ಶಿಕಾರಿಪುರ: ‘ಒಳಮೀಸಲಾತಿ ಜಾರಿಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಲ್ಲಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಪೊಲೀಸರ ಮೇಲೆ ದಾಳಿ ನಡೆಸಿದ್ದು ನೋವು ತಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಪಟ್ಟಣಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ಸಂಸದ ರಾಘವೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜತೆ ಚರ್ಚೆ ನಡೆಸಿ ಅವರು ಮಾತನಾಡಿದರು.
‘ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು ದುರದೃಷ್ಟಕರ. ಯಾರೋ ಕೆಲವರ ಪ್ರಚೋದನೆಗೆ ಒಳಗಾಗಿ ಈ ಘಟನೆ ನಡೆದಿದೆ. ಯಡಿಯೂರಪ್ಪ ಅವರು ಬಂಜಾರ ಸಮಾಜದ ಬಗ್ಗೆ ಒಲವು ಹೊಂದಿದ್ದಾರೆ. ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಎಲ್ಲರಿಗೂ ಜನಾಂಗದ ಮೇಲೆ ಗೌರವ ಬರುವಂತೆ ಮಾಡಿದ್ದಾರೆ. ಮೀಸಲಾತಿ ವಿಚಾರವಾಗಿ ಚರ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಮುಖ್ಯಮಂತ್ರಿ ಅವರೂ ಈ ವಿಚಾರದಲ್ಲಿ ಮುಕ್ತವಾಗಿ ಇದ್ದಾರೆ. ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಬಹುದು. ಆದರೆ, ಯಾರೂ ಕಾನೂನನ್ನು ಕೈಗೆ ಎತ್ತಿಕೊಳ್ಳಬಾರದು’ ಎಂದು ಮನವಿ ಮಾಡಿದರು.
‘ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಿದ ಘಟನೆಯಲ್ಲಿ ಪೊಲೀಸರ ವೈಫಲ್ಯ ಇಲ್ಲ. ಪ್ರತಿಭಟನೆಯಲ್ಲಿ ಪರಿಶಿಷ್ಟ ಜನಾಂಗ
ದವರು ಭಾಗವಹಿಸಿದ್ದರಿಂದ ಏಕಾಏಕಿ ಲಾಠಿ ಪ್ರಹಾರ ಮಾಡುವುದು ಸರಿಯಲ್ಲ. ಹೆದರಿಸಿ
ದರೆ ಹೋಗುತ್ತಾರೆ ಎಂದು ಪೊಲೀಸರು ತಾಳ್ಮೆ ವಹಿಸಿದ್ದಾರೆ. ಆದರೆ, ರೌಡಿ ಲೀಸ್ಟ್‌ನಲ್ಲಿ ಇದ್ದವರು ಈ ಪ್ರತಿಭಟನೆಯ ದುರುಪಯೋಗ ಮಾಡಿಕೊಂಡಿದ್ದಾರೆ. ಕೆಲವರು ದೊಂಬಿ ಎಬ್ಬಿಸಿ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪೆಟ್ಟು ತಿಂದರೂ ನೋವನ್ನು ನುಂಗಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಶ್ಲಾಘಿಸಿದರು.
ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮುಖಂಡರಾದ ಭದ್ರಾಪುರ ಹಾಲಪ್ಪ, ಎಂ.ಬಿ. ಚನ್ನವೀರಪ್ಪ, ಚುರ್ಚಿಗುಂಡಿ ರುದ್ರಮುನಿ, ವೀರೇಂದ್ರ ಪಾಟೀಲ್, ಗಿರೀಶ್ ಧಾರಾವಾಡ ಇದ್ದರು.
ಪೊಲೀಸ್ ಬಿಗಿ ಬಂದೋಬಸ್ತ್
ಕಲ್ಲು ತೂರಾಟದಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸ ಹಾಗೂ ಬಿಜೆಪಿ ಕಚೇರಿ ಆವರಣದಲ್ಲಿ ಶಾಂತಿ ನೆಲಸಿದೆ. ಯಡಿಯೂರಪ್ಪ ಅವರ ನಿವಾಸದ ಸುತ್ತ ಹಾಗೂ ಪಟ್ಟಣದಲ್ಲಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಗ್ರಾಮೀಣ ಭಾಗ ಸೇರಿ ಪಟ್ಟಣದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದ ದೃಶ್ಯ ಕಂಡು ಬಂದಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.