ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಇಳುವರಿ ಕುಸಿತ, ಮಾವು ದುಬಾರಿ

ನಿರಂತರ ಮಳೆ, ಬಿರುಗಾಳಿ: ಕೊಯ್ಲು ಚುರುಕು
Published 9 ಮೇ 2023, 19:40 IST
Last Updated 9 ಮೇ 2023, 19:40 IST
ಅಕ್ಷರ ಗಾತ್ರ

ರಾಮನಗರ: ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ರಾಜ್ಯದಲ್ಲಿ ಮಾವು ಇಳುವರಿ ತೀವ್ರ ಕುಸಿತ ಕಂಡಿದ್ದು, ಇದರಿಂದಾಗಿ ಗ್ರಾಹಕರಿಗೆ ಮಾವಿನ ಹಣ್ಣು ತುಟ್ಟಿಯಾಗುತ್ತಿದೆ.

ಸದ್ಯ ರಾಮನಗರದ ಮಾವು ಮಾರುಕಟ್ಟೆಗೆ ಕಾಲಿಟ್ಟಿದ್ದು, ಕಳೆದ ಒಂದು ತಿಂಗಳಿಂದಲೂ ಕೊಯ್ಲು ನಡೆದಿದೆ. ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಮಳೆ–ಗಾಳಿ ಹೆಚ್ಚಿದ್ದು, ರೈತರು ಕೊಯ್ಲು ಚುರುಕುಗೊಳಿಸಿದ್ದಾರೆ. ಇದರಿಂದ ಚನ್ನಪಟ್ಟಣ ಹಾಗೂ ರಾಮನಗರ ಎಪಿಎಂಸಿಗೆ ಉತ್ಪನ್ನದ ಆವಕ ಹೆಚ್ಚಿದ್ದು, ನಿತ್ಯ ತಲಾ 150–200 ಟನ್‌ನಷ್ಟು ಮಾವು ಬರುತ್ತಿದೆ. ಮಳೆ ಹೆಚ್ಚಿದಷ್ಟು ಮಾವಿನ ಆವಕವೂ ಹೆಚ್ಚಲಿದೆ. ಹೀಗಿದ್ದೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾವಿನ ದರ ಕಡಿಮೆ ಆಗಿಲ್ಲ.

ಸದ್ಯ ಮಾರುಕಟ್ಟೆಗೆ ಬದಾಮಿ, ರಸಪುರಿ, ಸೇಂದೂರ ಹಾಗೂ ತೋತಾಪುರಿ ತಳಿಯ ಮಾವು ಹೆಚ್ಚು ಆವಕ ಆಗುತ್ತಿದೆ. ಬೈಗನ್‌ಪಲ್ಲಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಮಲ್ಲಿಕ, ಮಲಗೋವ ಮತ್ತಿತರ ತಳಿಗಳ ಮಾವು ನಂತರದಲ್ಲಿ ಆವಕ ಆಗಲಿವೆ. ಇವುಗಳ ಆವಕ ಹೆಚ್ಚಾದರೂ ಗ್ರಾಹಕರಿಗೆ ಸಿಗುವ ಹಣ್ಣಿನ ಬೆಲೆ ಇಳಿಯುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವರ್ತಕರು.

ರಾಮನಗರ ಜಿಲ್ಲೆಯಲ್ಲಿ ಬೆಳೆಯುವ ಮಾವಿನ ಪೈಕಿ ಶೇ 70ರಷ್ಟು ಅಲ್ಫಾನ್ಸೊ ಅರ್ಥಾತ್‌ ಬದಾಮಿ ತಳಿಯದ್ದಾಗಿದ್ದು, ರಫ್ತು ಗುಣಮಟ್ಟ ಹೊಂದಿದೆ. ಆದರೆ ಚುನಾವಣೆ ಕಾರಣಕ್ಕೆ ನಗದು ಸಾಗಣೆಗೆ ನಿರ್ಬಂಧ ಇರುವ ಕಾರಣ ಈ ಬಾರಿ ಹೊರ ರಾಜ್ಯಗಳ ವರ್ತಕರು ಹೆಚ್ಚು ಇತ್ತ ತಲೆ ಹಾಕಿಲ್ಲ. ಜ್ಯೂಸ್‌ ತಯಾರಿಕಾ ಕಾರ್ಖಾನೆಗಳು ನಿಧಾನವಾಗಿ ಖರೀದಿಗೆ ಮುಂದಾಗುತ್ತಿವೆ. ಜೂನ್‌–ಜುಲೈನಲ್ಲಿ ಕೋಲಾರ ಜಿಲ್ಲೆಯ ಮಾವು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಇಳುವರಿ ಕುಸಿತ: ಮಾವು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ವಾರ್ಷಿಕ ಸರಾಸರಿ 12ರಿಂದ 16 ಲಕ್ಷ ಟನ್‌ನಷ್ಟು ಮಾವು ಬೆಳೆಯಲಾಗುತ್ತಿದೆ. ಇದರಲ್ಲಿ ಬದಾಮಿ ತಳಿಯದ್ದು ಸಿಂಹಪಾಲು. ಆದರೆ ಈ ವರ್ಷ ಏರು ಹಂಗಾಮು ಇದ್ದರೂ ಎಲ್ಲೆಡೆ ಇಳುವರಿ ಕುಸಿದಿದೆ. ರಾಮನಗರ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದ್ದು, ವಾರ್ಷಿಕ ಸರಾಸರಿ 2 ಲಕ್ಷ ಟನ್‌ನಷ್ಟು ಇಳುವರಿ ಇದೆ. ಆದರೆ ಈ ವರ್ಷ 60–80 ಸಾವಿರ ಟನ್‌ನಷ್ಟು ಇಳುವರಿ ಸಿಕ್ಕರೆ ಹೆಚ್ಚು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

**
ಹವಾಮಾನದಲ್ಲಿನ ವ್ಯತ್ಯಾಸ, ಕೀಟಬಾಧೆ ಕಾರಣಕ್ಕೆ ಈ ಬಾರಿ ಶೇ 40ರಷ್ಟು ಫಸಲು ಸಿಕ್ಕರೆ ಹೆಚ್ಚಾಗಿದೆ. ಇಳುವರಿ ಕಡಿಮೆ ಕಾರಣಕ್ಕೆ ರೈತರಿಗೆ ನಿರ್ವಹಣೆ ವೆಚ್ಚ ಸಿಕ್ಕರೇ ಹೆಚ್ಚು ಎನ್ನುವಂತಾಗಿದೆ
–ನಾಗರಾಜು, ಮಾವು ಬೆಳೆಗಾರ, ನಾಗನಹಳ್ಳಿ

ನಾಗರಾಜು
ನಾಗರಾಜು
ರಾಮನಗರ ಎಪಿಎಂಸಿಯಲ್ಲಿ ಮಂಗಳವಾರ ಮಳೆ ನಡುವೆ ಮಾವಿನ ವಹಿವಾಟು ನಡೆಯಿತು
ಪ್ರಜಾವಾಣಿ ಚಿತ್ರ
ರಾಮನಗರ ಎಪಿಎಂಸಿಯಲ್ಲಿ ಮಂಗಳವಾರ ಮಳೆ ನಡುವೆ ಮಾವಿನ ವಹಿವಾಟು ನಡೆಯಿತು ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT