ಶನಿವಾರ, ಜನವರಿ 22, 2022
16 °C
ಅಕ್ರಮ ಗೋ ಸಾಗಣೆ ತಡೆಗೆ ಯತ್ನಿಸಿದ ಸಹೋದರರಿಗೆ ಗಂಭೀರ ಗಾಯ

ಬೆಜ್ಜವಳ್ಳಿ: ದನಗಳ್ಳರ ಹಿಟ್ ಅಂಡ್ ರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ತಾಲ್ಲೂಕಿನ ಬೆಜ್ಜವಳ್ಳಿ ಬಳಿ ಅಕ್ರಮವಾಗಿ ಜಾನುವಾರು ಸಾಗಣೆ ತಡೆಯಲು ಯತ್ನಿಸಿದ ಸಹೋದರರ ಮೇಲೆ ಜಾನುವಾರು ಕಳ್ಳರು ವಾಹನ ಹತ್ತಿಸಿ ಪರಾರಿಯಾಗಿದ್ದಾರೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣ ಸಮೀಪದ ಕಿತ್ತನಗದ್ದೆ ಗ್ರಾಮದ ಚರಣ್ (24), ಕಿರಣ್ (23) ಗಾಯಗೊಂಡವರು. ಮೇಳಿಗೆಯಿಂದ ಗೋವುಗಳ ಸಾಗಣೆ ವಿಷಯ ತಿಳಿದು ಬುಲೆಟ್ ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ವಿಷಯ ತಿಳಿದ ಜಾನುವಾರು ಕಳ್ಳರು ಬೆಜ್ಜವಳ್ಳಿಯ ಸಮೀಪ ಬೈಕ್ ಸವಾರರ ಮೇಲೆ ವಾಹನ ಚಲಾಯಿಸಿ ಪರಾರಿಯಾಗಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಸಾರ್ವಜನಿಕರು ಘಟನಾ ಸ್ಥಳದಿಂದ ಪರಾರಿಯಾಗುತ್ತಿದ್ದ ಶಿವಮೊಗ್ಗ ನಗರದ ನವೀದ್ (27) ನನ್ನು ಹಿಡಿದು ಮಾಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಗೋವುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಮಾಳೂರು ಠಾಣೆ ವಶದಲ್ಲಿದ್ದು, ಪ್ರಕರಣ ದಾಖಲಾಗಿದೆ.

ಮಾಹಿತಿ ಬಹಿರಂಗವಾಗುತ್ತಿದ್ದಂತೆ ತಾಲ್ಲೂಕು ಜೆಸಿ ಆಸ್ಪತ್ರೆಯ ಮುಂದೆ ನೂರಾರು ಜನ ಜಮಾಯಿಸಿದರು. ಅಕ್ರಮ ಗೋವು ಸಾಗಣೆ ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದರು. ಆಸ್ಪತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ, ಭಜರಂಗದಳದ ಮುಖಂಡರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಗೃಹ ಸಚಿವರ ಕ್ಷೇತ್ರದಲ್ಲಿ ಗೋ ಸಾಗಣೆ ದಂಧೆ: ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲೇ ಜಾನುವಾರು ಅಕ್ರಮ ಸಾಗಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನಿರಂತರ ಪೊಲೀಸ್ ರಸ್ತೆ ಬೀಟ್ ವ್ಯವಸ್ಥೆ ಇದ್ದರೂ ಲೋಪ ಬಹಿರಂಗಗೊಂಡಿದೆ. ಸಿಸಿಟಿವಿ
ಕ್ಯಾಮೆರಾಗಳಲ್ಲಿ ಗೋವು ಕಳ್ಳತನ ಪ್ರಕರಣ ಬಯಲಾಗಿದ್ದರೂ ಆರೋಪಿಗಳನ್ನು ಹಿಡಿಯುವ ಕೆಲಸ ಆಮೆ ವೇಗದಲ್ಲಿ ನಡೆಯುತ್ತಿದೆ’ ಎಂಬ ಆರೋಪ ಕೇಳಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು