ಲೇ ಅದು ಪೂರ್ಣಗೊಳ್ಳಬೇಕಿದೆ’ ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹದಗೆಟ್ಟ ರಸ್ತೆಗಳಿಗೆ ಸಿಗದ ಮುಕ್ತಿ
ನೀರಿನ ಯೋಜನೆಗೆಆಗಿ ಪೈಪ್‌ಲೈನ್ ಹಾಗೂ ನೀರು ಸಂಪರ್ಕ ಕಾಮಗಾರಿಗಾಗಿ ನಗರದಾದ್ಯಂತ ರಸ್ತೆಗಳನ್ನು ಅಗೆಯಲಾಗಿದೆ. ಸರಿಯಾಗಿ ಮುಚ್ಚದೆ ತೇಪೆ ಹಾಕಿರುವುದರಿಂದ ಬಹುತೇಕ ರಸ್ತೆಗಳು ಗುಂಡಿಬಿದ್ದು ಹದಗೆಟ್ಟಿವೆ. ರಸ್ತೆಗಳನ್ನು ಸರಿಯಾಗಿ ದುರಸ್ತಿ ಮಾಡುವಂತೆ ನಗರಸಭೆ ವಿಶೇಷ ಸಭೆಯಲ್ಲಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅಲ್ಲದೆ ದುರಸ್ತಿ ಹಣವನ್ನು ನಗರಸಭೆಗೆ ಕೊಟ್ಟರೆ ಅವರು ಇಡೀ ರಸ್ತೆಯನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದು ಶಾಸಕರು ಮತ್ತು ಸಂಸದರು ಸೂಚಿಸಿದ್ದರು. ಹಣ ಹಸ್ತಾಂತರ ಕುರಿತು ಇನ್ನೂ ಅಂತಿಮವಾಗಿಲ್ಲ. ಈ ನಡುವೆ ರಸ್ತೆಗಳು ಮಾತ್ರ ದೂಳಿಡಿದಿವೆ. ರಸ್ತೆ ರಿಪೇರಿ ಬದಲು ದೂಳು ಏಳದಂತೆ ಪ್ರಮುಖ ರಸ್ತೆಗಳಿಗೆ ನೀರು ಹಾಯಿಸಲಾಗುತ್ತಿದೆ. ‘ನೀರು ಸಂಪರ್ಕ ಕಾಮಗಾರಿ ಇನ್ನೂ ಎರಡ್ಮೂರು ಕಿ.ಮೀ. ಬಾಕಿ ಇದೆ. ಎಲ್ಲವೂ ಮುಗಿದ ತಕ್ಷಣ ಒಮ್ಮೆಲೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡಳಿಯ ಎಇಇ ಕುಸುಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT