ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔಷಧ ನೀಡುವುದಷ್ಟೇ ಆಯುರ್ವೇದ ಅಲ್ಲ

ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅಭಿಮತ
Last Updated 3 ಅಕ್ಟೋಬರ್ 2022, 5:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಯುರ್ವೇದ ವೈದ್ಯಕೀಯ ಪದ್ಧತಿ ರೋಗಿಗೆ ಔಷಧ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಜೀವನ ಶೈಲಿಯನ್ನು ಬದಲಿಸಿ ರೋಗಗಳಿಂದ ದೂರವಿರುವಂತೆ ಪ್ರತಿಪಾದಿಸುವ ತತ್ವ ಸಿದ್ಧಾಂತ ಎಂದು ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅಭಿಪ್ರಾಯಪಟ್ಟರು.

ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್‌ ಚಿನ್ಮೂಲಾದ್ರಿ, ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಯುರ್ವೇದ ಜ್ಞಾನಯಾನ’ ಕಾರ್ಯಕ್ರಮದಲ್ಲಿ ‘ಸಂಸ್ಕೃತಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ದೈಹಿಕ ಶಕ್ತಿ ತಲೆಮಾರು ಉರುಳಿದಂತೆ ಕುಗ್ಗುತ್ತ ಸಾಗುತ್ತದೆ. ದೇಹದ ಪ್ರತಿ ಸಮಸ್ಯೆಗೂ ಔಷಧ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರಬರುವ ಅವಕಾಶ ಇರುವುದು ಆಯುರ್ವೇದದಲ್ಲಿ ಮಾತ್ರ. ಇದಕ್ಕೆ ಜೀವನ ಶೈಲಿ ಬದಲಾಗಬೇಕು’ ಎಂದು ಪ್ರತಿಪಾದಿಸಿದರು.

‘ಆಯುರ್ವೇದ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಹಣದ ಹಿಂದೆ ಓಡಬಾರದು. ಆಯುರ್ವೇದ ವೈದ್ಯಕೀಯ ಶಿಕ್ಷಣದಲ್ಲಿ ಆಳ ಜ್ಞಾನ ಪಡೆಯಲು ಪ್ರಯತ್ನಿಸಬೇಕು. ಆಯುರ್ವೇದದ ಮೂಲಕ ಭಾರತವು ವಿಶ್ವಗುರು ಆಗಲು ಸಾಧ್ಯವಿದೆ. ಯಾವ ಆಹಾರವನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಂಬ ಜ್ಞಾನವನ್ನು ಪ್ರತಿಯೊಬ್ಬರು ಹೊಂದಿದರೆ ಒಳಿತು’ ಎಂದರು.

‘ಹಾಲು ದೇಹಕ್ಕೆ ಉತ್ತಮ ಆಹಾರವಾದರೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಮಸ್ಯೆ ಸೃಷ್ಟಿಯಾಗುತ್ತವೆ. ಅಜೀರ್ಣ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಮುಪ್ಪನ್ನು ದೂರ ಮಾಡುವ ಶಕ್ತಿ ಎಳ್ಳೆಣ್ಣೆಯಲ್ಲಿದೆ. ನಿತ್ಯ ಸ್ನಾನಕ್ಕೆ ಬಳಕೆ ಮಾಡಿದರೆ ಸುಂದರವಾಗಿ ಕಾಣಲು ಸಾಧ್ಯವಿದೆ’ ಎಂದು
ಹೇಳಿದರು.

ಆಯುಷ್ ಟಿವಿ ಸ್ಥಾಪಕ ನಿರ್ದೇಶಕ ಎಂ.ಹರಿಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್‌ನ ಗಾಯತ್ರಿ ಶಿವರಾಂ, ಅಮೃತ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಪ್ರಶಾಂತ್, ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT