ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲ್ಕುಂದ: ಅಕ್ವಾಡಕ್ಟ್ ಕಾಮಗಾರಿ ಪೂರ್ಣ

ಹೊಲಗಳಿಗೆ ಭದ್ರಾ ನೀರು ಇಂದಿನಿಂದ
Last Updated 1 ನವೆಂಬರ್ 2022, 6:18 IST
ಅಕ್ಷರ ಗಾತ್ರ

ಶಿವಮೊಗ್ಗ: ದಾವಣಗೆರೆ ತಾಲ್ಲೂಕಿನ ನಲ್ಕುಂದದ ಬಳಿ ಮಳೆಯಿಂದ ಕುಸಿದಿದ್ದ ಅಕ್ವಾಡಕ್ಟ್‌ನ ಮರು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಂಗಳವಾರದಿಂದ ಭದ್ರಾ ಕಾಲುವೆಯಲ್ಲಿ ನೀರು ಹರಿಯಲಿದೆ.

ಇದರಿಂದ ಕಳೆದೊಂದು ತಿಂಗಳು ಭತ್ತದ ಗದ್ದೆಗಳಿಗೆ ನೀರು ಹರಿಯದೇ ಆತಂಕಗೊಂಡಿದ್ದ ಆ ಭಾಗದ ರೈತಾಪಿ ವರ್ಗ ನಿಟ್ಟುಸಿರು ಬಿಟ್ಟಿದೆ. ಕೊಚ್ಚಿ ಹೋಗಿದ್ದಅಕ್ವಾಡೆಕ್ಟ್ ಸರಿಯಾಗಿ ತಿಂಗಳ ಅವಧಿಗೆ ಮತ್ತೆ ನೀರು ಹರಿಸಲು ಸಿದ್ಧವಾಗಿದೆ.

‘ಭತ್ತ ವಡೆ (ಗೊನೆ) ಬಿಚ್ಚುತ್ತಿದೆ. ಕಳೆದೊಂದು ವಾರದಿಂದ ಮಳೆ ಬಿಡುವು ಕೊಟ್ಟು ಬಿಸಿಲು ಆವರಿಸಿರುವುದರಿಂದ ಗದ್ದೆಗಳ ನೆಲ ಒಣಗಿತ್ತು. ನೀರಿನ ಕೊರತೆ ಆಗಿ ಭತ್ತ ಜಳ್ಳಾಗುವ ಸಂಭವವಿತ್ತು. ಹೀಗಾಗಿ ಕೆಲಸ ಬೇಗನೇ ಮುಗಿದು ಕಾಲುವೆಗೆ ನೀರು ಹರಿಯಲಿ ಎಂದು ಪ್ರಾರ್ಥಿಸಿದ್ದೆವು. ಅದು ಫಲ ನೀಡಿದೆ’ ಎಂದು ದಾವಣಗೆರೆ ತಾಲ್ಲೂಕು ಬಾಡ ಗ್ರಾಮದ ಕೃಷಿಕ ಜೆ.ವೈ. ಆರುಣ್‌ಕುಮಾರ ಹರ್ಷ ವ್ಯಕ್ತಪಡಿಸಿದರು.

ಸಮರೋಪಾದಿ ಕೆಲಸ: ‘ಅಕ್ವಾಡಕ್ಟ್ ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದೆವು. ದಾವಣಗೆರೆ ಮೂರು ಉಪವಿಭಾಗದ ತಲಾ ಇಬ್ಬರು ಎಇಇಗಳಿಗೆ ದಿನಕ್ಕೆ ಎರಡು ಪಾಳಿಯಲ್ಲಿ ಉಸ್ತುವಾರಿ ವಹಿಸಿದ್ದೆವು. ವಿಜಯಪುರ ಜಿಲ್ಲೆ ಸಿಂದಗಿಯಿಂದ ಬಂದಿದ್ದ ಕೆಲಸಗಾರರು ಹಗಲು–ರಾತ್ರಿ ಎನ್ನದೇ ಸಮರೋಪಾದಿಯಲ್ಲಿ ಕೆಲಸ ಮಾಡಿದರು. ಆರಂಭದಲ್ಲಿ ಮಳೆ ಹೆಚ್ಚಿದ್ದರಿಂದ ಕೆಲಸಕ್ಕೆ ಸ್ವಲ್ಕ ಹಿನ್ನಡೆ ಆಗಿತ್ತು. ನಂತರ ಸಮಸ್ಯೆ ಪರಿಹಾರವಾಯಿತು’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮೊದಲು ಅಕ್ವಾಡೆಕ್ಟ್‌ ಕಲ್ಲಿನ ಗೋಡೆಯಿಂದ ನಿರ್ಮಾಣವಾಗಿತ್ತು. ಅದರೊಳಗೆ ನೀರು ಹೋಗಿ ಸಡಿಲಗೊಂಡು ಕುಸಿದಿತ್ತು. ದೀರ್ಘ ಕಾಲ ಬಾಳಿಕೆ ಬರಲು ಈ ಬಾರಿ ಕಾಂಕ್ರೀಟ್‌ನ ಗೋಡೆ ಕಟ್ಟಿದ್ದೇವೆ. ರೆಡಿಮಿಕ್ಸ್ ಕಾಂಕ್ರೀಟ್ ತರಿಸಿ ಕಾಮಗಾರಿ ಕೈಗೊಂಡಿದ್ದರಿಂದ ಕಾಮಗಾರಿ ತುರ್ತಾಗಿ ಪೂರ್ಣಗೊಳ್ಳಲು ನೆರವಾಯಿತು’ ಎಂದು ಮಂಜುನಾಥ್ ಹೇಳಿದರು.

ಅಕ್ವಾಡಕ್ಟ್ ಸಿದ್ಧವಾಗಿರುವುದರಿಂದ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿಯ ಅಚ್ಚುಕಟ್ಟು ಪ್ರದೇಶ, ಹರಿಹರ, ಹರಪನಹಳ್ಳಿ, ದಾವಣಗೆರೆ ಭಾಗದ ಶಾಖಾ ಕಾಲುವೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶ ಹಾಗೂ ದಾವಣಗೆರೆ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದಂತೆ ಆಗಿದೆ.

ದಾವಣಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅ. 1ರಂದು ಸುರಿದ ಭಾರಿ ಮಳೆಯಿಂದ ಭದ್ರಾ ಬಲದಂಡೆ ನಾಲೆಯ ದಾವಣಗೆರೆ ಶಾಖಾ ಕಾಲುವೆಯ 35.50 ಕಿ.ಮೀ ನಲ್ಲಿ ಬರುವ ನಲ್ಕುಂದ ಗ್ರಾಮದ ಸಮೀಪ ಅಕ್ವಾಡಕ್ಟ್‌ನ ರಕ್ಷಣಾ ತಡೆಗೋಡೆ ಸೇರಿದಂತೆ ಕಾಲುವೆಯ ಕೊನೆ ಭಾಗದ ಸೇತುವೆ ಸಂಪೂರ್ಣ ಕೊಚ್ಚಿ
ಹೋಗಿತ್ತು.

ನೀರಿನ ಪ್ರಮಾಣ ಹೆಚ್ಚಳ

ಅಕ್ವಾಡಕ್ಟ್ ಸಿದ್ಧವಾಗುತ್ತಿದ್ದಂತೆಯೇ ಭದ್ರಾ ಜಲಾಶಯದಿಂದ ಕಾಲುವೆಗೆ ಹರಿಸುವ ನೀರಿನ ಪ್ರಮಾಣವೂ ಹೆಚ್ಚಳಗೊಂಡಿದೆ. ಈ ಮೊದಲು ಕಾಲುವೆ 1,500 ಕ್ಯುಸೆಕ್‌ ನೀರು ಹರಿಸಲಾಗುತ್ತಿತ್ತು. ಸೋಮವಾರದಿಂದ ಆ ಪ್ರಮಾಣ 1,700 ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ‘ಪ್ರಜಾವಾಣಿ‘ಗೆ ತಿಳಿಸಿದರು.

ಸಮರೋ‍ಪಾದಿಯಲ್ಲಿ ಕೆಲಸ ಮಾಡಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಭದ್ರಾ ಕಾಲುವೆಯ ಉಳಿದೆಡೆಯೂ ಶಿಥಿಲಗೊಂಡ ಸೇತುವೆ, ಅಕ್ವಾಡಕ್ಟ್‌ಗಳ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

-ಪವಿತ್ರಾ ರಾಮಯ್ಯ,ಭದ್ರಾ ಕಾಡಾ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT