ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಯುವನಿಧಿ: 7 ತಿಂಗಳಲ್ಲಿ ₹85.60 ಲಕ್ಷ ಪಾವತಿ

ಜಿಲ್ಲೆಯಲ್ಲಿದ್ದಾರೆ 2,881 ಪದವಿ–ಡಿಪ್ಲೋಮಾ ನಿರುದ್ಯೋಗಿಗಳು; ಕನಕಪುರದಲ್ಲಿ ಹೆಚ್ಚು, ಮಾಗಡಿಯಲ್ಲಿ ಕಡಿಮೆ
Published 26 ಆಗಸ್ಟ್ 2024, 6:29 IST
Last Updated 26 ಆಗಸ್ಟ್ 2024, 6:29 IST
ಅಕ್ಷರ ಗಾತ್ರ

ರಾಮನಗರ: ಪದವೀಧರ ಮತ್ತು ಡಿಪ್ಲೋಮಾ ನಿರುದ್ಯೋಗಿಗಳಿಗೆ ಕೆಲಸ ಸಿಗುವವರೆಗೆ ಆರ್ಥಿಕವಾಗಿ ಆಸರೆಯಾಗಲು ರಾಜ್ಯ ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಏಳು ತಿಂಗಳ ಹಿಂದೆ ಜಾರಿಗೆ ಬಂದಿರುವ ಯೋಜನೆಯ ಪ್ರಯೋಜನವನ್ನು ಜಿಲ್ಲೆಯಲ್ಲಿ ಇದುವರೆಗೆ 2,881 ನಿರುದ್ಯೋಗಿಗಳು ಪಡೆದಿದ್ದಾರೆ. ಇದುವರೆಗೆ ₹85,60,500 ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಲಾಗಿದೆ.

ತನ್ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿಯನ್ನು ಸರ್ಕಾರ ಕಳೆದ ಡಿಸೆಂಬರ್‌ನಿಂದ ಜಾರಿಗೊಳಿಸಿದೆ. ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ ಮುಗಿಸಿ 6 ತಿಂಗಳಾದರೂ ಯಾವುದೇ ಕೆಲಸ ಸಿಗದ ನಿರುದ್ಯೋಗಿಗಳು, ಯೋಜನೆಯಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.

ಮಾನದಂಡಗಳ ಪ್ರಕಾರ, ಪದವಿ ನಿರುದ್ಯೋಗಿಗೆ ಪ್ರತಿ ತಿಂಗಳಿಗೆ ₹3 ಸಾವಿರ ಮತ್ತು ಡಿಪ್ಲೋಮಾ ಮುಗಿಸಿರುವವರಿಗೆ ₹1,500 ಮೊತ್ತವನ್ನು ಸರ್ಕಾರ ಪಾವತಿಸಲಿದೆ.

2 ವರ್ಷದವರೆಗೆ ಸೌಲಭ್ಯ: ‘ಯೋಜನೆಯಡಿ ಅರ್ಜಿ ಸಲ್ಲಿಸಿರುವವರು ಕೋರ್ಸ್ ಮುಗಿಸಿದ ಆರು ತಿಂಗಳ ಅವಧಿಯಿಂದ ಗರಿಷ್ಠ ಎರಡು ವರ್ಷದವರೆಗೆ ಯುವನಿಧಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಎರಡೂ ಕೋರ್ಸ್ ಮುಗಿಸಿ ತಕ್ಷಣಕ್ಕೆ ಕೆಲಸ ಸಿಗದವರು ಸೇವಾಸಿಂಧು ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋಂದಣಿ ಮಾಡಿಕೊಂಡು 6 ತಿಂಗಳಾಗುತ್ತಿದ್ದಂತೆ, ಅಭ್ಯರ್ಥಿಗಳ ವಿದ್ಯಾರ್ಹತೆ ಸೇರಿದಂತೆ ವಿವಿಧ ಅರ್ಹತೆ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆಗಳಿಂದ ಪಡೆಯಲಾಗುವುದು. ನೋಂದಣಿ ಸಂದರ್ಭದಲ್ಲಿ ಸಲ್ಲಿಸಿರುವ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಯುವನಿಧಿ ಮೊತ್ತ ಪಾವತಿಯಾಗುತ್ತದೆ’ ಎಂದು ಹೇಳಿದರು.

ಕನಕಪುರದಲ್ಲೇ ಹೆಚ್ಚು: ಜಿಲ್ಲೆಯಲ್ಲಿ ಇದುವರೆಗೆ ಯುವನಿಧಿ ಸೌಲಭ್ಯದ ಪ್ರಯೋಜನವನ್ನು 2,881 ನಿರುದ್ಯೋಗಿಗಳು ಪಡೆದಿದ್ದಾರೆ. ಈ ಪೈಕಿ, 698 ಮಂದಿ ಇರುವ ಕನಕಪುರದಲ್ಲೇ ಹೆಚ್ಚಿನ ಫಲಾನುಭವಿಗಳಿದ್ದಾರೆ. 488 ಮಂದಿ ಇರುವ ಮಾಗಡಿಯಲ್ಲಿ ಕಡಿಮೆ ಫಲಾನುಭವಿಗಳಿದ್ದಾರೆ. ಒಟ್ಟು ಫಲಾನುಭವಿಗಳ ಪೈಕಿ ಪದವಿ ನಿರುದ್ಯೋಗಿಗಳು 2,826 ಮತ್ತು ಡಿಪ್ಲೋಮಾ ನಿರುದ್ಯೋಗಿಗಳು 55 ಇದ್ದಾರೆ.

‘ಪ್ರತಿ ತಿಂಗಳು ಫಲಾನುಭವಿಗಳ ಪಟ್ಟಿಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ನೋಂದಣಿ ಮಾಡಿಕೊಂಡಿದ್ದವರು ಪ್ರತಿ ತಿಂಗಳು ತನಗೆ ಉದ್ಯೋಗ ಸಿಕ್ಕಿಲ್ಲವೆಂದು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಈ ಮಧ್ಯೆ ಉದ್ಯೋಗ ಪಡೆದಿರುವ ಕೆಲವರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ’ ಎಂದು ಗೋವಿಂದರಾಜು ಮಾಹಿತಿ ನೀಡಿದರು.

ಯೋಜನೆಯು 2022-23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮಾ ಪಾಸಾಗಿ ಆರು ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಅನ್ವಯ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರು ಮತ್ತು ಅಪ್ರೆಂಟಿಸ್‌ ಹುದ್ದೆಯಲ್ಲಿರುವವರು ಯೋಜನೆಯ ಲಾಭ ಸಿಗವುದಿಲ್ಲ. ಉದ್ಯೋಗವಿದ್ದರೂ ಯುವನಿಧಿ ಯೋಜನೆ ಲಾಭವನ್ನು ಪಡೆಯುವುದು ಗೊತ್ತಾದರೆ, ಅಂತಹ ಅಭ್ಯರ್ಥಿಗೆ ದಂಡ ವಿಧಿಸಲಾಗುತ್ತದೆ.
ಯುವನಿಧಿ ಜಾರಿಯಾದ ಬಳಿಕ ಯೋಜನೆ ಅರ್ಹರಾಗಿರುವವರು ತಪ್ಪದೆ ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತು ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲೇ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು
– ಕೆ. ರಾಜು ಜಿಲ್ಲಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಯುವನಿಧಿಗೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಪ್ರತಿ ತಿಂಗಳು 25ರೊಳಗೆ ತಾವು ನಿರುದ್ಯೋಗಿಯಾಗಿರುವ ಕುರಿತು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಭತ್ಯೆ ಸಿಗುವುದಿಲ್ಲ
– ಗೋವಿಂದರಾಜು ಉದ್ಯೋಗಾಧಿಕಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ರಾಮನಗರ
ನೋಂದಣಿ ಹೇಗೆ?
ಅಭ್ಯರ್ಥಿಗಳು https://sevasindhu.karnataka.gov.in ಸೇವಾಸಿಂಧು ಪೋರ್ಟಲ್ ಬಾಪೂಜಿ ಸೇವಾ ಕೇಂದ್ರ ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಅದಕ್ಕೆ ಯಾವುದೇ ಶುಲ್ಕವನ್ನು ಭರಿಸಬೇಕಾದ ಅಗತ್ಯವಿಲ್ಲ. ನೋಂದಣಿ ಮಾಡಿಕೊಳ್ಳುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ನೋಂದಣಿ ದಿನಾಂಕಕ್ಕೂ ಮುಂಚಿನ ತಮ್ಮ 6 ತಿಂಗಳ ಬ್ಯಾಂಕ್ ಖಾತೆಯ ವಹಿವಾಟು ಪ್ರತಿ ಸಲ್ಲಿಸಬೇಕು. ಇಲ್ಲದಿದ್ದರೆ ಅರ್ಜಿ ತಿರಸ್ಕಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT