ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಗ ಜ್ಞಾನೇಂದ್ರ ಕುರುಡ: ಈಶ್ವರಪ್ಪ

Published 20 ಏಪ್ರಿಲ್ 2024, 16:26 IST
Last Updated 20 ಏಪ್ರಿಲ್ 2024, 16:26 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ʻಜಿಲ್ಲೆಯಲ್ಲಿ ಶೇ 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಹಿಂದುತ್ವಕ್ಕೆ ಜಯವಾಗಲಿ ಎಂಬ ಕಾರ್ಯಕರ್ತರ ಸಾಲು ಬೂತ್‌ ಮಟ್ಟದಲ್ಲಿದೆ. ಅದನ್ನು ನೋಡಲಾಗದ ಆರಗ ಜ್ಞಾನೇಂದ್ರ ಕುರುಡ. ಆತನಿಗೆ ಕಿವುಡು’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಕುಟುಕಿದರು.

ಇಲ್ಲಿನ ಚುನಾವಣಾ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಶ್ವರಪ್ಪಗೆ ಚೀಟಿ ಹಂಚುವುದಕ್ಕೆ ಜನ ಇರುವುದಿಲ್ಲ ಎಂದು ಜ್ಞಾನೇಂದ್ರ ಹೇಳಿದ್ದ. ಕ್ಷೇತ್ರ ಬಿಟ್ಟು ಅವನಿಗೆ ಬೇರೇನೂ ಗೊತ್ತಿಲ್ಲ. ಗೃಹಮಂತ್ರಿ ಆದಾಗಲೂ ರಾಜ್ಯ ಸುತ್ತುವ ಬದಲು ಕೂಪ ಮಂಡೂಕದ ರೀತಿಯಲ್ಲಿ ತೀರ್ಥಹಳ್ಳಿ ಸುತ್ತಿದ್ದ’ ಎಂದು ಛೇಡಿಸಿದರು. 

‘ನಮ್ಮ ಕಾರ್ಯಕರ್ತರ ಮನೆಗಳಿಗೆ ಹೋಗದ ಆರಗ ಜ್ಞಾನೇಂದ್ರ ಈಗ ಅರ್ಧ ಗಂಟೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಭಯ ಎದುರಾಗಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತಲೆಕೆಟ್ಟು ಹುಚ್ಚು ಹಿಡಿದಿದೆ. ರಾಘವೇಂದ್ರಗೆ ಸೋಲಿನ ಆತಂಕ ಎದುರಾಗಿದೆ’  ಎಂದರು.

‘ಶಿವಮೊಗ್ಗ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆ ಬಗೆಹರಿಸಲು ಯಾರಿಗೂ ಸಾಧ್ಯವಾಗಿಲ್ಲ. ಹಾಗಂತ ನಾನು ಸುಮ್ಮ ಸುಮ್ಮನೆ ಮಾಡುತ್ತೇನೆ ಎಂದು ಹೇಳಲ್ಲಾ. ಲೋಕಸಭಾ ಚುನಾವಣೆ ಮುಂಚಿತವಾಗಿ ಭದ್ರಾವತಿಯ ವಿಎಸ್‌ಎಲ್‌ ಕಾರ್ಖಾನೆ ಲೋಕಸಭಾ ಮುಂಚಿತವಾಗಿ ಆರಂಭಿಸುತ್ತೇನೆ ಎಂಬ ಭರವಸೆ ರಾಘವೇಂದ್ರ ನೀಡಿದ್ದರು ಅಂದ ಮಾತ್ರಕ್ಕೆ ಆರಂಭ ಆಯ್ತಾ’ ಎಂದು ಪ್ರಶ್ನಿಸಿದರು.

‘ರಾಜಕಾರಣಿಗಳು ಸತ್ತ ಮೇಲೆಯೇ ರಾಜಕಾರಣ ಬಿಡುವುದು. ಆರಗ ಜ್ಞಾನೇಂದ್ರ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದು ಸುಳ್ಳು. ಮುಂದಿನ ಚುನಾವಣೆಯನ್ನು ನಾನೇ ನಿಂತು ಗೆಲ್ಲಿಸಿಕೊಂಡು ಬರಬೇಕಾಗುತ್ತದೆ. ಇವರು ಕಾರ್ಯಕರ್ತರಿಗೆ ಬೈದರೆ ಅವನ ಚುನಾವಣೆಯಲ್ಲಿ ಕಾಲಿಗೆ ಬೀಳುವ ಪರಿಸ್ಥಿತಿ ಉದ್ಭವವಾಗುತ್ತದೆ’ ಎಂದರು.

ಮಹೇಶ್‌ ಮೇಲಿನಕೊಪ್ಪ, ಗೊರಕೋಡು ಮದನ್‌, ಸುವರ್ಣ ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT