ಶನಿವಾರ, ಸೆಪ್ಟೆಂಬರ್ 25, 2021
22 °C
ನೀರಗಂಟಿಗಳಿಗೆ ವೇತನ ನೀಡಿ: ತೇಜಸ್ವಿ ಪಟೇಲ್‌

ಭದ್ರಾ ಜಲಾಶಯ: ನದಿಗೆ 7,600 ಕ್ಯುಸೆಕ್‌ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಉತ್ತಮ ಮಳೆಯಾಗುತ್ತಿರುವ ಪರಿಣಾಮ ಭದ್ರಾ ಜಲಾಶಯದಿಂದ 7,600 ಕ್ಯುಸೆಕ್‌ ನೀರನ್ನು ನದಿಗೆ
ಹರಿಸಲಾಗುತ್ತಿದೆ.

ಬುಧವಾರ ಬೆಳಿಗ್ಗೆ 2,471 ಕ್ಯುಸೆಕ್‌ ಇದ್ದ ಒಳ ಹರಿವು ಮಧ್ಯಾಹ್ನದ ವೇಳೆಗೆ ಏರಿಕೆ ಕಂಡಿತ್ತು. ಹೀಗಾಗಿ, ಕ್ರಸ್ಟ್‌ ಗೇಟ್‌ ತೆರೆದು 3,300 ಕ್ಯುಸೆಕ್ ನದಿಗೆ ಹರಿಸಲಾಯಿತು. ಸಂಜೆಯ ವೇಳೆಗೆ ಒಳಹರಿವು ಮತ್ತಷ್ಟು ಹೆಚ್ಚಾದ ಕಾರಣ 6,600 ಕ್ಯುಸೆಕ್ ಹಾಗೂ ಬೆಡ್‌ ಮೂಲಕ 1 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು.

186 ಅಡಿ ಗರಿಷ್ಠ ಮಟ್ಟ ಇರುವ ಜಲಾಶಯದಲ್ಲಿ ಪ್ರಸ್ತುತ 185.3 ಅಡಿ ನೀರು ಸಂಗ್ರಹವಿದ್ದು, ಒಳ ಹರಿವು ಹೆಚ್ಚಾದರೆ ಮತ್ತಷ್ಟು ನೀರನ್ನು ನದಿಗೆ ಹರಿಸಲಾಗುವುದು ಎಂದು ಎಂಜಿನಿಯರ್ ಸತೀಶ್ ಮಾಹಿತಿ ನೀಡಿದರು.

ವೇತನ ನೀಡಲು ಆಗ್ರಹ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರಗಂಟಿಗಳಿಗೆ ಸಕಾಲಕ್ಕೆ ವೇತನ ನೀಡಬೇಕು. ಟೆಂಡರ್ ಪದ್ಧತಿ ರದ್ದು ಮಾಡಿ ನೀರು ಬಳಕೆದಾರರ ಸಂಘಗಳಿಗೆ ಅವರ ಜವಾಬ್ದಾರಿ ನೀಡಬೇಕು ಎಂದು ರೈತ ಮುಖಂಡ ತೇಜಸ್ವಿ ಪಟೇಲ್
ಒತ್ತಾಯಿಸಿದರು.

ನೀರು ಬಳಕೆದಾರರ ಸಹಕಾರ ಒಕ್ಕೂಟಗಳ ಮಹಾಮಂಡಲದ ನಿಯೋಗ ಬುಧವಾರ ‘ಕಾಡಾ’ ನೂತನ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸುಮಾರು 400 ನೀರಗಂಟಿಗಳು ಇದ್ದಾರೆ. ಅವರಿಗೆ ಸಕಾಲಕ್ಕೆ ವೇತನ ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಗಮನ ಸೆಳೆದರು.

ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆ ಪದ್ಧತಿಯ ಬದಲಾವಣೆಯಾಗಬೇಕು. ಬೆಳೆಗಳಿಗೆ‌ ಅಗತ್ಯವಿರುವ ನೀರಿನ ಪ್ರಮಾಣ ಕಡಿಮೆ ಮಾಡಲು ಚಿಂತನೆ ನಡೆಸಬೇಕು. ಜಲಾಶಯ ಭರ್ತಿಯಾದ ನಂತರ ಸಲಹಾ ಸಮಿತಿ ಸಭೆ ಕರೆಯುವ ಬದಲು ಮೊದಲೇ ಸಭೆ ಕರೆದು ಯೋಜನೆ ರೂಪಿಸಬೇಕು. ನೀರು ದುರ್ಬಳಕೆ, ನೀರು ಪೋಲು ತಡೆಯಬೇಕು ಎಂದು ಸಲಹೆ ನೀಡಿದರು. 

ಭದ್ರಾ ಅಚ್ಚುಕಟ್ಟು ನೀರು ಬಳಕೆದಾರರ ಸಹಕಾರ ಒಕ್ಕೂಟಗಳ ಮಹಾಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಉಪಾಧ್ಯಕ್ಷ ಶ್ರೀನಿವಾಸ್, ಸಲಹಾ ಸಮಿತಿ ಸದಸ್ಯರಾದ ಎಚ್‌.ಆರ್.ಬಸವರಾಜಪ್ಪ,  ಗಿರೀಶ್ ಮುದ್ದೆಗೌಡರು,  ಕೃಷಿಕ ಸಮಾಜದ ರಾಜ್ಯ ಅಧ್ಯಕ್ಷರಾದ ಮಹೇಂದ್ರನಾಥ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು