ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ 11 ವರ್ಷದ ಗಂಡು ಸಿಂಹ ಯಶವಂತ ಶುಕ್ರವಾರ ಸಾವನ್ನಪ್ಪಿದೆ.
ಪ್ರೊಟೊಝೋವಾ (Protozova) ಸೋಂಕಿನಿಂದ ಬಳಲುತ್ತಿದ್ದ ಯಶವಂತ, ರಕ್ತದಲ್ಲಿ ಪ್ಲೆಟ್‌ಲೆಟ್ಸ್ ಕೊರೆತೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಸಿಂಹಧಾಮದ ಅಧಿಕಾರಿಗಳು ತಿಳಿಸಿದ್ದಾರೆ.
ಯಶವಂತನನ್ನು 10 ತಿಂಗಳ ಹಿಂದಷ್ಟೆ ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪಕ್ಕೆ ಕರೆತರಲಾಗಿತ್ತು. ಯಶವಂತನ ಸಾವಿನಿಂದಾಗಿ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ ಈಗ ನಾಲ್ಕಕ್ಕೇ ಇಳಿದಿದೆ.
ವಾರದಿಂದ ಅನಾರೋಗ್ಯ:‘ಚೆನ್ನಾಗಿಯೇ ಇದ್ದ ಯಶವಂತ ಕಳೆದ ಸೋಮವಾರ ಏಕಾಏಕಿ ವಾಂತಿ ಮಾಡಿಕೊಂಡಿದ್ದನು. ಆಗ ಮೃಗಾಲಯದ ವೈದ್ಯರು ಚಿಕಿತ್ಸೆ ನೀಡಿದ್ದರು. ಮೇಲ್ನೋಟಕ್ಕೆ ಆರೋಗ್ಯವಾಗಿ ಕಾಣುತ್ತಿದ್ದ ಯಶವಂತ ಗುರುವಾರದಿಂದ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದನು. ಪರೀಕ್ಷೆ ನಡೆಸಿದಾಗ ಸಿಂಹದ ರಕ್ತದಲ್ಲಿ ಪ್ರೊಟೊಝೋವಾ ಸೋಂಕಿನಿಂದ ಪ್ಲೆಟ್‌ಲೆಟ್ಸ್‌ಗಳಲ್ಲಿ ಕೊರತೆ ಉಂಟಾಗಿರುವುದು ಕಂಡು ಬಂದಿತ್ತು‘ ಎಂದು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಕುಂದ್ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯಶವಂತನ ಉಳಿಸಲು ಮೃಗಾಲಯದ ವೈದ್ಯರು ಮಾತ್ರವಲ್ಲದೇ ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ತಜ್ಞರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮರಣೋತ್ತರ ಪರೀಕ್ಷೆಯ ನಂತರ ಯಶವಂತನ ಅಂತ್ಯಕ್ರಿಯೆ ಸಿಂಹಧಾಮದಲ್ಲಿಯೇ ನಡೆಯಲಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.