ಶನಿವಾರ, ಮಾರ್ಚ್ 6, 2021
19 °C
ವನ್ಯಜೀವಿಗಳಿಗೆ ಕಾಡಲ್ಲಿ ನೀರು, ಆಹಾರದ ಕೊರತೆ; ನಾಡಿನತ್ತ ನುಗ್ಗುತ್ತಿದೆ ಗಜಪಡೆ

ನಾಡಿನತ್ತ ನುಗ್ಗುತ್ತಿದೆ ಗಜಪಡೆ: ಬೇಸಿಗೆ ಹೊತ್ತಲ್ಲಿ ಹೆಚ್ಚಾಯ್ತು ಸಂಘರ್ಷ!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೇಸಿಗೆ ಸಮೀಪಿಸಿದ್ದು, ಕಾಡು ಒಣಗಿ ನಿಂತಿದೆ. ಹೀಗಾಗಿ ವನ್ಯಮೃಗಗಳು ಆಹಾರ ಅರಸಿ ನಾಡಿನತ್ತ ಹೆಜ್ಜೆ ಇಡಲು ಆರಂಭಿಸಿದ್ದು, ಮತ್ತೆ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚು ಸುದ್ದಿಯಾಗತೊಡಗಿದೆ.

ಕಳೆದ ಆರು ವರ್ಷದಲ್ಲಿ ಜಿಲ್ಲೆಯಲ್ಲಿ 7 ಸಾವಿರಕ್ಕೂ ಹೆಚ್ಚು ಬೆಳೆಹಾನಿ ಪ್ರಕರಣಗಳು ವರದಿ ಆಗಿವೆ. ಎರಡು ಸಾವಿರಕ್ಕೂ ಹೆಚ್ಚು ಸಾಕುಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಆನೆ, ಚಿರತೆ ಹಾಗೂ ಕರಡಿಗಳು ಹೆಚ್ಚು ವಾಸವಿವೆ. ಜೊತೆಗೆ ಕಾಡುಹಂದಿ, ನವಿಲುಗಳೂ ಹೊಲಗಳಿಗೆ ಲಗ್ಗೆ ಇಡುತ್ತಿವೆ. ಕಾಡಂಚಿನ ಗ್ರಾಮಗಳಲ್ಲಿ ಗಜಪಡೆಗಳು ದಾಳಿಯಿಟ್ಟು ಬೆಳೆ ನಾಶ ಮಾಡಿ, ಪ್ರಾಣ ಹಾನಿಯನ್ನೂ ಮಾಡುತ್ತಿವೆ. ಚಿರತೆಗಳು ಹಳ್ಳಿಗಳಿಗೆ ನುಗ್ಗಿ ಸಾಕುಪ್ರಾಣಿಗಳನ್ನು ಹೊತ್ತೊಯ್ಯುವುದು ಸರ್ವೇ ಸಾಮಾನ್ಯವಾಗಿದೆ.

ಜಿಲ್ಲೆಯಲ್ಲಿ ಸುಮಾರು 69,946 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಇದೆ. ಕಾವೇರಿ ವನ್ಯಧಾಮದ ಜೊತೆಗೆ ಸಾವನದುರ್ಗ, ರಾಮದೇವರ ಬೆಟ್ಟ, ಹಂದಿಗುಂದಿ, ತೆಂಗಿನಕಲ್ಲು, ದೊಡ್ಡಮಣ್ಣುಗುಡ್ಡೆ ಸಹಿತ ಹತ್ತಾರು ಅರಣ್ಯಗಳು ಇಲ್ಲಿನ ಪ್ರಕೃತಿಯ ಸಿರಿಯನ್ನು ಹೆಚ್ಚಿಸುತ್ತಿವೆ. ಆದರೆ ಅಕ್ರಮ ಗಣಿಗಾರಿಕೆ, ಒತ್ತುವರಿ ಮೊದಲಾದ ಕಾರಣಗಳಿಂದಾಗಿ ಅರಣ್ಯ ಪ್ರದೇಶ ಕಿರಿದಾಗತೊಡಗಿದೆ. ಹೀಗಾಗಿ ಮನುಷ್ಯರ ಜೊತೆಗಿನ ವನ್ಯಜೀವಿ ಸಂಘರ್ಷ ಹೆಚ್ಚುತ್ತಲೇ ಹೋಗುತ್ತಿದೆ.

ಸಾವು ನೋವು ಹೆಚ್ಚು: ಜಿಲ್ಲೆಯಲ್ಲಿ ಇತರ ಪ್ರಾಣಿಗಳಿಗೆ ಹೋಲಿಸಿದರೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರೇ ಹೆಚ್ಚು. ಅರಣ್ಯ ರಕ್ಷಕರೂ ಈ ಪಟ್ಟಿಯಲ್ಲಿ ಸೇರಿದ್ದಾರೆ. ಕಳೆದ ಆರು ವರ್ಷದಲ್ಲಿ ಹನ್ನೆರಡಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಸಾತನೂರು, ಕನಕಪುರ ಭಾಗದಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. 2017ರಲ್ಲಿ ಒಂದೇ ದಿನ ಮಾಗಡಿ ಗಡಿಭಾಗದಲ್ಲಿ ಚಿರತೆ ದಾಳಿ ಹಾಗೂ ಕನಕಪುರದಲ್ಲಿ ಕರಡಿ ದಾಳಿಯಿಂದಾಗಿ ತಲಾ ಒಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರು. ಕಳೆದ ವರ್ಷ ಮಾಗಡಿಯಲ್ಲಿ ಚಿರತೆ ದಾಳಿಗೆ ಮಹಿಳೆ ಹಾಗೂ ಮಗು ಬಲಿಯಾಗಿದ್ದರು.

ಪರಿಹಾರ ಹೆಚ್ಚಳ: ಸರ್ಕಾರವು ವನ್ಯಜೀವಿಗಳಿಂದಾದ ಜೀವಹಾನಿಗೆ ನೀಡಲಾಗುವ ಪರಿಹಾರವನ್ನು 2017ರಲ್ಲಿ ದುಪ್ಪಟ್ಟು ಮಾಡಿದೆ. ಸಾವು ಹಾಗೂ ಶಾಶ್ವತ ಅಂಗವಿಕಲತೆಗೆ ಗರಿಷ್ಠ ₹ 7.5 ಲಕ್ಷ ಪರಿಹಾರ ಧನ ಸಿಗುತ್ತಿದೆ. 2020–21ರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅವರ ಕುಟುಂಬಗಳಿಗೆ ₹ 15 ಲಕ್ಷ ಪರಿಹಾರ ನೀಡಲಾಗಿದೆ.

2015–16ರಲ್ಲಿ ಸಾವಿಗೀಡಾದ ಇಬ್ಬರ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರ ಧನ ಸಿಕ್ಕಿದೆ. 2016–17ನೇ ಸಾಲಿನಲ್ಲಿ ಮೂವರು ಪ್ರಾಣ ತೆತ್ತಿದ್ದು, ಇವರ ಕುಟುಂಬಕ್ಕೆ ಒಟ್ಟು ₹ 15 ಲಕ್ಷ ಪರಿಹಾರ ನೀಡಲಾಗಿದೆ. ಈ ಅವಧಿಯಲ್ಲಿ 21 ಮಂದಿ ಪ್ರಾಣಿ ದಾಳಿಯಿಂದ ಗಾಯಗೊಂಡಿದ್ದು, ಅವರಿಗೆ ಒಟ್ಟು ₹ 7.15 ಲಕ್ಷ ನೀಡಲಾಗಿದೆ. 2017–18ನೇ ಸಾಲಿನಲ್ಲಿ 4 ಮಂದಿ ಪ್ರಾಣ ಕಳೆದುಕೊಂಡಿದ್ದು, ₹ 11 ಲಕ್ಷ ಪರಿಹಾರ ವಿತರಣೆ ಆಗಿದೆ. ಇದೇ ಸಂದರ್ಭ 14 ಮಂದಿ ಗಾಯಗೊಂಡಿದ್ದು, ಅವರಿಗೆ ₹ 9.34 ಲಕ್ಷ ಹಣಕಾಸು ನೆರವು ನೀಡಲಾಗಿದೆ. 2018–19ರಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬಕ್ಕೆ ₹ 5 ಲಕ್ಷ ನೀಡಲಾಗಿದೆ. ಅಂತೆಯೇ 4 ಮಂದಿ ಗಾಯಗೊಂಡಿದ್ದು, ₹ 10.62 ಲಕ್ಷ ಪರಿಹಾರ ವಿತರಣೆ ಆಗಿದೆ.

ಸಾಕುಪ್ರಾಣಿಗಳಿಗೂ ಕುತ್ತು: ಕಳೆದ ಆರು ವರ್ಷದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾಕುಪ್ರಾಣಿಗಳು ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಂಡಿವೆ. ಅದರಲ್ಲಿಯೂ ಕುರಿ, ಮೇಕೆ, ಕೋಳಿ, ಹಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿವೆ. 2015–16ರಲ್ಲಿ ಜಿಲ್ಲೆಯಲ್ಲಿ 248 ಸಾಕುಪ್ರಾಣಿಗಳು ಮೃತಪಟ್ಟಿದ್ದು, ಇವುಗಳ ಮಾಲೀಕರಿಗೆ ₹ 20 ಲಕ್ಷ ಪರಿಹಾರ ಸಿಕ್ಕಿದೆ.

2016–17ರಲ್ಲಿ 456 ಪ್ರಾಣಿಗಳ ಸಾವಿಗೆ ಅರಣ್ಯ ಇಲಾಖೆಯು ₹ 31.27 ಲಕ್ಷ ಪರಿಹಾರ ತೆತ್ತಿದೆ. ಮುಂದಿನ ಸಾಲಿನಲ್ಲಿ ಇವುಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಈ ವರ್ಷ 606 ಪ್ರಾಣಿಗಳ ಪ್ರಾಣಹರಣವಾಗಿದ್ದು, ₹ 44.35 ಲಕ್ಷ ಪರಿಹಾರ ವಿತರಣೆ ಆಗಿದೆ. 2018– 19ರಲ್ಲಿ ಒಟ್ಟು 601 ಪ್ರಾಣಿಗಳು ಸಾವಿಗೀಡಾಗಿದ್ದು, ₹ 64.81 ಲಕ್ಷ ಪರಿಹಾರ ನೀಡಲಾಗಿದೆ. 2020–21ನೇ ಸಾಲಿನಲ್ಲಿ 153 ಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದು, ಅವುಗಳ ಮಾಲೀಕರಿಗೆ ₹ 17.12 ಲಕ್ಷ ಪರಿಹಾರ ವಿತರಿಸಲಾಗಿದೆ.

ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯ: ಬೆಳೆಹಾನಿ, ಶಾಶ್ವತವಾಗಿ ಮರ-ಮುಟ್ಟುಗಳ ಹಾನಿಗಳು, ಜನ -ಜಾನುವಾರುಗಳ ಪ್ರಾಣ ಹಾನಿಗಳು ಮೊದಲಾದವುಗಳಿಗೆ ಸರ್ಕಾರವು ನೀಡುತ್ತಿರುವ ನಷ್ಟ ಪರಿಹಾರವು ಅವೈಜ್ಞಾನಿಕವಾಗಿದೆ. ಕೆಲವೊಮ್ಮೆ ವರ್ಷಗಳು ಕಳೆದರೂ ರೈತರಿಗೆ ಪರಿಹಾರದ ಹಣ ತಲುಪದಾಗಿದೆ. ಬಾಳೆ, ಮಾವು, ವೀಳ್ಯದೆಲೆ, ತೆಂಗು, ಅಡಿಕೆ, ಪಪ್ಪಾಯಿ, ತರಕಾರಿಗಳು, ಮೇವು ಬೆಳೆಗಳಿಗೆ ಮಾರುಕಟ್ಟೆ ದರಕ್ಕೆ ತಕ್ಕಂತೆ ಪರಿಹಾರ ದೊರೆಯುತ್ತಿಲ್ಲ. ಇದರಿಂದ ರೈತರಿಗೆ ಹೆಚ್ಚು ನಷ್ಟವಾಗಿದೆ. ಹೀಗಾಗಿ ಅರಣ್ಯ ಇಲಾಖೆಯು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ದರ ನೀಡಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.

ನೀರಿಗೆ ವ್ಯವಸ್ಥೆ:‘ ವನ್ಯಜೀವಿಗಳಿಗೆ ಅವುಗಳು ಇರುವ ಕಡೆಯೇ ನೀರಿನ ವ್ಯವಸ್ಥೆ ಮಾಡಿ ಆದಷ್ಟೂ ಕಾಡಿನೊಳಗೇ ಅವುಗಳನ್ನು ತಡೆಯುವ ಪ್ರಯತ್ನವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ. ಈಗಾಗಲೇ ಕಾಡಿನ ಅಲ್ಲಲ್ಲಿ ಚೆಕ್‌ಡ್ಯಾಮ್‌ಗಳು ನಿರ್ಮಾಣ ಆಗಿದ್ದು. ಅಲ್ಪಸ್ವಲ್ಪ ನೀರು ನಿಂತಿದೆ. ಅಲ್ಲಲ್ಲಿ ನೀರಿನ ಹೊಂಡಗಳು, ತೊಟ್ಟಿಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಲಾಗುತ್ತಿದೆ. ಅನಿವಾರ್ಯ ಆದಲ್ಲಿ ಟ್ಯಾಂಕರ್‌ಗಳ ಮೂಲಕವೂ ನೀರು ತುಂಬಿಸಲಾಗುವುದು ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿ.

ರೈಲ್ವೆ ಬ್ಯಾರಿಕೇಡ್‌ಗೆ ಬೇಕು ₹ 22 ಕೋಟಿ: ಹೆಸರುಘಟ್ಟದಿಂದ ಸಂಗಮದವರೆಗೆ ಆನೆಗಳು ಕೃಷಿ ಭೂಮಿಯತ್ತ ಹರಿದಾಡುವ ಜಾಡಿನಲ್ಲಿ ಅಡ್ಡವಾಗಿ ರೈಲ್ವೆ ಕಂಬಿ ಬೇಲಿ ಸ್ಥಾಪನೆಗೆ ವರ್ಷಕ್ಕೆ ಕನಿಷ್ಠ 10 ಕಿ.ಮೀ.ಗೆ ₹ 10 ಕೋಟಿ ವ್ಯಯ ಮಾಡಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸುವ ಅಗತ್ಯವಿದೆ. ವನ್ಯಜೀವಿಧಾಮಗಳ ಒಳಗೇ ಕಾಡು ಪ್ರಾಣಿಗಳಿಗೆ ಆಹಾರ–ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕಿದೆ. ಹೀಗೆ ಮಾಡಿದರೆ ರೈತರ ಪ್ರಾಣ, ಬೆಳೆ–ಎರಡೂ ಉಳಿಯುತ್ತದೆ ಎನ್ನುವುದು ರೈತ ಮುಖಂಡರ ಅಭಿಪ್ರಾಯ.

ಜಿಲ್ಲೆಯಲ್ಲಿ ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣಕ್ಕೆ ಇಲ್ಲಿನ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಒಟ್ಟಾರೆ 19 ಕಿಲೋಮೀಟರ್ ಉದ್ದಕ್ಕೆ ಬೇಲಿ ನಿರ್ಮಿಸಬೇಕಿದ್ದು, ಇದಕ್ಕೆ ₹ 22.49 ಕೋಟಿ ಅನುದಾನ ಕೋರಲಾಗಿದೆ. ಅದರಲ್ಲೂ ಸಂಗಮ ಅರಣ್ಯ ವಲಯದಿಂದ ಚನ್ನ‍ಪಟ್ಟಣದ ಭೂಹಳ್ಳಿವರೆಗೆ ಈಚಿನ ದಿನಗಳಲ್ಲಿ ಆನೆದಾಳಿ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ತುರ್ತಾಗಿ 4.4. ಕಿ.ಮೀ. ಉದ್ದದ ರೈಲ್ವೆ ಬೇಲಿ ಮತ್ತು ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ತೀರ್ಮಾನಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು