ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ದಿನದ ಶಿವಮೊಗ್ಗ ದಸರಾಗೆ ಅದ್ದೂರಿ ತೆರೆ

ಆನೆ ಬದಲಾಗಿ ಲಾರಿಯಲ್ಲಿ ಅಂಬಾರಿ ಮೆರವಣಿಗೆ, ದಸರಾ ವೈಭವ ಮೆರೆದ ವಿವಿಧ ಕಲಾ ತಂಡಗಳು
Last Updated 16 ಅಕ್ಟೋಬರ್ 2021, 4:42 IST
ಅಕ್ಷರ ಗಾತ್ರ

ಶಿವಮೊಗ್ಗ: ಮೈಸೂರು ಮಾದರಿಯಲ್ಲಿ 9 ದಿನಗಳ ಕಾಲ ನಡೆದ ಶಿವಮೊಗ್ಗ ದಸರಾ ಶುಕ್ರವಾರ ಯಶಸ್ವಿ ತೆರೆ ಕಂಡಿತು.

‘ಶಿವಮೊಗ್ಗ ದಸರಾ’ಗೆ ಶುಕ್ರವಾರ ನಗರದ ಫ್ರೀಡಂ ಪಾರ್ಕ್(ಹಳೇ ಜೈಲು ಆವರಣ)ನಲ್ಲಿ ತಹಶೀಲ್ದಾರ್ ನಾಗರಾಜ್ ಅಂಬು ಕಡಿಯುವ ಮೂಲಕ ಸಮಾರೋಪಗೊಳಿಸಿದರು. ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಜನರು ಶುಭಾಶಯ ವಿನಿಮಯ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ಮಹಾನಗರದ ‍ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್‌ಗನ್ನಿ, ಆಯುಕ್ತ ಚಿದಾನಂದ್ ವಟಾರೆ, ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಹಾಗೂ ಸದಸ್ಯರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಅಂಬು ಕಡಿಯುತ್ತಿದ್ದಂತೆ ಫ್ರೀಡಂ ಪಾರ್ಕ್‌ನಲ್ಲಿ ಸ್ಥಾಪಿಸಿದ್ದ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಬಾಣ ಬಿರುಸುಗಳ ಸೊಬಗು ಮುಗಿಲೆತ್ತರದಲ್ಲಿ ಕಣ್ಮನ ಸೆಳೆಯಿತು. ದೊಡ್ಡ ಸಂಖ್ಯೆಯಲ್ಲಿ ಜನರು ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಫ್ರೀಡಂ ಪಾರ್ಕ್‌ ಬಳಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಮುಂಡೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು. ಸಕ್ರೆಬೈಲು ಆನೆ ಬಿಡಾರದ ಸಾಗರ, ಭಾನುಮತಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದವು.

ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಕೋಟೆ ರಸ್ತೆ, ಎಸ್‌ಪಿಎಂ ರಸ್ತೆ, ಗಾಂಧಿಬಜಾರ್ ಮುಖ್ಯರಸ್ತೆ, ಅಮೀರ್ ಅಹಮದ್‌ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ ರಸ್ತೆ, ಕುವೆಂಪು ರಸ್ತೆ ಮಾರ್ಗವಾಗಿ ಹಳೇ ಜೈಲು ಆವರಣದಲ್ಲಿ ಸಮಾರೋಪಗೊಂಡಿತು.

ಬನ್ನಿ ಮುಡಿಯುವ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರದಲ್ಲಿ ಗುಡುಗು ಸಹಿತ ಜೋರು ಮಳೆ ಸುರಿಯಿತು. ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಮಳೆಯಲ್ಲಿ ನೆನೆದು ಮನೆ ಸೇರುವಂತಾಯಿತು.

ಮುಜರಾಯಿ ಇಲಾಖೆ ದೇವರು ಹಾಜರು: ಪ್ರತಿ ವರ್ಷದ ವಿಷಯ ದಶಮಿ ದಿನದಂದು ನಗರದ 150 ದೇವತೆಗಳು ಅದ್ದೂರಿ ಮೆರವಣಿಗೆಯ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಬರುತ್ತಿದ್ದವು.
ಆದರೆ, ಕಳೆದ ಬಾರಿ ಕೊರೊನಾ ಕಾರಣದಿಂದ ಜನರಿಗಷ್ಟೇ ಅಲ್ಲ ದೇವರಿಗೂ ಬನ್ನಿ ಮುಡಿಯುವ ಸ್ಥಳಕ್ಕೆ ಪ್ರವೇಶ ಇರಲಿಲ್ಲ. ಈ ಬಾರಿಯೂ ಮುಜರಾಯಿ ಇಲಾಖೆ ದೇವರ ಜೊತೆಗೆ ಪ್ರಮುಖ ದೇವರು ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಸರಾ ವೈಭವವನ್ನು ಮೆರೆದರು.

ವೈಭವದ ಹೆಚ್ಚಿಸಿದ ಸಾಂಸ್ಕೃತಿಕ ಕಲಾ ತಂಡ: 9 ದಿನ ಕಾಲ ನಡೆದ ದಸರಾ ವೈಭವದ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಂಡಿದ್ದವು. ವಿವಿಧ ವೇಷಭೂಷಣದಲ್ಲಿ ಕಂಗೊಳಿಸಿದ ಕಲಾ ತಂಡದ ಸದಸ್ಯರ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸಿದೆ. ಹದ್ದು, ನವೀಲು ವೇಷ, ವೀರಗಾಸೆ, ಯಕ್ಷಗಾನ, ಚಂಡೆ ವಾದನ ನೋಡುಗರ ಗಮನ ಸೆಳೆಯಿತು.

ಗಜಪಡೆಯೊಂದಿಗೆ ಸೆಲ್ಫಿ!

ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆಯಾದ ಸಕ್ರೆಬೈಲಿನ ಗಜಪಡೆ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದರು. ಮಕ್ಕಳು ಆನೆಗಳನ್ನು ಮುಟ್ಟಿ ಖುಷಿಪಟ್ಟಿರು. ದಸರಾ ಮೆರವಣಿಗೆ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ಅಲಂಕಾರ ಮಾಡಲಾಯಿತು. ಬಣ್ಣದ ಚಿತ್ತಾರಗಳಿಂದ ಸಕ್ರೆಬೈಲಿನ ಸಾಗರ, ಭಾನುಮತಿ ಆನೆಗಳು ಎಲ್ಲ ಕಣ್ಮನ ಸೆಳೆಯಿತು.

ಲಾರಿ ಮೇಲೆ ಅಂಬಾರಿ

ಸರ್ಕಾರದ ಸೂಚನೆಯಂತೆ ಈ ಬಾರಿ ಗಜಪಡೆ ಬದಲಾಗಿ ಲಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ನಡೆಸಲಾಯಿತು.

ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಗೆ ಹೂವು ಹಾಕಿ ನಮನ ಸಲ್ಲಿಸಲಾಯಿತು. ಸಕ್ರೆಬೈಲು ಬಿಡಾರದಿಂದ ಬಂದಿರುವ ಸಾಗರ ಮತ್ತು ಭಾನುಮತಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಜನರನ್ನು ರಂಜಿಸಿದ ಸಂಗೀತ ಸಂಜೆ

ಶಿವಮೊಗ್ಗ ದಸರಾ ಅಂಗವಾಗಿ ಗುರುವಾರ ಫ್ರೀಡಂ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯ ದಸರಾ ಸಮಾರಂಭದಲ್ಲಿ ಇಷ್ಟೊಂದು ಪ್ರಮಾಣದ ಜನರು ಸೇರಿದ್ದು ಇದೇ ಮೊದಲು.

ಸಂಗೀತ ಸಂಜೆ ಕಾರ್ಯಕ್ರಮಕ್ಕೆ ನಟ ಪ್ರಮೋದ್ ಶೆಟ್ಟಿ ಚಾಲನೆ ನೀಡಿದರು. ಸಿನಿಮಾ ಡೈಲಾಗ್, ಡಾನ್ಸ್ ಹೇಳಿ ನೆರೆದಿದ್ದವರನ್ನು ರಂಜಿಸಿದರು. ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ಸಂಗಡಿಗರಿಂದ ಸಂಗೀತ ಸಂಜೆ ಕಾರ್ಯಕ್ರಮ ಜನರ ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT