ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: ಐಟಿ, ಬಿಟಿಯಿಂದ ಶೇ 60ರಷ್ಟು ಆದಾಯ

ತೀರ್ಥಹಳ್ಳಿಯಲ್ಲಿ ಕುವೆಂಪು ಪುತ್ಥಳಿ ಅನಾವರಣ; ಡಾ.ಸಿ.ಎನ್. ಅಶ್ವತ್ಥನಾರಾಯಣ ಅಭಿಮತ
Last Updated 12 ಫೆಬ್ರುವರಿ 2023, 5:46 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಶೇ 60ರಷ್ಟು ಆದಾಯ ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಿಂದ ಬರುತ್ತಿದೆ. ವಾರ್ಷಿಕ ₹ 20 ಲಕ್ಷ ಕೋಟಿ ವಹಿವಾಟಿನಲ್ಲಿ ಸಿಂಹಪಾಲು ನಮ್ಮದಾಗಿದೆ. ಇಡೀ ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದ ಸುಧಾರಣೆಗೆ ಪೂರಕವಾದ ಕೊಡುಗೆ ಕರ್ನಾಟಕ ಕೊಡುತ್ತಿದೆ’ ಎಂದು ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಪಟ್ಟಣದ ಬೆಟ್ಟಮಕ್ಕಿ ಸಹ್ಯಾದ್ರಿ ಕೇಂದ್ರೀಯ ಶಾಲಾ ಅವರಣದಲ್ಲಿ ಕುವೆಂಪು ಪುತ್ಥಳಿ ಅನಾವರಣಗೊಳಿಸಿ, ತುಡ್ಕಿ ಸಮೀಪದ ನೂತನ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ನಡೆದ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಡೀ ದೇಶದ ಭವಿಷ್ಯದ ಸುಧಾರಣೆಗೆ ಕರ್ನಾಟಕ ತನ್ನದೇ ಕೊಡುಗೆ ನೀಡುತ್ತಿದೆ. ತಂತ್ರಜ್ಞಾನ ಕ್ಷೇತ್ರದ ಎಲ್ಲ ಕೊಡುಗೆ ನಾವು ಕೊಡುತ್ತಿದ್ದೇವೆ. ಹೀಗಾಗಿ ಉದ್ಯೋಗಾವಕಾಶಕ್ಕೆ ಯಾವುದೇ ಕೊರತೆ ರಾಜ್ಯದಲ್ಲಿ ಇಲ್ಲ. ನಮ್ಮ ಪ್ರಯತ್ನಗಳು ಆ ದಿಕ್ಕಿನಲ್ಲಿ ಇರಬೇಕು. ಇಡೀ ವಿಶ್ವದಲ್ಲಿಯೇ ಒಂದು ಭರವಸೆದಾಯಕ, ಉತ್ತಮ ಅವಕಾಶದ ನಾಡು ಇದ್ದರೆ ಅದು ಕರ್ನಾಟಕ ಮಾತ್ರ. ಅವಕಾಶಗಳನ್ನು ಬಳಕೆ ಮಾಡಿಕೊಳ್ಳುವತ್ತ ನವೋದ್ಯಮಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಮನವರಿಕೆ, ತಿಳಿವಳಿಕೆ ನೀಡುವ ಕೆಲಸ ನಾವು ಮಾಡುತ್ತಿದ್ದೇವೆ’ ಎಂದರು.

ರಾಜ್ಯದಲ್ಲಿ ಶಾಲಾ ಹಂತದಿಂದಲೇ ಕೆರಿಯರ್ ಕೌನ್ಸೆಲಿಂಗ್‌ಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳಿಗೆ ಭವಿಷ್ಯದ ಉದ್ಯೋಗಾವಕಾಶಗಳ ಬಗ್ಗೆ ಜಾಗೃತಿ ಹಾಗೂ ಮನವರಿಕೆ ಮಾಡಲು ಪರಿಣಾಮಕಾರಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಗೃಹಸಚಿವ ಆರಗ ಜ್ಞಾನೇಂದ್ರ, ‘ಜಲಾಶಯಗಳಿಗೆ ಭೂಮಿ ದಾನ ಮಾಡಿದ ಮಲೆನಾಡಿಗರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಸಾಂಪ್ರದಾಯಿಕ ಪ್ರದೇಶದಲ್ಲಿ ಅಡಿಕೆ ಬೆಳೆ ವಿಸ್ತರಣೆ ಸಲ್ಲ. ನೀರಾವರಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ಅಡಿಕೆ ಬೆಳೆ, ಸಂಸ್ಕರಣಾ ವಿಧಾನ ದೋಷದಿಂದ ಕೂಡಿದೆ’ ಎಂದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಚಿಂತನಶೀಲ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕು. ಕ್ರೀಡೆ, ಸಾಂಸ್ಕೃತಿಕ, ಪರಿಸರದ ಸೂಕ್ಷ್ಮತೆ ಪಠ್ಯ ಒಳಗೊಳ್ಳಬೇಕು. ಕೇವಲ ಅಕ್ಷರಾಭ್ಯಾಸ ಶೈಕ್ಷಣಿಕ ಮಾನದಂಡ ಆಗಲಾರದು ಎಂದರು.

ದಾನ, ಧರ್ಮ ಬದುಕಿಗೆ ಅರ್ಥ ಕಲ್ಪಿಸುತ್ತದೆ. ಅದೃಷ್ಟದ ಅಧಿಕಾರ ಅಹಂಕಾರಕ್ಕೆ ಕಾರಣವಾಗಿದೆ. ಬುದ್ಧಿಶಕ್ತಿ, ಉತ್ತಮ ಜ್ಞಾನದಿಂದ ಲಭಿಸಿದ ಹುದ್ದೆಗಳು ಸಂತಸ ನೀಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಶ್ರೀಗಳು, ಒಳ್ಳೆಯ ಕೆಲಸ ಮಾಡುವಾಗ ಸಾಕಷ್ಟು ಸಮಸ್ಯೆ ಇರುತ್ತದೆ. ಎದುರಿಸಿದರೆ ಸಾಧನೆಯ ಶಿಖರ ಏರಬಹುದು. ನೂತನ ಕಟ್ಟಡ ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದರು.

ಅಧ್ಯಕ್ಷತೆಯನ್ನು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ವಹಿಸಿದ್ದರು. ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಪ್ರಮುಖರಾದ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಸುಶೀಲ ಶೆಟ್ಟಿ, ಕಡಿದಾಳು ದಿವಾಕರ್, ಆರ್.ಎಂ. ಮಂಜುನಾಥ ಗೌಡ, ಆರ್ ಮದನ್, ಜಯರಾಮ್ ಜಿ. ಕಿಮ್ಮನೆ, ಸಿರಿಬೈಲು ಧರ್ಮೇಶ್, ಹೆಚ್.ಬಿ. ಆದಿಮೂರ್ತಿ, ಅಚ್ಚುತ್ ಗೌಡ, ಕಡ್ತೂರು ಶ್ರೀನಿವಾಸ್ ಇದ್ದರು.

ಹಾಸ್ಟೆಲ್‌ಗೆ ₹ 25 ಲಕ್ಷ ದೇಣಿಗೆ ಘೋಷಣೆ

ತೀರ್ಥಹಳ್ಳಿಯಲ್ಲಿ ಒಕ್ಕಲಿಗರ ಸಮುದಾಯದ ಬಾಲಕಿಯರ ಹಾಸ್ಟೆಲ್‌ಗೆ ವೈಯಕ್ತಿಕವಾಗಿ ₹ 25 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಕೌಶಲಕ್ಕೆ ಅಗತ್ಯವಿರುವ ಅವಕಾಶ ನಾವು ಕಲ್ಪಿಸಿಕೊಡುತ್ತೇವೆ. ಯುವಜನರು ಮುಂದೆಬಂದು ಅದನ್ನು ಸದು‍ಪಯೋಗಪಡಿಸಿಕೊಳ್ಳಲಿ’ ಎಂದು ಸಲಹೆ ನೀಡಿದರು.

ಕಾನು, ಸೊಪ್ಪಿನ ಬೆಟ್ಟ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ: ‘ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಮಲೆನಾಡು ಭಾಗದಲ್ಲಿ ಕಾನು ಹಾಗೂ ಸೊಪ್ಪಿನ ಬೆಟ್ಟಗಳ ಸಾಗುವಳಿ ಭೂಮಿಯನ್ನು ಫಲಾನುಭವಿಗಳಿಗೆ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಈ ವಿಚಾರ ಕೈಗೆತ್ತಿಕೊಂಡು ದಶಕಗಳಿಂದ ಸಾಗುವಳಿದಾರರು ಅನುಭವಿಸುತ್ತಿರುವ ಸಮಸ್ಯೆಗೆ ಇನ್ನೊಂದು ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಡಾ.ಅಶ್ವತ್ಥನಾರಾಯಣ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT