ಶುಕ್ರವಾರ, ಮೇ 27, 2022
23 °C

ಚನ್ನಪಟ್ಟಣ: ಮನೆಗೆ ನುಗ್ಗಿದ ನೀರು, ಬೆಳೆಗಳು ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನೆಲ್ಲೆಡೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಮಧ್ಯಾಹ್ನ ವ್ಯಾಪಕ ಮಳೆಯಾಗಿದ್ದು, ಹಲವೆಡೆ ಬೆಳೆಗಳು ನೀರಿನಲ್ಲಿ ಮುಳುಗಿದ್ದರೆ, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.

ತಾಲ್ಲೂಕಿನ ವಿರುಪಾಕ್ಷಿಪುರ, ಕೆ.ಜಿ.ಮಹಡಿ, ಹೊಂಗನೂರು, ಕೋಡಂಬಹಳ್ಳಿ, ಅಂಚೀಪುರ, ಹುಚ್ಚಯ್ಯನದೊಡ್ಡಿ ಗ್ರಾಮಗಳು ಸೇರಿದಂತೆ ಹಲವೆಡೆ ರೈತರ ಬೆಳೆಗಳಿಗೆ ನೀರು ನುಗ್ಗಿದೆ. ಬಾಳೆ, ತೆಂಗು, ಜೋಳ, ಭತ್ತ ಸೇರಿದಂತೆ ಬೆಳೆಗಳು ನೀರುಪಾಲಾಗಿವೆ. ತಾಲ್ಲೂಕಿನ ಹುಣಸನಹಳ್ಳಿ, ಹುಚ್ಚಯ್ಯನದೊಡ್ಡಿ, ಪಟ್ಟಣದ ಕೆಲವು ಬಡಾವಣೆಗಳ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನೀರು ಪಾಲಾಗಿವೆ.

ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ನಾಲ್ಕು ಮಂದಿಯ ಮನೆಗಳ ಗೋಡೆಗಳು ಉರುಳಿವೆ. ಹಾಗೆಯೆ ಹುಚ್ಚಯ್ಯನದೊಡ್ಡಿ ಗ್ರಾಮದ ಗೌರಮ್ಮ ಅವರ ಗುಡಿಸಲಿನ ಗೋಡೆ ಕುಸಿದು ಬಿದ್ದಿದೆ. ಇದರ ಜೊತೆಗೆ ಜಯಮ್ಮ ಅವರ ಮನೆಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿವೆ. ನೀರು ಹೊರಗೆ ಹರಿಯದ ಕಾರಣ ಮನೆ ಮಂದಿಯೆಲ್ಲಾ ಹೊರಗೆ ಕಾಲ ಕಳೆಯುವಂತಾಗಿದೆ.

ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ಬೆಂಗಳೂರು ಮೈಸೂರು ಬೈಪಾಸ್ ರಸ್ತೆಯ ತುಂಬೆಲ್ಲಾ ನೀರು ನಿಂತಿದ್ದು, ಈ ಭಾಗದ ರೈತರ ಬೆಳೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಬೈಪಾಸ್ ರಸ್ತೆ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎಂದು
ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೆ ತಾಲ್ಲೂಕಿನೆಲ್ಲೆಡೆ ಉತ್ತಮ ಮಳೆಯಾಗಿರುವ ಕಾರಣ ಕೆರೆ ಕಟ್ಟೆ, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಕೆಲವೆಡೆ ರಸ್ತೆಯ ಮೇಲೆ ನೀರು ಹರಿದಿದ್ದು, ವಾಹನ ಸವಾರರು ನೀರಿನಲ್ಲಿಯೆ ಚಲಿಸುವಂತಾಗಿದೆ. ಶುಕ್ರವಾರ ಸಂಜೆಯೂ ತಾಲ್ಲೂಕಿನ ಬಹುತೇಕ ಕಡೆ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು