ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಮಾತನಾಡುವುದೇ ರೋಮಾಂಚನ: ಆಂಧ್ರಪ್ರದೇಶ ಸಚಿವ ಕಾಕನಿ ಗೋವರ್ಧನ ರೆಡ್ಡಿ

ಆಂಧ್ರಪ್ರದೇಶ ಕೃಷಿ ಮತ್ತು ಸಹಕಾರ ಸಚಿವ ಕಾಕನಿ ಗೋವರ್ಧನ ರೆಡ್ಡಿ ಅನಿಸಿಕೆ
Last Updated 22 ಮೇ 2022, 2:57 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಇಂದು ಬಂದು ನಾಳೆ ಹೋಗುವ ಅಧಿಕಾರಕ್ಕಿಂತ ನಾವು ರೂಢಿಸಿಕೊಂಡ ವ್ಯಕ್ತಿತ್ವವೇ ಬದುಕಿನಲ್ಲಿ ಎಂದೆಂದಿಗೂ ಶಾಶ್ವತ’ ಎಂದು ಆಂಧ್ರಪ್ರದೇಶ ಕೃಷಿ ಮತ್ತು ಸಹಕಾರ ಸಚಿವ ಕಾಕನಿ ಗೋವರ್ಧನ ರೆಡ್ಡಿ ಹೇಳಿದರು.

ನಗರದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಜಾಗತಿಕ ಹಳೆಯ ವಿದ್ಯಾರ್ಥಿಗಳ ‘ಸಮ್ಮಿಲನ - ನೆನಪಿನ ಅಂಗಳ 2022’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವ್ಯಕ್ತಿಯ ಉನ್ನತಿಕರಣದಲ್ಲಿ ಶಿಕ್ಷಕರ ಹಾಗೂ ವಿದ್ಯಾ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಅಂತಹ ಅದ್ಭುತ ಸ್ಪಂದನೆ ನನಗೆ ಕಲಿಸಿದ ಶಿಕ್ಷಕರಿಂದ, ವಿದ್ಯಾಸಂಸ್ಥೆಗಳಿಂದ ದೊರೆತಿದ್ದರಿಂದಲೇ ಯಶಸ್ಸಿನ ಹಾದಿಯೆಡೆಗೆ ಸಾಗಲು ನನಗೆ ಸಾಧ್ಯವಾಯಿತು’ ಎಂದು ಹೇಳಿದರು.

‘ಇತರರ ಕೈ ಕೆಳಗೆ ಕೆಲಸ ಮಾಡಲು ಇಚ್ಛೆಯಾಗದೇ ಸಿವಿಲ್ ಕನ್ಸಲ್ಟೆಂಟ್ ಆಗಿ ಸ್ವಂತ ಉದ್ಯಮ ಪ್ರಾರಂಭಿಸಿದೆ. ಅನೇಕ ಸವಾಲುಗಳ ನಂತರ ಉತ್ತಮ ಉದ್ಯಮಿಯಾಗಿ ಹೊರಹೊಮ್ಮಿದೆ. ನಂತರ ರಾಜಶೇಖರ ರೆಡ್ಡಿ ಅವರ ನಾಯಕತ್ವದಲ್ಲಿ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದೆ. ಪ್ರಸ್ತುತ ಜಗನ್ ಮೋಹನ್ ರೆಡ್ಡಿ ಅವರ ಸಂಪುಟದ ಅತಿ ಸೂಕ್ಷ್ಮ ಇಲಾಖೆಯಾದ ಕೃಷಿ ಮತ್ತು ಸಹಕಾರ ಸಚಿವನಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಕೃಷಿಯಾಧಾರಿತ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣ ಸಂದಾಯವಾಗುವ ವ್ಯವಸ್ಥೆಯನ್ನು ಆಂಧ್ರಪ್ರದೇಶ ಸರ್ಕಾರ ಅನುಷ್ಠಾನಗೊಳಿಸಿದೆ’ ಎಂದು ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

‘ಶಿವಮೊಗ್ಗ ಜಿಲ್ಲೆ ಎಂದರೆ ನನಗೆ ಭಾವನಾತ್ಮಕ ನಂಟು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಇಲ್ಲಿ ಕಳೆದ ಅನೇಕ ಕ್ಷಣಗಳು ಅವಿಸ್ಮರಣೀಯ. ಶಿವಮೊಗ್ಗ ಪ್ರವೇಶಿಸಿದಾಗ ಒಮ್ಮೆಲೇ ಹೃದಯ ತುಂಬಿ ಬಂದಿತ್ತು. ಎಚ್.ಪಿ.ಸಿ., ವೀರಭದ್ರೇಶ್ವರ ಟಾಕೀಸ್, ಗುರು ರಾಘವೇಂದ್ರ ದೇವಾಲಯ, ವೆಂಕಟೇಶ್ವರ ನಿಲಯದ ಹಳೆಯ ರೂಂ, ಮೀನಾಕ್ಷಿ ಭವನದ ಬೆಣ್ಣೆ ದೋಸೆ, ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ಎಂದೆದಿಗೂ ಮರೆಯಲಾಗದು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದ ಸಚಿವರು: ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದ ಸಚಿವರುಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಕನ್ನಡದಲ್ಲಿ ಮಾತನಾಡುವಾಗ ಒಂದು ರೀತಿಯ ರೋಮಾಂಚನವಾಗುತ್ತಿದೆ. ಕನ್ನಡದ ಹಳೆಯ ಹಾಡುಗಳು ಮನಸ್ಸಿನಲ್ಲಿ ಸದಾ ಗುನುಗುತ್ತಿರುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಒಂದು ಸಾವಿರ ಜನ ಆಸನ ಸಾಮರ್ಥ್ಯವಿರುವ ಹಳೆಯ ವಿದ್ಯಾರ್ಥಿಗಳ ಸಭಾಂಗಣಕ್ಕೆ ವೈಯುಕ್ತಿಕವಾಗಿ ₹ 5 ಲಕ್ಷ ಸಹಾಯಧನ ಘೋಷಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಏಳು ಜನ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಡಿ.ಎಸ್. ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್. ನಾಗರಾಜ, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸುಧೀರ್, ಕುಲಸಚಿವ ಪ್ರೊ.ಹೂವಯ್ಯಗೌಡ, ಪ್ರಾಂಶುಪಾಲ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಸುರೇಂದ್ರ, ಉಪಾಧ್ಯಕ್ಷ ರಾಜೇಂದ್ರ ಪ್ರಸಾದ್, ಕಾರ್ಯದರ್ಶಿ ಡಾ.ಕೆ.ಎಂ. ಬಸಪ್ಪಾಜಿ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT