ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ: ‘ಜನ ನಾಯಕ‘ ಬಂಗಾರಪ್ಪ ವ್ಯಕ್ತಿತ್ವದ ಸ್ಮರಣೆ

ಸೊರಬದಲ್ಲಿ ‘ಬಂಗಾರಧಾಮ‘ ಲೋಕಾರ್ಪಣೆ; ಒಡನಾಡಿಗಳಿಂದ ಸಾಧನೆಗಳ ಮೆಲುಕು
Published 26 ಡಿಸೆಂಬರ್ 2023, 18:57 IST
Last Updated 26 ಡಿಸೆಂಬರ್ 2023, 18:57 IST
ಅಕ್ಷರ ಗಾತ್ರ

ಸೊರಬ : ಇಲ್ಲಿನ ಶಿರಾಳಕೊಪ್ಪ ರಸ್ತೆಯ ಕೆ.ಇ.ಬಿ ಕಾಲೊನಿಯಲ್ಲಿ ನಿರ್ಮಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ಅವರ ಪತ್ನಿ ಶಕುಂತಲಾ ಅವರ ಸಮಾಧಿ ಸ್ಥಳ ‌‘ಬಂಗಾರಧಾಮ’ದ ಲೋಕಾರ್ಪಣೆ ಹಾಗೂ ಬಂಗಾರಪ್ಪ ಅವರ 12ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಬಂಗಾರಪ್ಪ ಫೌಂಡೇಷನ್ ಹಾಗೂ ವಿಚಾರ ವೇದಿಕೆಯು ಆಯೋಜಿಸಿದ್ದ ಸಮಾರಂಭಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು, ಒಡನಾಡಿಗಳು ಹಾಗೂ ಗಣ್ಯರು ಸಾಕ್ಷಿಯಾದರು.

ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಬಂಗಾರಪ್ಪ ಹಾಗೂ ಶಕುಂತಲಾ ಅವರ ಸಮಾಧಿಗಳಿಗೆ ಪುಷ್ಪ ಅರ್ಪಿಸಿ ಪುಣ್ಯಸ್ಮರಣೆಗೆ  ಚಾಲನೆ ನೀಡಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ‘ಯಾರ ನೆರವೂ ಪಡೆಯದೇ ಕುಟುಂಬದ ಸಹಕಾರದಿಂದಲೇ ಸ್ಮಾರಕ (ಬಂಗಾರಧಾಮ) ನಿರ್ಮಿಸಲು ಸಂಕಲ್ಪ ಮಾಡಿದ್ದೆವು. ಆದ್ದರಿಂದ ಅದು ಪೂರ್ಣಗೊಳ್ಳಲು 12 ವರ್ಷ ಬೇಕಾಯಿತು. ಈ ಕಾರ್ಯ ತಡವಾಗಿದ್ದಕ್ಕೆ ಬಂಗಾರಪ್ಪ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರ ಕ್ಷಮೆಯಾಚಿಸುತ್ತೇನೆ' ಎಂದರು.

‘ರಾಜಕೀಯ ಬದುಕಿನುದ್ದಕ್ಕೂ ಬಂಗಾರಪ್ಪ ಉತ್ತರ ಕರ್ನಾಟಕದ ನಾಯಕ ಆಗಿದ್ದರು. ತುಂಗಭದ್ರೆಯಿಂದ ಕೃಷ್ಣೆಯ ನಾಡಿನವರೆಗೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದರು. ಉಳುವವನಿಗೆ ಭೂಮಿ ಹೋರಾಟದ ಮೂಲಕ ಸಮಾಜವಾದಿ ಬಂಗಾರಪ್ಪ ಎಂದೇ ಜನಜನಿತರಾಗಿದ್ದರು. ಸರ್ಕಾರ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು' ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

‘ಬಂಗಾರಪ್ಪ ಅವರಿಗೆ ಜನರ ಭಾಷೆ ಹಾಗೂ ಭಾವನೆ ಅರ್ಥವಾಗುತ್ತಿತ್ತು. ಹೀಗಾಗಿಯೇ ಅವರು ಜನರ ನಾಯಕರಾಗಿದ್ದರು. ಅವರು ಪಕ್ಷ ಸೇರಿದ್ದರಿಂದ, ಜೆಡಿಯು ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ 40ರ ಆಸುಪಾಸಿನಲ್ಲಿ ಇರುತ್ತಿದ್ದ ಬಿಜೆಪಿ ಶಾಸಕರ ಸಂಖ್ಯೆ 80 ದಾಟಿತ್ತು' ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸ್ಮರಿಸಿದರು.

‘ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಬಿಜೆಪಿಯಿಂದ ಆಗಾಗ ನಡೆಯುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಬಂಗಾರಪ್ಪ ಅವರು ಬಿಜೆಪಿ ಬಿಟ್ಟು ಹೋದರು’ ಎಂದು ಹೇಳಿದರು. 

ಕಾರ್ಯಕ್ರಮಕ್ಕೂ ಮುನ್ನ ಬಂಗಾರಧಾಮದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ, ಬಂಗಾರಪ್ಪ ನಡೆದು ಬಂದ ಹಾದಿಯ ಬಗ್ಗೆ ವಿಡಿಯೊ ಪ್ರದರ್ಶಿಸಲಾಯಿತು. ಕಲಾವಿದ ಅನೀಶ್ ರವಿಶಂಕರ್ ಅವರಿಂದ ವಯಲಿನ್ ವಾದನ, ಅಂಗವಿಕಲ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT