ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ಸಿಗರಿಗೆ ಅತೃಪ್ತಿ: ಬಿಎಸ್‌ವೈ ಟೀಕೆ

Published 13 ಜನವರಿ 2024, 10:07 IST
Last Updated 13 ಜನವರಿ 2024, 10:07 IST
ಅಕ್ಷರ ಗಾತ್ರ

ಶಿವಮೊಗ್ಗ: 'ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವುದನ್ನು ಇಡೀ ವಿಶ್ವ ಗಮನಿಸುತ್ತಿದೆ. ಆದರೆ ಕಾಂಗ್ರೆಸ್‌ನವರಿಗೆ ಅಸಮಾಧಾನ, ಅತೃಪ್ತಿ ಉಂಟಾಗಿದೆ' ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನ ಶ್ರೀರಾಮ ಮಂದಿರದ ವಿಚಾರದಲ್ಲಿ ದೈನಂದಿನ ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ. ಆದರೆ ಮಂದಿರ ನಿರ್ಮಾಣದ ವಿಚಾರ ಬಿಜೆಪಿಯವರಿಗೆ ರಾಜಕೀಯವಾಗಿ ಅನುಕೂಲ ಆಗಬಹುದು ಎಂಬ ಭಯ ಕಾಂಗ್ರೆಸ್‌ನವರಿಗೆ ಕಾಡುತ್ತಿದೆ ಎಂದು ಕುಟುಕಿದರು.

'ಶ್ರೀರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡುವ ವೇಳೆ ಸರ್ವ ಪಕ್ಷದವರು ಬಂದು ಪಾಲ್ಗೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿಯೊಬ್ಬರು ಉಪವಾಸ ಇದ್ದು, ಧಾರ್ಮಿಕ ಸೇವೆ ಮಾಡುತ್ತಿದ್ದಾರೆ. ಇನ್ನಾದರೂ‌ ಕಾಂಗ್ರೆಸ್‌ನವರಿಗೆ ಸದ್ಬುದ್ದಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿ. ಇಲ್ಲದಿದ್ದರೆ ಜನ ಅವರ ನಡವಳಿಕೆ ಸಹಿಸಲ್ಲ. ಇದರಿಂದ ಅವರಿಗೆ ತೊಂದರೆ ಆಗಲಿದೆ' ಎಂದರು.

'ಅಯೋಧ್ಯೆಗೆ ಜನವರಿ 22ರ ನಂತರ ಹೋಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹೋಗಿ ಬಂದರೆ ಒಳ್ಳೆಯದು, ಅನುಕೂಲ ಆಗುತ್ತದೆ. ಅದು ಅವರಿಗೆ ಬಿಟ್ಟ ವಿಚಾರ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭು ಹೆಸರು ನಾಮಕರಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, 'ನಾನು ಅದರ ಬಗ್ಗೆ ಏನೂ ಟೀಕೆ ಟಿಪ್ಪಣಿ ಮಾಡಲ್ಲ. ಒಳ್ಳೆಯ ಕೆಲಸ ಯಾರು ಮಾಡಿದರೂ ಒಳ್ಳೆಯದು. ಎಲ್ಲರೂ ಸೇರಿ ಮಾಡಲಿ' ಎಂದು ಸಲಹೆ ನೀಡಿದರು.

'ಶ್ರೀರಾಮ ಎಲ್ಲರಿಗೂ ಬೇಕಾಗಿರುವಂತಹವನು. ಹೀಗಾಗಿ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲಾ ವರ್ಗದ ಜನರು ಸಹಕಾರ ಕೊಡುತ್ತಿದ್ದಾರೆ' ಎಂದರು.

'ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡೊಲ್ಲ. ಒಳ್ಳೆಯ ಕೆಲಸ ಯಾರು ಮಾಡಿದರೂ ಸ್ವಾಗತ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರ ಪ್ರವಾಸ ಆರಂಭವಾಗಿದೆ. ವಿಜಯೇಂದ್ರ‌ ಅಧ್ಯಕ್ಷರಾದ ಮೇಲೆ ರಾಜ್ಯದ ಎಲ್ಲಾ ಕಡೆ ಓಡಾಟ ಮಾಡಿ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಕಾರ್ಯಕರ್ತರಿಂದಲೂ ಒಳ್ಳೆಯ ಬೆಂಬಲ ಸಿಗುತ್ತಿದೆ' ಎಂದರು.

'ಶೀಘ್ರ ನಾನು ಸಹ ದಿನಕ್ಕೆ ಎರಡು ಜಿಲ್ಲೆಯಂತೆ ಪ್ರವಾಸ ಮಾಡುತ್ತೇನೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT