ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರಬ: ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಕಂಡ ಹಳ್ಳಿ ಹುಡುಗ

Published 20 ಮೇ 2024, 7:33 IST
Last Updated 20 ಮೇ 2024, 7:33 IST
ಅಕ್ಷರ ಗಾತ್ರ

ಸೊರಬ: ಜೀವನ ನಿರ್ವಹಣೆಗಾಗಿ ಸ್ವಯಂ ಉದ್ಯೋಗ ಕೈಗೊಳ್ಳುವ ಅದೆಷ್ಟೋ ಜನರಂತೆ ತಾಲ್ಲೂಕಿನ ಗಡಿ ಭಾಗದ ರಾಮಗೊಂಡನಕೊಪ್ಪ ಗ್ರಾಮದ ಯುವಕ ಗಣೇಶ, ಬಡತನವನ್ನು ಸವಾಲಾಗಿ ಸ್ವೀಕರಿಸಿ ಉಪ್ಪಿನಕಾಯಿ ಉದ್ಯಮದಲ್ಲಿ ಯಶಸ್ಸು ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಆರಂಭದಲ್ಲಿ ಉದ್ಯೋಗಕ್ಕಾಗಿ ಅಲೆದಾಡಿದ ಕೃಷಿ ಕುಟುಂಬದ ಇವರು, ಉಪ್ಪಿನಕಾಯಿ ಉತ್ಪಾದನಾ ಘಟಕವೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿ, ಕಾರ್ಮಿಕರ ಶ್ರಮ ಮತ್ತು ಉದ್ಯಮದ ಪ್ರಗತಿಯನ್ನು ಮನಗಂಡು, 2006ರಲ್ಲಿ ಪಟ್ಟಣದಲ್ಲಿ ಕಟ್ಟಡ ಬಾಡಿಗೆ ಪಡೆದು ಸಣ್ಣದಾಗಿ ಉಪ್ಪಿನಕಾಯಿ ಉದ್ಯಮ ಸ್ಥಾಪಿಸಿದರು. ನಂತರ ಆರ್ಥಿಕವಾಗಿ ಚೇತರಿಕೆ ಕಂಡು ಪಟ್ಟಣದ ಹೊರ ವಲಯದಲ್ಲಿ 1 ಎಕರೆ ಜಮೀನು ಖರೀದಿಸಿ ‘ಓಂ’ ಪಿಕಲ್ ಹೆಸರಿನಲ್ಲಿ ಉದ್ಯಮ ಆರಂಭಿಸಿದ್ದಾರೆ.

ಜೊತೆಗೆ ಜೋನಿ‌ ಬೆಲ್ಲದ ಘಟಕ ತೆರೆದು ಬಹು ಉದ್ಯಮಿಯಾಗಿ ಬೆಳೆದಿರುವುದು ವಿಶೇಷ. ಮಾವಿನಕಾಯಿ, ಅಪ್ಪೆ ಮಿಡಿ, ನಿಂಬೆಕಾಯಿ, ಕವಳೆಕಾಯಿ, ಶುಂಠಿ, ಹಸಿಮೆಣಸು, ಅರಳೆಕಾಯಿ, ಗೋಣಿಕಾಯಿ ಸೇರಿ ಹತ್ತಾರು ಬಗೆಯ ಉಪ್ಪಿನಕಾಯಿಗಳು ಹಾಗೂ ಮಸಾಲೆ ಪದಾರ್ಥಗಳು ಹಾಗೂ ಜೋನಿ ಬೆಲ್ಲವನ್ನು ತಯಾರಿಸಲಾಗುತ್ತಿದೆ. ಪ್ರತಿ ದಿನ 35ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ.

‘ಉಪ್ಪಿನಕಾಯಿ ಉದ್ಯಮದಲ್ಲಿ ತೊಡಗಿ ಎಲ್ಲರೂ ಸೈ ಎನಿಸಿಕೊಳ್ಳಲು ಸಾಧ್ಯವಿಲ್ಲ. ಈ ಉದ್ಯಮ ಆರಂಭಿಸುವುದು ಬೇಡ ಎನ್ನುವ ಸಲಹೆಯನ್ನು ಸಂಬಂಧಿಕರು, ಸ್ನೇಹಿತರು ನೀಡಿದ್ದರು. ಯಾವುದೇ ಕೆಲಸದಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ಅಚಲ ಗುರಿ ಇದ್ದರೆ ಯಶಸ್ಸು ಕಾಣಬಹುದು’ ಎಂದು ಅವರು ಹೇಳುತ್ತಾರೆ.

‘ಪ್ರಾರಂಭದಲ್ಲಿ ವರ್ಷಕ್ಕೆ 50ರಿಂದ 100 ಕೆ.ಜಿ. ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದೆ. ಇದೀಗ ವರ್ಷಕ್ಕೆ 700 ಕ್ವಿಂಟಲ್‌ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಮೊದಲು ಬೆರಳೆಣಿಕೆಯಷ್ಟು ಜನರ ಸಹಕಾರ ಪಡೆದು ಉಪ್ಪಿನಕಾಯಿ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗುತ್ತಿದ್ದರು. ಈಗ‌ 40 ಕುಟುಂಬಗಳು ನೇರವಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.

ಮಾರಾಟ ವಿಭಾಗದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳ ಜೀವನ ಸಾಗುತ್ತಿದೆ. ಈ ಉದ್ಯಮವು ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಕೆಲಸ ಬಯಸಿ ಬಂದವರಿಗೆ ವಾಪಸ್‌ ಕಳುಹಿಸಿದ ಉದಾಹರಣೆ ಇಲ್ಲ. ಅಂತೆಯೇ ಬಡ ನಿರುದ್ಯೋಗಿಗಳಿಗೆ ಇವರ ಉದ್ಯಮ ಜೀವನಾಧಾರವಾಗಿದೆ.

ಗಣೇಶ
ಗಣೇಶ
ಸಾಧನೆಗೆ ಬಡತನ ಮುಖ್ಯವಲ್ಲ. ಇದರಿಂದ ಹತ್ತಾರು ಜನರಿಗೆ ಉದ್ಯೋಗ ನೀಡಿದ ತೃಪ್ತಿ ನನಗಿದೆ. ಉದ್ಯಮದಲ್ಲಿ ಅಧಿಕ ಲಾಭ ನಿರೀಕ್ಷೆಗಿಂತ ವಸ್ತುಗಳ ಗುಣಮಟ್ಟ ಕಾಯ್ದುಕೊಳ್ಳವುದು ಮುಖ್ಯ.
ಗಣೇಶ ಓಂ ಪಿಕಲ್ ಮಾಲೀಕ
ಮಾವಿನಕಾಯಿ ಉಪ್ಪಿನಕಾಯಿಗೆ ಬೇಡಿಕೆ ಹೆಚ್ಚು
ಉಪ್ಪಿನಕಾಯಿಗೆ ಬೇಡಿಕೆ ಹೆಚ್ಚಾಗಿದ್ದು ಸ್ಥಳೀಯವಾಗಿ ರೈತರಿಂದ ದೊರೆಯುವ ಮಾವಿನಕಾಯಿ ಕವಳೆಕಾಯಿ ಗೋಣಿಕಾಯಿ ನಿಂಬೆಹಣ್ಣು ಖರೀದಿಸುವ ಜೊತೆಗೆ ತಮಿಳುನಾಡು ಆಂಧ್ರಪ್ರದೇಶ ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯಿಂದ ಮಾವಿನಕಾಯಿ ಖರೀದಿಸಲಾಗುತ್ತಿದೆ. ವರ್ಷ ಮೊದಲೇ ಏಜೆನ್ಸಿಗಳು ಉಪ್ಪಿನಕಾಯಿ ಉತ್ಪಾದನೆಗೆ ಬೇಡಿಕೆ ಇಡುತ್ತಾರೆ. ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಇರಿಸಿ ಉತ್ಪಾದನೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ ಅಡಿಕೆ ತೋಟ ವಿಸ್ತರಿಸಲು ರೈತರು ಆಸಕ್ತಿ ತೋರಿಸುತ್ತಿರುವುದರಿಂದ ಮಾವಿನ ಮರಗಳನ್ನು ಕಟಾವು ಮಾಡಲಾಗಿದೆ. ಇದರಿಂದ ಮಾವಿನ ಕೊರತೆ ಎದುರಾಗಿದೆ‌. ಎಲ್ಲ ಉಪ್ಪಿನಕಾಯಿಗಿಂತ ಮಾವಿನಕಾಯಿಗೆ ಬೇಡಿಕೆ ಇರುವುದರಿಂದ ಮಾವಿನ ಕಾಯಿಗಳ ಬೆಲೆ ಅಧಿಕವಾಗಿದೆ. ಮೈಸೂರು ಮಂಡ್ಯ ಬೆಂಗಳೂರು ಹಾಗೂ ಮಂಗಳೂರಿಗೆ ಉಪ್ಪಿನಕಾಯಿ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು ಗಣೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT