ಶನಿವಾರ, ಡಿಸೆಂಬರ್ 3, 2022
21 °C
ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಸರ

ಕಟ್ಟಡ ನಿಧಿಗೆ ₹ 2 ಲಕ್ಷ: ಕುಂದಿದ ಉತ್ಸಾಹ

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಕೋರಿ ಅರ್ಜಿ ಸಲ್ಲಿಸುವವರಿಂದ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಟ್ಟಡ ನಿಧಿ ಹೆಸರಲ್ಲಿ ₹ 2 ಲಕ್ಷ ಪಡೆಯುತ್ತಿದೆ. ₹ 5,000 ಅರ್ಜಿ ಶುಲ್ಕದ ಜೊತೆ ಈ ಮೊತ್ತ ಭರಿಸಬೇಕಿದೆ.

ಟಿಕೆಟ್ ಖಾತರಿ ಆದರೂ, ಆಗದಿದ್ದರೂ ಈ ಹಣ ವಾಪಸ್ ಸಿಗುವುದಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಲು ಇಚ್ಛಿಸಿದ್ದ ಹಲವು ಆಕಾಂಕ್ಷಿಗಳ ಉತ್ಸಾಹ ಕುಂದಿಸಿದೆ.

ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 5ರಿಂದ ಆರಂಭವಾಗಿದೆ. ಮಂಗಳವಾರ (ನ.15) ಅಂತಿಮ ದಿನ.

‘ಹಿಂದಿನ ಚುನಾವಣೆಯಲ್ಲಿ ಟಿಕೆಟ್ ಸಲ್ಲಿಕೆಗೆ ₹ 25,000 ಅರ್ಜಿ ಶುಲ್ಕ ಭರಿಸಬೇಕಿತ್ತು. ಈ ಬಾರಿ ಅರ್ಜಿ ಶುಲ್ಕ ₹ 5,000ಕ್ಕೆ ಇಳಿಸಿದ್ದಾರೆ. ಆದರೆ ಕಟ್ಟಡ ನಿಧಿ ಹೆಸರಲ್ಲಿ ದುಬಾರಿ ಮೊತ್ತ ಪಡೆಯುತ್ತಿದ್ದಾರೆ. ಪಕ್ಷಕ್ಕಾಗಿ 30ರಿಂದ 40 ವರ್ಷ ದುಡಿದವರೂ ಹಣ ತೆರಬೇಕಿದೆ‘ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಅಷ್ಟೊಂದು ದುಡ್ಡು ಪಾವತಿಸಿದರೂ ಟಿಕೆಟ್ ಖಾತರಿ ಇಲ್ಲ. ಸಾಮಾನ್ಯ ಕಾರ್ಯಕರ್ತರು ಎಲ್ಲಿಂದ ಹಣ ತರುವುದು. ಧನಬಲ ಇದ್ದವರಿಗಷ್ಟೇ ಚುನಾವಣೆ ಎಂಬುದು ಪರೋಕ್ಷವಾಗಿ ಬಿಂಬಿತವಾಗಿದೆ ಎಂದು ಹೇಳುತ್ತಾರೆ ಅವರು.

ಪಕ್ಷದ ಟಿಕೆಟ್‌ಗಾಗಿ ನೂಕು ನುಗ್ಗಲು ತಪ್ಪಿಸಲು, ಸಿಕ್ಕ ಸಿಕ್ಕವರೆಲ್ಲ ಅರ್ಜಿ ಹಾಕುವುದನ್ನು ತಪ್ಪಿಸಲು ಕಟ್ಟಡ ನಿಧಿ ಹೆಸರಲ್ಲಿ ಶುಲ್ಕ ಪಡೆಯಲಾಗುತ್ತಿದೆ ಎಂಬುದು ಪಕ್ಷದ ಮೂಲಗಳ ಹೇಳಿಕೆ.

ಜಿಲ್ಲೆಯಿಂದ ₹ 56 ಲಕ್ಷ ಸಂಗ್ರಹ

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಉಮೇದುವಾರಿಕೆ ಕೋರಿ ನ.14ರವರೆಗೆ 26 ಜನ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಕೆಪಿಸಿಸಿ ಕಟ್ಟಡ ನಿಧಿಗೆ ₹ 56 ಲಕ್ಷ ಸಂಗ್ರಹವಾಗಿದೆ.

ಅದರಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಆರು ಮಂದಿ, ಶಿವಮೊಗ್ಗ ಗ್ರಾಮೀಣ ಒಂಬತ್ತು, ಸೊರಬ, ಭದ್ರಾವತಿ ತಲಾ ಒಂದು, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ತಾಲ್ಲೂಕಿನಿಂದ ತಲಾ ಮೂವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆಯಾಗಲಿದೆ ಎಂದು ಸುಂದರೇಶ ಹೇಳುತ್ತಾರೆ.

ಅಧಿಕೃತ ಅಭ್ಯರ್ಥಿಗೆ ಸಮಸ್ಯೆ?

‘ಇದು ನಾಳೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸಮಸ್ಯೆ ಆಗಲಿದೆ. ಅರ್ಜಿ ಸಲ್ಲಿಸುವಾಗ ನಾವು ಕಟ್ಟಿದ್ದ ಹಣ ವಾಪಸ್ ಕೊಡುವಂತೆ ಉಳಿದವರು ಬೇಡಿಕೆ ಇಡಲಿದ್ದಾರೆ. ಇಲ್ಲದಿದ್ದರೆ ಬಂಡಾಯ ಇಲ್ಲವೇ ಪಕ್ಷ ಬಿಡುವ ಬೆದರಿಕೆ ಒಡ್ಡಲಿದ್ದಾರೆ. ಆಗ ಅವರು ಜೇಬಿನಿಂದ ಕೊಡಬೇಕಾಗುತ್ತದೆ. ಇದು ಚುನಾವಣೆಗೆ ಮುನ್ನವೇ ಅಧಿಕೃತ ಅಭ್ಯರ್ಥಿಗೆ ಹೊರೆಯಾಗಿ ಪರಿಣಮಿಸಲಿದೆ’ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

 

ಕಟ್ಟಡ ನಿಧಿ ಸಂಗ್ರಹ ಪಕ್ಷದ ತೀರ್ಮಾನ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿ ಆಧುನೀಕರಿಸಲು ಆ ಹಣ ಬಳಕೆ ಮಾಡಲಾಗುತ್ತಿದೆ. ಕಟ್ಟಡ ನಿಧಿ ಮೊತ್ತ ಹೆಚ್ಚಾದರೂ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಆಗಿಲ್ಲ.
–ಎಚ್‌.ಎಸ್‌.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು